2024ರ ಸಂಭಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಲ್ಲಾ ಅಫ್ರೋಜ್ ವಿರುದ್ಧ ಜಾರಿಗೆಗೊಳಿಸಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ತಡೆಜ್ಞಾಪಕ ಬಂಧನವನ್ನು (Preventive Detention) ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದೇ ವೇಳೆ ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಸರ್ಕಾರವನ್ನು ತರಾಟಗೆ ತೆಗೆದುಕೊಂಡ ನ್ಯಾಯಾಲಯವು, ಸರ್ಕಾರಕ್ಕೆ 10 ಲಕ್ಷ ರೂ. ದಂಡ ವಿಧಿಸಿದೆ.
ಈ ಹಿಂದೆ, ಅಲಹಾಬಾದ್ ಹೈಕೋರ್ಟ್ ಅಫ್ರೋಜ್ ಅವರ ಎನ್‌ಎಸ್‌ಎ ಬಂಧನವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅಫ್ರೋಜ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಶೀಲ್ ನಾಗು ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದೆ. “ದಬ್ಬಾಳಿಕೆಯ ಅಧಿಕಾರವನ್ನು ಅತ್ಯಂತ ಕಾನೂನುಬಾಹಿರವಾಗಿ ಚಲಾಯಿಸಲಾಗಿದೆ” ಎಂದು ಸರ್ಕಾರವನ್ನು ಟೀಕಿಸಿದೆ.
“ಪೊಲೀಸ್ ಕಸ್ಟಡಿಯಲ್ಲಿ ಪಡೆದುಕೊಂಡ ಹೇಳಿಕೆಯನ್ನು ತಡೆಜ್ಞಾಪಕ ಬಂಧನಕ್ಕೆ ಮೂಲ ಆಧಾರವಾಗಿ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಅಂತಹ ಹೇಳಿಕೆಗಳು ನ್ಯಾಯಾಲಯದ ಕಣ್ಣಿನಲ್ಲಿ ಸಿಂಧುವಾಗುವುದಿಲ್ಲ. ಆಧಾರವೂ ಅಗುವುದಿಲ್ಲ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವಿಚಾರಣ ವೇಳೆ, ಅಫ್ರೋಜ್ ಪರ ವಾದ ಮಂಡಿಸಿದ ವಕೀಲರು, “ಅಫ್ರೋಜ್ ನಿರಪರಾಧಿ, ಪೊಲೀಸರು ನಡೆಸಿದ ಗುಂಡಿನ ಚಕಮಕಿಯಿಂದಲೇ ಸಾವುಗಳು ಸಂಭವಿಸಿವೆ. ಯಾವುದೇ ಪೂರ್ವಗ್ರಹ ಪೀಡಿತ ತನಿಖೆ ಇಲ್ಲದೆ, ಕೇವಲ ಸಾಲು ಸಾಲು ಪ್ರಕರಣಗಳು ದಾಖಲಾಗಿವೆ ಎಂಬ ಒಂದೇ ಕಾರಣಕ್ಕೆ ಸರ್ಕಾರವು ಕಠಿಣ ಎನ್‌ಎಸ್‌ಎ ಕಾಯ್ದೆಯನ್ನು ಅಫ್ರೋಜ್ ಮೇಲೆ ಹೇರಿದೆ” ಎಂದು ವಾದಿಸಿದ್ದರು.
This video cannot be played in your browser. Open the video directly
ಪ್ರತಿವಾದ ಮಂಡಿಸಿದ ಸರ್ಕಾರದ ವಕೀಲರು, “ಅಫ್ರೋಜ್ ಜಾಮೀನಿನ ಮೇಲೆ ಹೊರಬಂದರೆ ಮತ್ತೆ ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಸಾಧ್ಯತೆಯಿದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ” ಎಂದು ವಾದಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ವಜಾಗೊಳಿಸಿ, ಅಫ್ರೋಜ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
2024ರಲ್ಲಿ ಸಂಭಲ್ ನ್ಯಾಯಾಲಯವು ಸಂಭಲ್‌ನ ಶಾಹಿ ಜಾಮಿಯಾ ಮಸೀದಿಯ ಸಮೀಕ್ಷೆ ನಡೆಸಲು ಆದೇಶಿಸಿತ್ತು. ಸಮೀಕ್ಷೆ ನಡೆದ ಬಳಿಕ, ಸಂಭಲ್‌ನಲ್ಲಿ ಹಿಂಸಾಚಾರ ನಡೆದು, ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಈ ಹಿಂಸಾಚಾರದ ಪ್ರಮುಖ ರೂವಾರಿ ಅಫ್ರೋಜ್ ಎಂದು ಆರೋಪಿಸಿ, ಅವರನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ ಅಫ್ರೋಜ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ, ಆತ ಹೊರಬರುವುದನ್ನು ತಡೆಯಲು ಯೋಗಿ ಸರ್ಕಾರವು 2025ರ ಅಕ್ಟೋಬರ್ 13ರಂದು ಆತನ ವಿರುದ್ಧ ಕಠಿಣ ಎನ್‌ಎಸ್‌ಎ ಕಾಯ್ದೆಯನ್ನು ಜಾರಿಗೊಳಿಸಿ ಮತ್ತೆ ಬಂಧನದಲ್ಲಿಟ್ಟಿತ್ತು. ಹೈಕೋರ್ಟ್ ಈ ಬಂಧನ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದರಿಂದ ಅಫ್ರೋಜ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.




