‘ನಾನು ಕಾನೂನು ಉಲ್ಲಂಘಿಸಿ ಏನಾದರೂ ಕೆಲಸ ಮಾಡಿದ್ದರೆ ಕೇಸ್ ಹಾಕಿ. ನನ್ನಿಂದ ಏನೂ ಅಡ್ಡಿಯಿಲ್ಲ. ಎಲ್ಲವೂ ನೋಡಿ ಆಗಿದೆ. ಈಗ ನನ್ನ ಮೇಲೆ ಏನೋ ಕೇಸ್ ಹಾಕಲು ಹೊರಟಿದ್ದಾರೆ. ನನಗೆ ಅದರ ಬಗ್ಗೆ ತಲೆಬಿಸಿ ಇಲ್ಲ. ನನ್ನ ವಿರುದ್ಧ 110ಕ್ಕೂ ಹೆಚ್ಚು ಕೇಸ್ಗಳಿವೆ. ಅದಕ್ಕೆ ಇದೊಂದು ದೊಡ್ಡ ಸಂಗತಿಯಲ್ಲ, ಒಂದು ಕೂದಲಿನ ಹಾಗೆ’ ಎಂದು ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಪೊಲೀಸ್ ನೋಟೀಸ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ, ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಮುಂದುವರಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ನಾನು ಯಾರ ಹತ್ತಿರ ಬೇಕಾದರೂ ಮಾತನಾಡಬಹುದು. ಸಂವಿಧಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ವಾಕ್ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಮಾತನಾಡಿದ್ದೇನೆ. ಮಾತನಾಡಿದ್ದರಲ್ಲಿ ತಪ್ಪೇನು ? ನಾನು ಅವರ ಬಳಿ ಹೋಗಿ ಹೊಡಿ ಎಂದು ಹೇಳಿದ್ದೇನೆಯೇ ? ಕೊಲ್ಲು ಎಂದು ಹೇಳಿದ್ದೇನೆಯೇ ? ಆ ಸಂಭಾಷಣೆ ಅವರಿಗೆ ಸಿಕ್ಕಿಲ್ಲವೇ ? ಸಿಕ್ಕಿದ್ದರೆ ಅದರಲ್ಲಿ ಏನಿತ್ತು ಎಂಬುದನ್ನು ಕೇಳಿ’ ಎಂದರು.
‘ಈ ಆಧಾರದ ಮೇಲೆ ನೀವು ಕೇಸ್ ಹಾಕುವುದಾ? ಹಾಗಾದರೆ ಇನ್ಯಾರೂ ಮಾತನಾಡಬಾರದೆಯೇ? ನೀವು ಭರತ್ ರಾಜ್ ಅವರೊಂದಿಗೆ ಮಾತನಾಡುವುದಿಲ್ಲವೇ?’ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ‘ಪ್ರಭಾಕರ ಭಟ್ಗೆ ಮೈಕ್ ಹಿಡಿದಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಮೇಲೂ ಕೇಸ್ ಹಾಕುವುದಾ? ಏನು ಹುಚ್ಚು ಇದು?’ ಎಂದು ಪ್ರತಿಕ್ರಿಯಿಸಿದರು.
This video cannot be played in your browser. Open the video directly
‘ಈ ರೀತಿಯ ಹುಚ್ಚುತನ ಸ್ವಲ್ಪ ಇಳಿಯಬೇಕು. ಆ ದೃಷ್ಟಿಯಲ್ಲಿ ನಾವು ಯೋಚನೆ ಮಾಡುತ್ತೇವೆ. ಹಿಂದೂ ಸಮಾಜದ ಮೇಲೆ ಈ ರೀತಿ ಹೊಡೆತ ಮಾಡುತ್ತಾ ಹೋದರೆ ಬದುಕುವುದು ಕಷ್ಟವಾಗುತ್ತದೆ. ನಮಗೆ ಇರುವುದು ಒಂದೇ ದೇಶ. ಭಾರತ ಮಾತ್ರ. ನಾವು ಬದುಕಲು ಇರುವಂತಹ ದೇಶ ಇದು. ಇದು ನಮ್ಮ ಪುಣ್ಯಭೂಮಿ, ದೇವಭೂಮಿ. ಈ ಭೂಮಿಯಲ್ಲೇ ನಾವು ಇರಬೇಕು. ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಹಾಗಿರುವಾಗ ನಮ್ಮ ಸ್ವಾತಂತ್ರ್ಯಕ್ಕೆ ಯಾರೂ ಅಡ್ಡಿ ತರಬಾರದು. ನಾವು ಕಾನೂನು ಉಲ್ಲಂಘನೆ ಮಾಡಿದ್ದರೆ ಕೇಸ್ ಹಾಕಿ’ ಎಂದು ಹೇಳಿದರು.
‘ಇವರು ದಿನಾಂಕ ಕೊಟ್ಟು ಕರೆಯುತ್ತಾರೆ. ಕೇವಲ ಫೋನ್ ಮಾಡಿದ ಮಾತ್ರಕ್ಕೆ ಇವರು ಕರೆಯುತ್ತಾರಾ? ಹಾಗಾದರೆ ಇಷ್ಟು ಜನ ನೀವೆಲ್ಲಾ ಫೋನ್ ಮಾಡುತ್ತೀರಲ್ಲ, ಉಳಿದವರು ಫೋನ್ ಮಾಡುತ್ತಾರಲ್ಲ, ನಿಮ್ಮನ್ನೆಲ್ಲಾ ಕರೆಯುತ್ತಾರಾ? ಫೋನ್ ಮಾಡಿದ ತಕ್ಷಣ ಕರೆಯುತ್ತಾರಾ? ಏನು ಹುಚ್ಚು ಇದು? ಕಾನೂನನ್ನು ಉಲ್ಲಂಘನೆ ಮಾಡುವುದು ಅವರೇ. ಅದಕ್ಕೋಸ್ಕರ ಜನ ಅಸಂತುಷ್ಟರಾಗಿದ್ದಾರೆ’ ಎಂದು ಆರೋಪಿಸಿದರು.
‘ನಾವು ಬದುಕುವಂತಹ ದಾರಿ ನೋಡುತ್ತಿದ್ದೇವೆ. ಇಲ್ಲಿ ಯಾರನ್ನೋ ತೆಗಿರಿ, ಯಾರನ್ನೋ ಹೊಡೀರಿ, ಯಾರನ್ನೋ ಬಡೀರಿ ಎಂದು ನಾವು ಹೇಳುವುದಿಲ್ಲ. ನಮಗೆ ರಕ್ಷಣೆ ಕೊಡಿ. ಕಾನೂನಿನ ಪ್ರಕಾರ, ಸಂವಿಧಾನದ ಪ್ರಕಾರ ನಮಗೆ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದರು.
‘ಈಗ ನೋಟಿಸ್ ಕೊಟ್ಟಿದ್ದಾರಲ್ಲ, ಅದರ ವಿರುದ್ಧ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ, ‘ನೋಡೋಣ. ಏನೇನು ಆಗುತ್ತದೆಯೋ ನೋಡೋಣ. ನಾನು ತುಂಬಾ ನೋಡಿದ್ದೇನೆ. ನನ್ನ ವಿರುದ್ಧ 110ಕ್ಕಿಂತ ಹೆಚ್ಚು ಕೇಸ್ಗಳಿವೆ. ನೋಡಿಕೊಂಡಿದ್ದೇನೆ. ಇವರೂ ನೋಡಿಕೊಳ್ಳಲಿ. ಏನಾಗಬೇಕು?’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
‘ನಾನು ಜೈಲಿಗೂ ಹೋಗಿ ಆಗಿದೆ. ನನ್ನನ್ನು ಮಾತ್ರವಲ್ಲ, ನನ್ನ ಹೆಂಡತಿಯನ್ನೂ ಇಂದಿರಾ ಗಾಂಧಿ ಕಾಲದಲ್ಲಿ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಎಂಥ ಹುಚ್ಚು ಇವರದ್ದು! ಇನ್ನೇನು, ಗಲ್ಲಿಗೆ ಹಾಕಬೇಕು. ಅಷ್ಟೇ ಉಳಿದಿರುವುದು. ತಾಕತ್ತಿದ್ದರೆ ಮಾಡಲಿ’ ಎಂದು ಪ್ರಭಾಕರ ಭಟ್ ಕಲ್ಲಡ್ಕ ಸವಾಲು ಹಾಕಿದರು.






