ದೆಹಲಿ ವಿಧಾನಸಭಾ ಸಂಕೀರ್ಣದಲ್ಲಿ ಇತ್ತೀಚೆಗೆ ನಡೆದ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
“ಮೇಲ್ನೋಟಕ್ಕೆ ವಿಧಾನಸಭೆಯ ಸಂಕೀರ್ಣದಲ್ಲಿ ಭದ್ರತಾಲೋಪಕ್ಕೆ ಸಂಬಂಧಿಸಿದಂತೆ ತಪ್ಪುಗಳು ಕಾಣಿಸಿದ ಹಿನ್ನೆಲೆ ಭದ್ರತಾ ವಿಭಾಗದ ಓರ್ವ ಸಬ್ ಇನ್ಸ್ ಪೆಕ್ಟರ್ ಮತ್ತು ಓರ್ವ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ತಿಳಿದು ಬಂದಿದೆ.
ಏ.06(ಸೋಮವಾರ) ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಮುಸುಕುಧಾರಿ ವ್ಯಕ್ತಿಯೊಬ್ಬ ದೆಹಲಿ ವಿಧಾನಸಭೆಯ ಸಂಕೀರ್ಣದ ಕಬ್ಬಿಣದ ಗೇಟ್ ಮುರಿದು ಒಳಗೆ ನುಗ್ಗಿದ್ದ. ಇದನ್ನು ಪ್ರಮುಖ ಭದ್ರತಾ ಲೋಪ ಎಂದು ಪರಿಗಣಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.




