ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡುವಿನ 39 ದಿನಗಳ ಯುದ್ಧಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ 2 ವಾರಗಳ ಕದನ ವಿರಾಮ ಒಪ್ಪಂದವಾಗಿದೆ. ಆದರೆ, ಈ ಕದನ ವಿರಾಮ ಮಾತುಕತೆಗಳಲ್ಲಿ ಯುದ್ಧ ಆರಂಭಿಸಿದ ಪ್ರಮುಖ ಪಾಲುದಾರ ಇಸ್ರೇಲ್‌ನ ಪಾತ್ರವೇ ಇಲ್ಲ. ಇಸ್ರೇಲ್‌ಅನ್ನು ಹೊರಗಿಟ್ಟು, ಅದರ ಅಭಿಪ್ರಾಯವನ್ನು ಕಡೆಗಣಿಸಿ, ಟ್ರಂಪ್ ಮಾತ್ರವೇ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಇದು, ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ.
ಇಸ್ರೇಲ್‌ನ ವಿಪಕ್ಷ ನಾಯಕ, Yesh Atid ಪಕ್ಷದ ಮುಖಂಡ ನಾಯಕ ಯೈರ್ ಲಾಪಿಡ್ ಅವರು ನೆತನ್ಯಾಹು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೆಹನ್ಯಾಹು ಸರ್ಕಾರವು ಇತಿಹಾಸದಲ್ಲೇ ಅತ್ಯಂತ ದೊಡ್ಡ ರಾಜಕೀಯ ವಿಪತ್ತು ಎಂದು ಬಣ್ಣಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಇಸ್ರೇಲ್‌ನ ಇಡೀ ಇತಿಹಾಸದಲ್ಲಿ ಇಂತಹ ರಾಜಕೀಯ ವಿಪತ್ತು ಎಂದಿಗೂ ಇರಲಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆಯ ಮೂಲ ವಿಷಯಗಳ ಬಗ್ಗೆ ನಿರ್ಧಾರಗಳು ತೆಗೆದುಕೊಳ್ಳುವಾಗ ಇಸ್ರೇಲ್ ಕೂಡ ಮೇಜಿನ ಬಳಿ ಇರಲಿಲ್ಲ” ಎಂದು ಟೀಕಿಸಿದ್ದಾರೆ.
“ಇಸ್ರೇಲ್ ಸೈನ್ಯವು ತನಗೆ ಕೊಟ್ಟ ಎಲ್ಲ ಕಾರ್ಯಗಳನ್ನು ನಿರ್ವಹಿಸಿತು, ಜನರು ಅದ್ಭುತ ಸಹನೆ ಮತ್ತು ಸ್ಥೈರ್ಯ ತೋರಿಸಿದರು. ಆದರೆ, ನೆತನ್ಯಾಹು ರಾಜಕೀಯವಾಗಿ ವಿಫಲರಾದರು, ಕಾರ್ಯತಂತ್ರದಲ್ಲಿ ವಿಫಲರಾದರು ಹಾಗೂ ತಾವೇ ಹಾಕಿಕೊಂಡಿದ್ದ ಯಾವುದೇ ಒಂದೇ ಒಂದು ಗುರಿಯನ್ನು ಸಾಧಿಸಲಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

“ನೆತನ್ಯಾಹು ಅವರ ಅಹಂಕಾರ, ನಿರ್ಲಕ್ಷ್ಯ ಹಾಗೂ ತಂತ್ರಗಾರಿಕೆಯ ಕೊರತೆಯಿಂದಾಗಿ ಉಂಟಾದ ಹಾನಿಯನ್ನು ಸರಿಪಡಿಸಲು ನಮಗೆ ವರ್ಷಗಳು ಬೇಕಾಗುತ್ತವೆ” ಎಂದು ಕಿಡಿಕಾರಿದ್ದಾರೆ.
ಇಸ್ರೇಲ್‌ನ ಇತರ ವಿಪಕ್ಷಗಳ ನಾಯಕರು ಕೂಡ ಈ ಕದನ ವಿರಾಮದಲ್ಲಿ ನೆತನ್ಯಾಹು ಪಾತ್ರ ಇಲ್ಲದೇ ಇರುವುದು ‘ಸಂಪೂರ್ಣ ವಿಫಲತೆ’ ಎಂದು ವರ್ಣಿಸಿದ್ದಾರೆ.



