ಪೊಲೀಸ್ ಕಸ್ಟಡಿಯಲ್ಲಿದ್ದ ಮಹಿಳಾ ಆರೋಪಿಯೊಬ್ಬರಿಗೆ ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಹಾಗೂ ಆಕೆಯ ಮಗಳನ್ನು ತನ್ನ ಬಳಿ ಕಳುಹಿಸುವಂತೆ ಅಸಭ್ಯ ಬೇಡಿಕೆಯಿಟ್ಟು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ.
ಅಕೋಲಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ರಾಜೇಶ್ ಜಾಧವ್ ಎಂಬಾತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸುಮಾರು 80 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಆರೋಪಿಗಳನ್ನು ಪಾಲ್ಘರ್‌ನಲ್ಲಿ ಬಂಧಿಸಿ, ಅಕೋಲಾ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ರಾಜೇಶ್ ಜಾಧವ್, ಬಂಧಿತ ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಆರೋಪಿ ಮಹಿಳೆಯನ್ನು ಉದ್ದೇಶಿಸಿ ಮಾತನಾಡಿದ್ದ ಎಎಸ್‌ಐ, “ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು, ನಿನಗೆ 10,000 ರೂಪಾಯಿ ನೀಡುತ್ತೇನೆ. ಅಷ್ಟೇ ಅಲ್ಲದೆ, ನಿನ್ನ ಮೇಲಿರುವ ಕ್ರಿಮಿನಲ್ ಕೇಸ್‌ಗಳಿಂದ ನಿನ್ನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ” ಎಂದು ಆಮಿಷವೊಡ್ಡಿದ್ದ ಎನ್ನಲಾಗಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್‌ನ 50 ವರ್ಷಗಳ ವನವಾಸ!
ಈ ಘಟನೆಯ ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ. ರಾಜೇಶ್ ಜಾಧವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಎಸ್‌ಐ ಜಾಧವ್ ಅವರನ್ನು ಹಿರಿಯ ಅಧಿಕಾರಿಗಳು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಇಲಾಖೆಯ ಘನತೆಗೆ ಕುಂದು ತಂದ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಜೇಶ್ ಜಾಧವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಗೃಹ ಇಲಾಖೆಯು ತನಿಖೆ ಆದೇಶಿಸಿದೆ.



