ಬೇಸಿಗೆಯ ತೀವ್ರ ಬಿಸಿಲಿನ ಹಿನ್ನೆಲೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ನಿಗದಿಮಾಡಲಾಗಿದೆ. ಈ ಬೆನ್ನಲ್ಲೇ ಬುಧವಾರ ಬೆಳಗ್ಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ಎಲ್ಲ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು. ದೈನಂದಿನ ಕಚೇರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಸಿಬ್ಬಂದಿ ಯಾವುದೇ ಕಡತ ವಹಿ ಬಾಕಿ ಉಳಿಸಿಕೊಳ್ಳದೇ ಕಾರ್ಯ ನಿರ್ವಹಿಸುವ ಮೂಲಕ ಕಡತಗಳ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಬೇಕು. ತಮ್ಮ ಎಂದಿನ ಕೆಲಸ ಕಾರ್ಯಗಳಿಗೆ ಆಯಾ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ನೀಡಬೇಕು. ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ ಪರಿಹಾರ ಕ್ರಮ ಸೂಚಿಸಬೇಕು. ಯಾವುದೇ ಲೋಪ ದೋಷ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಹಿಂಗಾರು ಹಂಗಾಮು; ಏ.7ರವರೆಗೆ ಕಾಲುವೆಗೆ ನೀರು
ಇಡೀ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಬದಲಾದ ಸಮಯದಲ್ಲಿ ಕಚೇರಿಯಲ್ಲಿದ್ದುಕೊಂಡು ಯಾವುದೇ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶನ ನೀಡಿದರೆ ಸಮಯದ ಮಿತಿಯಿಲ್ಲದೇ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.




