ಎಡಪಕ್ಷಗಳ 3 ದಶಕಗಳ ಆಡಳಿತ, ಟಿಎಂಸಿಯ 15 ವರ್ಷಗಳ ಅಧಿಕಾರ, ಬಿಜೆಪಿಯ ಬೆಳವಣಿಗೆಯಂತಹ 50 ವರ್ಷಗಳ ರಾಜಕೀಯ ಬದಲಾವಣೆಗಳ ನಡುವೆಯೂ ಕಾಂಗ್ರೆಸ್ ಮತ್ತೆ ಮೇಲೇಳಲು ಸಾಧ್ಯವೇ ಆಗಿಲ್ಲ
ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. 4ನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಟಿಎಂಸಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಅವರಿಂದ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಟಿಎಂಸಿ-ಬಿಜೆಪಿ ನಡುವಿನ ಹೋರಾಟದಲ್ಲಿ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಮಂಕಾಗಿದೆ. ಮೂಲೆಗುಂಪಾಗಿದೆ. 50 ವರ್ಷಗಳಿಂದ ಬಂಗಾಳದಲ್ಲಿ ತನ್ನ ನೆಲೆಗಾಗಿ ಹಾತೊರೆಯುತ್ತಿದೆ.
ಇಂದಿರಾ ಗಾಂಧಿ ಯುಗದಲ್ಲಿ ಕಾಂಗ್ರೆಸ್ ಬಂಗಾಳದಲ್ಲಿ ಅಧಿಕಾರದಲ್ಲಿತ್ತು. ಸಿದ್ಧರ್ಥ ಶಂಕರ್ ರೇ ಅವರು ಬಂಗಾಳದಲ್ಲಿ ಕಾಂಗ್ರೆಸ್‌ನ ಕಡೆಯ ಮುಖ್ಯಮಂತ್ರಿಯಾಗಿದ್ದರು. ಅವರ ಸರ್ಕಾರದ ಆಡಳಿತವು 1977ರಲ್ಲಿ ಕೊನೆಗೊಂಡಿತು. ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಅನುಭವಿ ಮಾರ್ಕ್ಸ್‌ವಾದಿ ಜ್ಯೋತಿ ಬಸು ನೇತೃತ್ವದ ಸಿಪಿಐಎಂ ಸೋಲಿಸಿತು. ಅಂದಿನಿಂದ 3 ದಶಕಗಳ ಎಡರಂಗದ ಸರ್ಕಾರದಲ್ಲಿ ಜ್ಯೋತಿ ಬಸು ಅವರು ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸಿದರು.
1972ರಲ್ಲಿ ಕಾಂಗ್ರೆಸ್ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, 50%ರಷ್ಟು ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಅದಕ್ಕೆ ಹೋಲಿಸಿದರೆ ಇಂದಿನ ಪರಿಸ್ಥಿತಿಯು ಆಘಾತಕಾರಿಯಾಗಿದೆ. ಜ್ಯೋತಿ ಬಸು ಅವರ ನೇತೃತ್ವದಲ್ಲಿ ಸಿಪಿಐಎಂ ನೇತೃತ್ವದ ಎಡರಂಗವು ಮೇಲೆದ್ದ ನಂತರ, ಕಾಂಗ್ರೆಸ್ ಅಧಿಕಾರದ ಕೇಂದ್ರದಿಂದ ದೂರ ಸರಿಯುತ್ತಾ ಬಂದಿತು. 1977ರ ಚುನಾವಣೆಯಲ್ಲಿ ಸಿಪಿಐಎಂ ಅಬ್ಬರದ ಅಲೆಗೆ ಸಿಲುಕಿದ ಕಾಂಗ್ರೆಸ್, ಹೀನಾಯ ಸೋಲು ಅನುಭವಿಸಿತು.
ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧ ಉಂಟಾದ ಜನಾಕ್ರೋಶವು ಈ ಪತನಕ್ಕೆ ಒಂದು ಕಾರಣವಾಗಿತ್ತು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿಯೂ ಮೊದಲ ಬಾರಿಗೆ ಸೋಲನ್ನು ಕಂಡಿತು. ಆ ನಂತರ, ಬಂಗಾಳದಲ್ಲಿ ಕಾಂಗ್ರೆಸ್ ಮತ್ತೆ ಎಂದೂ ಪ್ರಬಲ ಸ್ಥಾನಕ್ಕೆ ಮರಳಲೇ ಇಲ್ಲ.
ಬರೋಬ್ಬರಿ 35 ವರ್ಷಗಳ ಎಡಪಂಥೀಯರ ಪ್ರಾಬಲ್ಯವು ಕಾಂಗ್ರೆಸ್‌ನ ಪ್ರಭಾವವನ್ನು ವ್ಯವಸ್ಥಿತವಾಗಿ ಕುಗ್ಗಿಸಿತು. ಎಡಪಕ್ಷಗಳು ಬಂಗಾಳವನ್ನು ಭದ್ರಕೋಟೆ ಮಾಡಿಕೊಂಡಿದ್ದವು. ಕಾಂಗ್ರೆಸ್ ಪ್ರಬಲ ವಿಪಕ್ಷವಾಗಿ ಉಳಿದರೂ, ಡಡಪಕ್ಷಗಳ ಕೋಟೆಯನ್ನು ಭೇದಿಸಿ, ಅಧಿಕಾರ ಪಡೆಯಲಾಗಲಿಲ್ಲ. ಶತಮಾನಕ್ಕಿಂತಲೂ ಹಳೆಯದಾದ ಕಾಂಗ್ರೆಸ್ ಸೊರಗುತ್ತಿರುವಾಗಲೇ, 198ರಲ್ಲಿ ಮಮತಾ ಬ್ಯಾನರ್ಜಿ ಟಿಎಂಸಿ ಸ್ಥಾಪಿಸಿದರು. ಪಕ್ಷವು ವೇಗವಾಗಿ ಪ್ರವರ್ಧಮಾನಕ್ಕೆ ಬಂದಿತು. ಎಡಪಕ್ಷಗಳ ಕೋಟೆಯನ್ನು ಮಮತಾ ಬ್ಯಾನರ್ಜಿ ಭೇದಿಸಿದರು. 2011ರಲ್ಲಿ ಎಡಪಕ್ಷಗಳನ್ನು ಮಣಿಸಿ, ಮಮತಾ ಸರ್ಕಾರ ರಚಿಸಿದರು. ಮಮತಾ ಮತ್ತು ಟಿಎಂಸಿ ಬೆಳವಣಿಗೆಯು ಕಾಂಗ್ರೆಸ್ ಜೊತೆಗೆ ಕಮ್ಯುನಿಸ್ಟ್ ಪಕ್ಷಗಳನ್ನೂ ಮೂಲೆಗುಂಪು ಮಾಡಿತು. 2016ರ ಚುನಾವಣೆ ವೇಳೆಗೆ ಟಿಎಂಸಿಗೆ ಪ್ರಬಲ ವಿರೋಧಿಗಳೇ ಇಲ್ಲದ ಪರಿಸ್ಥಿತಿ ಬಂಗಾಳದಲ್ಲಿತ್ತು.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾ-ಅಭಿಷೇಕ್ ಜಂಟಿ ತಂತ್ರ – ಒಂಟಿ ಪ್ರಚಾರ; ಬಿಜೆಪಿ ಅತಂತ್ರ?
ಆದರೆ, 2021ರಲ್ಲಿ ನಡೆದ ಚುನಾವಣೆಯಲ್ಲಿ ಟಿಎಂಸಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿದ್ದು, ಬಿಜೆಪಿ. 2016ರಲ್ಲಿ ಕೇವಲ 3 ಶಾಸಕರನ್ನು ಮಾತ್ರವೇ ಹೊಂದಿದ್ದ ಬಿಜೆಪಿ, 2021ರಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ, ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ. ಎಡಪಕ್ಷಗಳ 3 ದಶಕಗಳ ಆಡಳಿತ, ಟಿಎಂಸಿಯ 15 ವರ್ಷಗಳ ಅಧಿಕಾರ, ಬಿಜೆಪಿಯ ಬೆಳವಣಿಗೆಯಂತಹ 50 ವರ್ಷಗಳ ರಾಜಕೀಯ ಬದಲಾವಣೆಗಳ ನಡುವೆಯೂ ಕಾಂಗ್ರೆಸ್ ಮತ್ತೆ ಮೇಲೇಳಲು ಸಾಧ್ಯವೇ ಆಗಿಲ್ಲ. ಈ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ಅಸ್ತಿತ್ವ ಕೇವಲ ನೆರಳಿನಂತೆಯೇ ಉಳಿದಿದೆ.
ಈಗ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವು ಇಂದಿರಾ ಅವರಿಂದ ರಾಹುಲ್ ಗಾಂಧಿಯವರೆಗೆ ನಾನಾ ಹಂತಗಳಲ್ಲಿ ಬದಲಾಗಿದೆ. ಆದರೂ, ಬಂಗಾಳದ ಮತದಾರರು ಮಾತ್ರ ಕಾಂಗ್ರೆಸ್ ಕಡೆಗೆ ಮರಳುವ ಆಸಕ್ತಿ ತೋರಲಿಲ್ಲ.
ಈಗಲೂ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಕಠಿಣ ಹೋರಾಟ ನಡೆಸುತ್ತಿದೆ. ಮತ್ತೆ ಪುಟಿದೇಳಲು ಬಯಸುತ್ತಿದೆ ಮತ್ತು ಪ್ರಯತ್ನಿಸುತ್ತಿದೆ. ತನ್ನ ಸ್ಥಿತಿಯನ್ನು ಬದಲಿಸಿ ಹೊಸ ರಾಜಕೀಯ ಶಕ್ತಿಯಾಗಿ ಉದಯಿಸಲು ಯತ್ನಿಸುತ್ತಿದೆ. ಆದರೆ, ಬಿಜೆಪಿ ಪ್ರಬಲವಾಗಿ ಬೆಳೆಯುವ ನಿರೀಕ್ಷೆಯಲ್ಲಿದೆ. ಈ ಚುನಾವಣೆಯ ಫಲಿತಾಂಶವು ಬಂಗಾಳದ ಮುಂದಿನ ಅಧ್ಯಾಯವನ್ನು ನಿರ್ಧರಿಸಲಿದೆ. ಜೊತೆಗೆ, ಕಾಂಗ್ರೆಸ್‌ನ ಭವಿಷ್ಯವೂ ನಿರ್ಧಾರವಾಗಲಿದೆ.



