ಕೇರಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ ವಿಪಕ್ಷ ನಾಯಕ ವಿಡಿ ಸತೀಸನ್ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ 5 ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿ ಕೇರಳ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿದೆ. ತಿರುವನಂತಪುರದಲ್ಲಿ ಯುಡಿಎಫ್‌ನ ಪುತ್ತು ಯುಗ ಯಾತ್ರೆಯ ಮುಕ್ತಾಯ ಹಂತದಲ್ಲಿ ರಾಹುಲ್ ಗಾಂಧಿ ಘೋಷಿಸಿದ ಐದು ಪ್ರಮುಖ ಭರವಸೆಗಳು ಪ್ರಣಾಳಿಕೆ ಆಧಾರವಾಗಿದೆ ಎಂದು ವಿಡಿ ಸತೀಸನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಎಲ್‌ಡಿಎಫ್ ಪ್ರಣಾಳಿಕೆ ಬಿಡುಗಡೆ: ಮಾಸಿಕ 3,000 ರೂ. ಪಿಂಚಣಿ, ಉದ್ಯೋಗ ಭರವಸೆ
ಯುಡಿಎಫ್ ಅಧಿಕಾರಕ್ಕೆ ಬಂದರೆ, ಪಿಂಚಣಿಗಳನ್ನು ಪ್ರಸ್ತುತ ರೂ. 2,000 ರಿಂದ ರೂ. 3,000ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಎಲ್‌ಡಿಎಫ್ ಕೂಡಾ ಇದೇ ಭರವಸೆಯನ್ನು ನೀಡಿದೆ. ಇದರೊಂದಿಗೆ, ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಸರ್ಕಾರಿ ಇಲಾಖೆಯನ್ನು ರಚಿಸುವುದಾಗಿಯೂ ಯುಡಿಎಫ್ ಭರವಸೆ ನೀಡಿದೆ. ಕೇರಳದ ಪ್ರತಿ ಕುಟುಂಬಕ್ಕೂ 25 ಲಕ್ಷ ರೂಪಾಯಿಗಳ ವಿಮಾ ಯೋಜನೆ ನೀಡಲಾಗುವುದು ಎಂದೂ ತಿಳಿಸಿದೆ.
ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ 100 ದಿನಗಳ ಒಳಗೆ ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸಿದ್ದನ್ನು ಸತೀಸನ್ ಉಲ್ಲೇಖಿಸಿದ್ದಾರೆ. ಯುಡಿಎಫ್ ಕೂಡ ಅದೇ ರೀತಿ ತನ್ನ ಭರವಸೆಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆಗೆ ಯುಡಿಎಫ್ ಗ್ಯಾರಂಟಿಗಳು
- ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಚಲನಶೀಲತೆ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಉಚಿತ ಪ್ರಯಾಣ.
- ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಮಾಸಿಕ 1,000 ರೂ.ಗಳ ಸಹಾಯ.
- ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಹೆಸರಿನಲ್ಲಿ 25 ಲಕ್ಷ ರೂ.ಗಳ ಆರೋಗ್ಯ ವಿಮಾ ಯೋಜನೆ.
- ಪಿಂಚಣಿಗಳನ್ನು 3,000 ರೂ.ಗಳಿಗೆ ಹೆಚ್ಚಿಸಲಾಗುವುದು
- ಯುವ ಉದ್ಯಮಿಗಳಿಗೆ ಬಡ್ಡಿರಹಿತ ಸಾಲಗಳು ಮತ್ತು ಹಿರಿಯ ನಾಗರಿಕರಿಗಾಗಿ ಮೀಸಲಾದ ಸಚಿವಾಲಯವನ್ನು ರಚಿಸಲಾಗುವುದು.




