ಮಲಯಾಳಂ ಚಿತ್ರರಂಗದ ದೃಶ್ಯಂ ಸಿನಿಮಾ ಖ್ಯಾತಿಯ ನಟಿ ಅನ್ಸಿಬಾ ಹಸನ್ ಬಗ್ಗೆ ಲೈಂಗಿಕ ನಿಂದನೆ ಮತ್ತು ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ನಟಿ ಲಕ್ಷ್ಮಿ ಪ್ರಿಯಾ ಹಾಗೂ ಆನ್‌ಲೈನ್ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೇರಳದ ಎರ್ನಾಕುಲಂ ನ್ಯಾಯಾಲಯವು ಪೊಲೀಸರಿಗೆ ಆದೇಶ ನೀಡಿದೆ.
ಎರ್ನಾಕುಲಂನ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದು, ಪಾಲಾರಿವಟ್ಟಂ ಪೊಲೀಸ್ ಠಾಣಾಧಿಕಾರಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ನೋಂದಾಯಿಸಿ ತನಿಖೆ ಕೈಗೊಳ್ಳುವಂತೆ ನಿರ್ದೇಶಿಸಿದೆ.
ಯೂಟ್ಯೂಬ್ ಹಾಗೂ ಆನ್‌ಲೈನ್ ಮಾಧ್ಯಮ ಸಂಸ್ಥೆಯೊಂದಕ್ಕೆ (‘ಕ್ಯಾನ್ ಚಾನೆಲ್’) ನೀಡಿದ ಸಂದರ್ಶನದಲ್ಲಿ ಲಕ್ಷ್ಮಿ ಪ್ರಿಯಾ ಅವರು ತಮ್ಮ ವಿರುದ್ಧ ಲೈಂಗಿಕ ನಿಂದನೆಯ ಹಾಗೂ ಚಾರಿತ್ರ್ಯ ಹರಣ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅನ್ಸಿಬಾ ಹಸನ್ ಆರೋಪಿಸಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ತಮ್ಮ ತೇಜೋವಧೆಯಾಗಿದೆ ಎಂದು ತಿಳಿಸಿ ಅವರು ಮೊದಲು ಪಾಲಾರಿವಟ್ಟಂ ಪೊಲೀಸರನ್ನು ಸಂಪರ್ಕಿಸಿದ್ದರು.
ಇದನ್ನೂ ಓದಿ: ಲೈಂಗಿಕ ನಿಂದನೆ: ನಟಿ ಲಕ್ಷ್ಮಿ ಪ್ರಿಯಾ ವಿರುದ್ಧ ಎಫ್‌ಐಆರ್ ಕೋರಿದ ಅನ್ಸಿಬಾ; ಕೇರಳ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಆದರೆ, ಆರಂಭದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಕಾರಣ, ಅನ್ಸಿಬಾ ಅವರು ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಜುಲೈ 27ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸಿತ್ತು. ತರುವಾಯ, ಅನ್ಸಿಬಾ ಹಸನ್ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಬದಿಗೊತ್ತಿ, ಪ್ರಕರಣವನ್ನು ಮರುಪರಿಶೀಲಿಸಿ ಸೂಕ್ತ ನಿರ್ಧಾರ ತಳೆಯುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸೂಚಿಸಿತ್ತು.
ಹೈಕೋರ್ಟ್ ನಿರ್ದೇಶನದಂತೆ ಅರ್ಜಿಯನ್ನು ಪುನಃ ಪರಿಶೀಲಿಸಿದ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಈ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು ಪೊಲೀಸ್ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ಎಫ್‌ಐಆರ್ ದಾಖಲಿಸಲು ಆದೇಶಿಸಿದೆ.
ಈ ದೂರಿನಲ್ಲಿ ನಟಿ ಲಕ್ಷ್ಮಿ ಪ್ರಿಯಾ ಅವರಲ್ಲದೆ, ಸಂದರ್ಶನ ಪ್ರಸಾರ ಮಾಡಿದ ಆನ್‌ಲೈನ್ ಮಾಧ್ಯಮದ ಮಾಲೀಕ ಸುಕುಮಾರ್ ಹಾಗೂ ಸಂದರ್ಶಕ ಸುರೇಶ್ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75(iv) (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 79 (ಮಹಿಳೆಯ ಮಾನಭಂಗ/ಗೌರವಕ್ಕೆ ಧಕ್ಕೆ ತರುವುದು) ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 67, 67A ಅಡಿಯಲ್ಲಿ ಪ್ರಕರಣ ಕಾಯ್ದಿರಿಸಲು ಮನವಿ ಮಾಡಲಾಗಿದೆ.




