ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಸ್ಕೂಲ್ ಆಫ್ ಕಲ್ಟರ್‌ನ ಗೋಗಟೆ ಸಭಾಂಗಣದಲ್ಲಿ ಅಕ್ಟೋಬರ್ 4ರಂದು ಸಂಜೆ 4 ಗಂಟೆಗೆ ಸಮಾಜ ಸೇವಕ ಶಿವಾಜಿ ಕಾಗಣಿಕರ್ ಅವರ ಕುರಿತಾದ ಮೂರು ಪುಸ್ತಕಗಳನ್ನು ಹೋರಾಟಗಾರ್ತಿ ಮೇಧಾ ಪಾಟ್ಕರ್ ಲೋಕಾರ್ಪಣೆ ಮಾಡಲಿದ್ದಾರೆ.
ಕಾಗಣಿಕರ್ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಗುರುವಾರ ನಗರದಲ್ಲಿ ಸಭೆ ಸೇರಿ ಕಾರ್ಯಕ್ರಮದ ಕುರಿತು ಚರ್ಚಿಸಿದರು. ಜಲ ಸಂರಕ್ಷಣೆ, ಪರಿಸರ ರಕ್ಷಣೆ, ಸಸಿ ನೆಡುವಿಕೆ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯ ಮಾಡುತ್ತಿರುವ ಕಾಗಣಿಕರ್ ಅವರ ಸೇವೆಯನ್ನು ದಾಖಲಿಸುವ ಮೂರು ಕೃತಿಗಳು ಬಿಡುಗಡೆಯಾಗುತ್ತಿರುವುದು ಸಂತಸದ ಸಂಗತಿ ಎಂದು ಪ್ರಬೋಧಿನಿಯ ಕಾರ್ಯದರ್ಶಿ ಸುಭಾಷ್ ಔಲ್ಕರ್ ತಿಳಿಸಿದರು.
ಶಾರದಾ ಗೋಪಾಲ ಅವರು ಕನ್ನಡದಲ್ಲಿ ಬರೆದ ‘ಗುಡ್ಡ ನಾಡಿನ ಗಾಂಧಿ’ ಹಾಗೂ ಗೋಪಾಲ್ ದಾಬ್ ಅವರು ಬರೆದ ‘ಶಿವಾಜಿ ಕಾಗಣಿಕರ್- ಸರ್ವೋದಯ ವರ್ಕರ್ ಅಂಡ್ ಹೀಸ್ ಗ್ರಾಸ್‌ರೂಟ್ ಎಕ್ಸ್‌ಪೀರಿಯನ್ಸ್’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಬೆಳಗಾವಿಯ ಗುರುವರ್ಯ ವಿ.ಜಿ. ಸಾಠ ಮರಾಠಿ ಪ್ರಬೋಧಿನಿ ಹಾಗೂ ಮುಂಬೈನ ಮರಾಠಿ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಾಗೃತಿ ಮಹಿಳಾ ಸಂಘಟನೆಯ ರಾಜೇಶ್ವರಿ ಜೋಶಿ ಅವರು ಕನ್ನಡ ಕೃತಿಯ ಕುರಿತು ಮಾತನಾಡಲಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು ಹಾಗೂ ಕಾಗಣಿಕರ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮಲೋಜಿ ಅಷ್ಟೇಕರ್, ಸುರೇಶ ಗಡ್ಕರಿ, ಬಿ.ಬಿ. ಶಿಂಧೆ, ನೀಲಾ ಅಷ್ಟೆ, ಸವಿತಾ ಪವಾರ, ಜ್ಯೋತಿ ಮಜುಕರ್, ಇಂದ್ರಜಿತ್ ಮೋರೆ, ಗಜಾನನ ಸಾವಂತ, ಗೌರಿ ಚೌಗುಲೆ ಹಾಗೂ ಧೀರಜ್ ರಜಪೂತ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.



