ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ನಿಂದನೆ ಹಾಗೂ ತೇಜೋವಧೆ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಸಹ-ನಟಿ ಲಕ್ಷ್ಮಿ ಪ್ರಿಯಾ ಹಾಗೂ ಯೂಟ್ಯೂಬ್ ಚಾನೆಲ್ ಪ್ರತಿನಿಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಪೋಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮಲಯಾಳಂ ನಟಿ ಅನ್ಸಿಬಾ ಹಸನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರದ ನಿಲುವು ಕೇಳಿದೆ.
ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಸಂದರ್ಶನದ ಟೀಸರ್ ಮತ್ತು ವಿಡಿಯೋಗಳಲ್ಲಿ ನಟಿ ಲಕ್ಷ್ಮಿ ಪ್ರಿಯಾ ಹಾಗೂ ‘ಕ್ಯಾನ್ ಮೀಡಿಯಾ’ ಪ್ರತಿನಿಧಿಗಳು ತಮ್ಮ ತೇಜೋವಧೆ ಮಾಡುವ ಉದ್ದೇಶದಿಂದ ಲೈಂಗಿಕ ನಿಂದನೆಯಿಂದ ಕೂಡಿದ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅನ್ಸಿಬಾ ಆರೋಪಿಸಿದ್ದರು. ಈ ಕುರಿತು ಪಾಲಾರಿವಟ್ಟಂ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ ಎಂದು ಅನ್ಸಿಬಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಈ ದಿನ ವಿಶೇಷ | ನ್ಯಾಯಾಂಗ ನಿಂದನೆಗೆ ಶಿಕ್ಷೆ ಇದೆ, ಸಂವಿಧಾನ ನಿಂದನೆಗೆ?
ಪ್ರಕರಣದ ವಿಚಾರಣೆ ನಡೆಸಿದ್ದ ಎರ್ನಾಕುಲಂನ ಮೊದಲ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜುಲೈ 27 ರಂದು, ಪ್ರಾಥಮಿಕವಾಗಿ ಇದು ಕೇವಲ “ಅಪರಾಧಿಕ ಮಾನನಷ್ಟ” (Criminal Defamation) ವಿಭಾಗಕ್ಕೆ ಸೇರುತ್ತದೆ ಹೊರತು ಎಫ್‌ಐಆರ್ ದಾಖಲಿಸಲು ಯೋಗ್ಯವಾದ ಬಲವಾದ ಸಾಕ್ಷ್ಯಗಳು ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟು ಪೋಲಿಸ್ ತನಿಖೆಗೆ ನಿರ್ದೇಶನ ನೀಡಲು ನಿರಾಕರಿಸಿತ್ತು. ಅಲ್ಲದೆ ಅನ್ಸಿಬಾ ಅವರಿಗೆ ಖಾಸಗಿ ದೂರಿನ ರೂಪದಲ್ಲಿ ಪ್ರಮಾಣೀಕೃತ ಹೇಳಿಕೆ ನೀಡುವಂತೆ ಸೂಚಿಸಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ನಟಿ ಅನ್ಸಿಬಾ ಹಸನ್ ಕೇರಳ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75 (ಲೈಂಗಿಕ ಕಿರುಕುಳ), ಸೆಕ್ಷನ್ 79 (ಮಹಿಳೆಯ ಮಾನಹಾನಿ) ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 67A ಅಡಿಯಲ್ಲಿ ಕಠಿಣ ಅಪರಾಧಗಳಿದ್ದರೂ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಕ್ತವಾಗಿ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.
ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟ್, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನೋಟಿಸ್ ಜಾರಿಗೊಳಿಸಿದೆ.




