ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಸಂಶೋಧಕ ಹಾಗೂ ದೆಹಲಿ ಗಲಭೆ ಪ್ರಕರಣದ ಆರೋಪಿ ಶರ್ಜೀಲ್ ಇಮಾಮ್ ಅವರು ಜೈಲಿನಲ್ಲಿದ್ದುಕೊಂಡೇ ತಮ್ಮ ಪಿಎಚ್‌ಡಿ ಸಂಶೋಧನಾ ಕಾರ್ಯ ಮುಂದುವರಿಸಲು ಅವಕಾಶ ಕೋರಿ ಸಲ್ಲಿಸಿರುವ ಅರ್ಜಿಗೆ ದೆಹಲಿ ಹೈಕೋರ್ಟ್ ಸೋಮವಾರ ದೆಹಲಿ ಪೊಲೀಸರು ಹಾಗೂ ತಿಹಾರ್ ಜೈಲು ಅಧಿಕಾರಿಗಳಿಂದ ಉತ್ತರ ಕೇಳಿದೆ. ನ್ಯಾಯಮೂರ್ತಿ ಸಂಜೀವ್ ನರುಲಾ ಅವರು, ಅರ್ಜಿಗೆ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಜೈಲು ಅಧಿಕಾರಿಗಳು ಮತ್ತು ಪೊಲೀಸರಿಗೆ ಸೂಚಿಸಿದ್ದಾರೆ.
ಇಮಾಮ್ ಪರ ವಕೀಲ ಅಹ್ಮದ್ ಇಬ್ರಾಹಿಂ ವಾದ ಮಂಡಿಸಿ, 2020ರ ಜನವರಿಯಿಂದ ಶರ್ಜೀಲ್ ಇಮಾಮ್ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿದರು. “ಬಂಧನಕ್ಕೊಳಗಾದಾಗ ಅವರು ಪಿಎಚ್‌ಡಿಯ ಅಂತಿಮ ವರ್ಷದಲ್ಲಿದ್ದರು. ಅವರ ಸಂಶೋಧನಾ ಸಾರಾಂಶಕ್ಕೆ (Synopsis) ಯುಜಿಸಿ ಮತ್ತು ಜೆಎನ್‌ಯು ಅನುಮೋದನೆ ನೀಡಿವೆ. ಹೀಗಾಗಿ ಅವರ ಸಂಶೋಧನಾ ಸಾಮಗ್ರಿಗಳನ್ನು ಬಳಸಲು ಅವಕಾಶ ನೀಡಬೇಕು” ಎಂದು ವಕೀಲರು ಮನವಿ ಮಾಡಿದರು.
ಇಮಾಮ್ ಅವರು ಇಂಟರ್‌ನೆಟ್ ಬಳಕೆಗೆ ಅವಕಾಶ ಕೇಳುತ್ತಿಲ್ಲ. ಜೈಲಿನಲ್ಲಿರುವ ಕಂಪ್ಯೂಟರ್ ವ್ಯವಸ್ಥೆಗಳನ್ನು ಮಾತ್ರ ಬಳಸಲು ಅನುಮತಿ ಕೋರುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಪೀಠವು ಸಂಶೋಧನಾ ಸಾಮಗ್ರಿಗಳ ಮುದ್ರಿತ ಪ್ರತಿಗಳನ್ನು ಇಮಾಮ್‌ಗೆ ನೀಡಬಹುದಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು, ಅಧ್ಯಯನ ಸಾಮಗ್ರಿಗಳು ಲಕ್ಷಾಂತರ ಪುಟಗಳಷ್ಟು ಇರುವುದರಿಂದ ಅವುಗಳ ಭೌತಿಕ ಪ್ರತಿಗಳನ್ನು ಒದಗಿಸುವುದು ಕಷ್ಟ ಎಂದು ಉತ್ತರಿಸಿದರು.
ಶರ್ಜೀಲ್ ಇಮಾಮ್ ಅವರು ಬಂಧನಕ್ಕೊಳಗಾಗುವ ಮೊದಲು ಜೆಎನ್‌ಯುನಲ್ಲಿ ಆಧುನಿಕ ಇತಿಹಾಸ ವಿಷಯದಲ್ಲಿ ಡಾಕ್ಟರೇಟ್ ಸಂಶೋಧಕರಾಗಿ ದಾಖಲಾಗಿದ್ದರು. ಸದ್ಯ ಜೈಲಿನಲ್ಲಿರುವುದರಿಂದ ತಮ್ಮ ವಕೀಲರಿಂದ ಪೆನ್‌ಡ್ರೈವ್ ಮೂಲಕ ಸಂಶೋಧನಾ ಸಾಮಗ್ರಿಗಳನ್ನು ಸ್ವೀಕರಿಸಲು ಹಾಗೂ ಜೈಲಿನಲ್ಲಿರುವ ಕಂಪ್ಯೂಟರ್ ಸೌಲಭ್ಯಗಳನ್ನು ಬಳಸಿಕೊಂಡು ಪಿಎಚ್‌ಡಿ ಸಂಶೋಧನೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸಂಶೋಧನಾ ಸಾಮಗ್ರಿಗಳು ಭಾರತ ಸರ್ಕಾರದಿಂದ ನಿಷೇಧಿಸಲ್ಪಟ್ಟ ಅಥವಾ ನಿರ್ಬಂಧಿತವಾಗಿರುವ ವಸ್ತುಗಳಲ್ಲ ಎಂಬುದನ್ನೂ ಇಮಾಮ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಇಮಾಮ್ ಅವರ ಪ್ರಕಾರ, 2026ರ ಏಪ್ರಿಲ್‌ನಲ್ಲಿ ವಿಚಾರಣಾ ನ್ಯಾಯಾಲಯವು ಇದೇ ರೀತಿಯ ಮನವಿಯನ್ನು ಪರಿಗಣಿಸುವಂತೆ ಜೈಲು ಅಧೀಕ್ಷಕರಿಗೆ ಸೂಚಿಸಿತ್ತು. ಬಳಿಕ ಅಂದಿನ ಜೈಲು ಅಧೀಕ್ಷಕರು ವಕೀಲರಿಂದ ಪೆನ್‌ಡ್ರೈವ್ ಸ್ವೀಕರಿಸಲು ಇಮಾಮ್‌ಗೆ ಅನುಮತಿ ನೀಡಿದ್ದರು. ಆದರೆ, ಸಂಶೋಧನಾ ಸಾಮಗ್ರಿಗಳನ್ನು ತಲುಪಿಸುವ ಮುನ್ನವೇ ಆ ಅಧೀಕ್ಷಕರ ವರ್ಗಾವಣೆಯಾಯಿತು.
ಇದನ್ನೂ ಓದಿ: ʼಸ್ವತಂತ್ರವಾಗಿ ಮತ್ತೆ ನಮ್ಮೊಂದಿಗಿರಿʼ-ಜೈಲಿನಲ್ಲಿರುವ ತನ್ನ ವಿದ್ಯಾರ್ಥಿಗಳಿಗೆ ಜೆಎನ್‌ಯು ಶಿಕ್ಷಕಿಯ ಸಂದೇಶ
ನಂತರ ಅಧಿಕಾರ ವಹಿಸಿಕೊಂಡ ಹೊಸ ಅಧೀಕ್ಷಕರು, ನಿರ್ದಿಷ್ಟ ನ್ಯಾಯಾಲಯದ ಆದೇಶವಿಲ್ಲದೆ ಇಮಾಮ್‌ಗೆ ಸಂಶೋಧನಾ ಸಾಮಗ್ರಿ ಅಥವಾ ಜೈಲಿನ ಕಂಪ್ಯೂಟರ್‌ಗಳನ್ನು ಬಳಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿದರು.
ಇದೇ ವಿಚಾರವಾಗಿ ಜುಲೈನಲ್ಲಿ ವಿಚಾರಣಾ ನ್ಯಾಯಾಲಯವು ಇಮಾಮ್‌ಗೆ ಸಂಶೋಧನಾ ಸಾಮಗ್ರಿಗಳನ್ನು ಬಳಸಲು ಅನುಮತಿ ನೀಡಲು ನಿರಾಕರಿಸಿತ್ತು. ಆದರೆ ಈ ವಿಷಯದಲ್ಲಿ ಇಮಾಮ್‌ಗೆ ಸಾಮಗ್ರಿಗಳನ್ನು ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಜೈಲು ಅಧೀಕ್ಷಕರ ವಿವೇಚನೆಗೆ ನ್ಯಾಯಾಲಯ ಬಿಟ್ಟಿತ್ತು. ಇದೀಗ ಜೈಲು ಅಧಿಕಾರಿಗಳು ಹಾಗೂ ದೆಹಲಿ ಪೊಲೀಸರ ಪ್ರತಿಕ್ರಿಯೆ ಪಡೆದ ಬಳಿಕ ಹೈಕೋರ್ಟ್ ಮುಂದಿನ ವಿಚಾರಣೆ ನಡೆಸಲಿದೆ.




