ಬಸವಕಲ್ಯಾಣ ತಾಲೂಕಿನ ನಾರಾಯಣಪುರದ ಜವಾಹರ್ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ 2026ನೇ ಸಾಲಿನ ಆಯ್ಕೆ ಪರೀಕ್ಷೆಯು ನವೆಂಬರ್ 28ರಂದು ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಜಿಲ್ಲೆಯ ಒಟ್ಟು 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 4,567 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆಯನ್ನು ನಮೂದಿಸಿ ಆನ್‌ಲೈನ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರವೇಶ ಪತ್ರ ಪಡೆಯಲು ತೊಂದರೆಯಾದಲ್ಲಿ ವಿದ್ಯಾಲಯವನ್ನು ಸಂಪರ್ಕಿಸಬಹುದು. ಅರ್ಜಿಯಲ್ಲಿ ಲೋಪದೋಷಗಳಿದ್ದರೆ ಸೂಕ್ತ ದಾಖಲೆಗಳೊಂದಿಗೆ ಪ್ರಾಚಾರ್ಯರನ್ನು ಸಂಪರ್ಕಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಆದರೆ ಜನ್ಮ ದಿನಾಂಕ ಮತ್ತು ಪರೀಕ್ಷಾ ಮಾಧ್ಯಮದ ಭಾಷೆಯನ್ನು ಬದಲಾಯಿಸಲು ಅವಕಾಶವಿಲ್ಲ.
ಪೋಷಕರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಂದಾಯಿತ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಮಾರ್ಗದರ್ಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪರೀಕ್ಷಾರ್ಥಿಗಳು ಅಂದು ಬೆಳಿಗ್ಗೆ 10.30 ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿ, ಪ್ರವೇಶ ಪತ್ರ ಹಾಗೂ ನೀಲಿ ಅಥವಾ ಕಪ್ಪು ಶಾಯಿಯ ಪೆನ್ನನ್ನು ಮಾತ್ರ ತರಬೇಕು. ಇತರೆ ಯಾವುದೇ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಅನುಮತಿ ಇರುವುದಿಲ್ಲ. ಪರೀಕ್ಷೆಯ ಅವಧಿ ಎರಡು ಗಂಟೆಗಳಿದ್ದು, ಪರೀಕ್ಷೆ ಮುಗಿಯುವವರೆಗೆ ಅಭ್ಯರ್ಥಿಗಳು ಕೇಂದ್ರದಿಂದ ಹೊರಬರುವಂತಿಲ್ಲ ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ ವಿವಿ | ಪರೀಕ್ಷೆಗೂ ಮುನ್ನವೇ ಮುಂದಿನ ಸೆಮಿಸ್ಟರ್ ತರಗತಿ ಪುನಾರಾರಂಭ?





