‘ಶುದ್ಧೀಕರಣ ಎನ್ನುವುದು ಅಸ್ಪೃಶ್ಯತೆಯ ಮತ್ತೊಂದು ಹೆಸರು’ ಎಂದು ಟೀಕಿಸುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿ ನಡೆದ ನಂತರ, ಆ ಮೈದಾನವನ್ನು ‘ಶುದ್ಧೀಕರಣ’ಗೊಳಿಸಿದ ಕೃತ್ಯವನ್ನು ಖಂಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಈ ಬಗ್ಗೆ ಎಫ್ಐಆರ್ ದಾಖಲಿಸಲು ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಘಟನೆಯು ಸಂವಿಧಾನದ ಪ್ರಕಾರ ಅಪರಾಧವಾಗಿದೆ. ಈ ಕೂಡಲೇ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ‘ವಿಜಯ ಶಂಖನಾದ’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಎರಡು ದಿನಗಳ ನಂತರ ಶ್ರೀರಾಮ ಸೇನೆ ಸದಸ್ಯರು ಅದೇ ಜಾಗದಲ್ಲಿ ‘ಶುದ್ಧೀಕರಣ ಹೋಮ’ ನಡೆಸಿದ್ದರು.
“ನಾವು ಕಾಂಗ್ರೆಸ್ ಅಧ್ಯಕ್ಷರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸುತ್ತಿದ್ದೇವೆ. ಉತ್ತರಾಖಂಡದಲ್ಲಿ ಅವರಿಗೆ ನ್ಯಾಯ ಸಿಗಬೇಕು. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ. ಅಸ್ಪೃಶ್ಯತೆ ನಿಷೇಧವಿದ್ದರೂ ಹಾಗೂ ಅದೊಂದು ಅಪರಾಧವಾಗಿದ್ದರೂ ಬಿಜೆಪಿ-ಆರ್ಎಸ್ಎಸ್ ನಾಯಕರು ಅದನ್ನು ಆಚರಿಸುತ್ತಾರೆ. ದಲಿತರು ಘನತೆ ಮತ್ತು ಯಶಸ್ಸಿನೊಂದಿಗೆ ಬದುಕುವುದು ಅವರಿಗೆ ಇಷ್ಟವಿಲ್ಲ ಎಂಬುದನ್ನು ಈ ಘಟನೆ ಎತ್ತಿತೋರಿಸುತ್ತದೆ. ಖರ್ಗೆ ಅವರಿಗೆ ಇಂದಲ್ಲ, ನಾಳೆಯಾದರೂ ನ್ಯಾಯ ಸಿಕ್ಕೇ ಸಿಗುತ್ತದೆ” ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರು ಈ ಶುದ್ಧೀಕರಣ ಆಚರಣೆಯನ್ನು ಸಮರ್ಥಿಸಿಕೊಂಡ ವಿಡಿಯೊವನ್ನು ರಾಹುಲ್ ಗಾಂಧಿ ಪ್ರದರ್ಶಿಸಿದರು. ‘ಘೋಷಣೆಗಳಿಂದ ಆ ಸ್ಥಳ ಮಲಿನವಾಗಿತ್ತು’ ಎಂದು ಭಟ್ ಅದರಲ್ಲಿ ಸಮರ್ಥಿಸಿಕೊಂಡಿದ್ದರು. “ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರ ವಿರುದ್ಧವೇ ಇಂತಹ ಕೃತ್ಯ ಎಸಗಬಹುದಾದರೆ, ಶಾಲೆಯಲ್ಲಿ ಓದುವ ನಾಲ್ಕು ವರ್ಷದ ದಲಿತ ಮಗುವಿನ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ” ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ತಮ್ಮ ಬೆಂಬಲಕ್ಕೆ ಹೆಚ್ಚಿನವರು ನಿಲ್ಲಲಿಲ್ಲ ಎಂಬ ಖರ್ಗೆ ಅವರ ಬೇಸರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, “ಅವರು ಹಾಗೆ ಹೇಳಿಲ್ಲ. ಕೆಲವರು ಬೆಂಬಲಿಸಲಿಲ್ಲ ಎಂದಷ್ಟೇ ಹೇಳಿದ್ದಾರೆ. ನಾನು ಮತ್ತು ಇತರ ಅನೇಕ ನಾಯಕರು ಅವರನ್ನು ಬೆಂಬಲಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪ್ರಕಟಣೆ ವಿವಾದದ ಬಗ್ಗೆ ಕೇಳಿದಾಗ, “ಅದು ವಿಷಯಾಂತರ ಮಾಡುವ ಯತ್ನ. ಆ ಬಗ್ಗೆ ನನಗೆ ಆಸಕ್ತಿ ಇಲ್ಲ. ಕಾಂಗ್ರೆಸ್ ಅಧ್ಯಕ್ಷರಿಗೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಮುಂದಿರುವ ಪ್ರಮುಖ ವಿಷಯ” ಎಂದು ಅವರು ಪುನರುಚ್ಚರಿಸಿದರು.




