2026ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (Environmental Performance Index-EPI)ದಲ್ಲಿ ಭಾರತ 177 ದೇಶಗಳ ಪೈಕಿ 176ನೇ ಸ್ಥಾನ ಪಡೆದು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ಮೂಲಕ ಭಾರತ ಪರಿಸರ ಕಾರ್ಯಕ್ಷಮತೆಯಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ಯೇಲ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಲಾ ಆ್ಯಂಡ್ ಪಾಲಿಸಿ ಬಿಡುಗಡೆ ಮಾಡಿರುವ ಸೂಚ್ಯಂಕದಲ್ಲಿ ಭಾರತ 22.46 ಅಂಕ ಗಳಿಸಿದೆ. ಇದು 31.81ರ ಪ್ರಾದೇಶಿಕ ಸರಾಸರಿಗಿಂತಲೂ ಗಣನೀಯವಾಗಿ ಕಡಿಮೆಯಾಗಿದೆ.
ಲಾವೋಸ್ 21.78 ಅಂಕಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಎಸ್ಟೋನಿಯಾ 74.79 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಪರಿಸರ ಆರೋಗ್ಯ, ಪರಿಸರ ವ್ಯವಸ್ಥೆಯ ಚೈತನ್ಯ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಒಟ್ಟು 12 ವಿಭಾಗಗಳ ಅಡಿಯಲ್ಲಿ 47 ಮಾನದಂಡಗಳನ್ನು ಆಧರಿಸಿ 177 ದೇಶಗಳ ಪರಿಸರ ಕಾರ್ಯಕ್ಷಮತೆಯನ್ನು EPI ಮೌಲ್ಯಮಾಪನ ಮಾಡಿದೆ.
ಭಾರತದ ಕಳಪೆ ಸ್ಥಾನಕ್ಕೆ ಪ್ರಮುಖವಾಗಿ ವಾಯುಮಾಲಿನ್ಯ, ಕಲ್ಲಿದ್ದಲಿನ ಮೇಲಿನ ಹೆಚ್ಚಿನ ಅವಲಂಬನೆ, ಅರಣ್ಯ ನಷ್ಟ, ಜೀವವೈವಿಧ್ಯ ಸಂರಕ್ಷಣೆಯಲ್ಲಿನ ಕೊರತೆ ಮತ್ತು ತ್ಯಾಜ್ಯ ನಿರ್ವಹಣೆಯ ದೌರ್ಬಲ್ಯ ಕಾರಣಗಳಾಗಿವೆ.
ಪರಿಸರ ಆರೋಗ್ಯ ವಿಭಾಗದಲ್ಲಿ ಭಾರತ 174ನೇ ಸ್ಥಾನದಲ್ಲಿದ್ದರೆ, ಪರಿಸರ ವ್ಯವಸ್ಥೆಯ ಚೈತನ್ಯ ವಿಭಾಗದಲ್ಲಿ 171ನೇ ಸ್ಥಾನ ಪಡೆದಿದೆ. ಹವಾಮಾನ ಬದಲಾವಣೆ ವಿಭಾಗದಲ್ಲಿ 130ನೇ ಸ್ಥಾನ ಪಡೆದಿರುವುದು ಇತರ ವಿಭಾಗಗಳಿಗೆ ಹೋಲಿಸಿದರೆ ತುಸು ಸಮಾಧಾನ.
ಮಾಲಿನ್ಯಕಾರಕ ಗಾಳಿ, ಾಸಮರ್ಪಕ ಒಳಚರಂಡಿ ಮತ್ತು ಘನತ್ಯಾಜ್ಯ ಸಂಸ್ಕರಣೆ, ಅರಣ್ಯಗಳ ಮೇಲಿನ ಹೆಚ್ಚುತ್ತಿರುವ ಒತ್ತಡ ಹಾಗೂ ಪಳೆಯುಳಿಕೆ ಇಂಧನಗಳ ಮುಂದುವರಿದ ಬಳಕೆ ದೇಶದ ಪರಿಸರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವರದಿ ಹೇಳಿದೆ. ಜೀವವೈವಿಧ್ಯ ಪ್ರದೇಶಗಳಲ್ಲಿನ ಮರಗಳ ಹೊದಿಕೆ ನಷ್ಟದ ಬಗ್ಗೆಯೂ 2026ರ ಮೌಲ್ಯಮಾಪನದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಇದೇ ವೇಳೆ, ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (CSE) ಮತ್ತು ‘ಡೌನ್ ಟು ಅರ್ಥ್’ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಎನ್ವಿರಾನ್ಮೆಂಟ್ 2026: ಇನ್ ಫಿಗರ್ಸ್’ ವರದಿಯಲ್ಲೂ ರಾಜ್ಯಗಳ ಪರಿಸರ ಸಾಧನೆಯ ಚಿತ್ರಣ ಹೊರಬಿದ್ದಿದೆ.
ಕೃಷಿ ಮತ್ತು ಭೂಮಿ ವಿಭಾಗದಲ್ಲಿ ತೆಲಂಗಾಣ ಅತ್ಯಂತ ಕಳಪೆ ಸಾಧನೆ ಮಾಡಿದ ರಾಜ್ಯಗಳ ಪೈಕಿ ಒಂದಾಗಿದೆ. ಪರಿಸರ ವಿಭಾಗದಲ್ಲಿ ಗೋವಾ, ಅಸ್ಸಾಂ, ಆಂಧ್ರಪ್ರದೇಶ, ತ್ರಿಪುರಾ ಮತ್ತು ಒಡಿಶಾ ಉತ್ತಮ ಸಾಧನೆ ಮಾಡಿದ ರಾಜ್ಯಗಳಾಗಿ ಗುರುತಿಸಲ್ಪಟ್ಟಿವೆ. ರಾಜಸ್ಥಾನ, ತಮಿಳುನಾಡು, ಬಿಹಾರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ದುರ್ಬಲ ಸಾಧನೆ ಮಾಡಿದ ರಾಜ್ಯಗಳ ಪಟ್ಟಿಯಲ್ಲಿವೆ. ಕರ್ನಾಟಕ ಇವೆರಡ ಮಧ್ಯ ಭಾಗದಲ್ಲಿದೆ. ಅರಣ್ಯ ಮತ್ತು ಜೀವವೈವಿಧ್ಯ, ಹವಾಮಾನ, ತ್ಯಾಜ್ಯ ನಿರ್ವಹಣೆ ಹಾಗೂ ಜಲ ಸಂಪನ್ಮೂಲಗಳನ್ನು ಪರಿಗಣಿಸಿ ಈ ಮೌಲ್ಯಮಾಪನ ನಡೆಸಲಾಗಿದೆ.
ಇದನ್ನೂ ಓದಿ: ದಲಿತ ವ್ಯಕ್ತಿಗೆ ಹಲ್ಲೆ ನಡೆಸಿ ಸಗಣಿ ತಿನ್ನಿಸಿದ ಮಹಾರಾಷ್ಟ್ರ ಬಜರಂಗದಳ ಕಾರ್ಯಕರ್ತರು: ಇನ್ನೂ ಆಗಿಲ್ಲ ಕಿಡಿಗೇಡಿಗಳ ಬಂಧನ!
ತೆಲಂಗಾಣದ ಪರಿಸರ ಸಾಧನೆ ಸಮಾನವಾಗಿಲ್ಲ ಎಂದು ವರದಿ ಸೂಚಿಸಿದೆ. ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಕೈಗಾರಿಕಾ ಸುಸ್ಥಿರತೆ ಕುರಿತ ಕ್ರಮಗಳು ರಾಜ್ಯದ ಪ್ರಮುಖ ಬಲಗಳಾಗಿದ್ದರೆ, ಸುಸ್ಥಿರ ಭೂ ಬಳಕೆ, ಅರಣ್ಯ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಮತ್ತು ಮಾಲಿನ್ಯ ನಿಯಂತ್ರಣ ಪ್ರಮುಖ ಸವಾಲುಗಳಾಗಿವೆ. ರೈತರ ಕಲ್ಯಾಣದಲ್ಲಿನ ದುರ್ಬಲತೆ, ಕೃಷಿ ಚಟುವಟಿಕೆಗಳಲ್ಲಿ ಬಾಹ್ಯ ಒಳಹರಿವುಗಳ ಮೇಲಿನ ಅವಲಂಬನೆ ಹಾಗೂ ಸುಸ್ಥಿರ ಭೂ ಬಳಕೆಯ ಕುರಿತ ಕಳವಳಗಳು ತೆಲಂಗಾಣದ ಸಾಧನೆಯ ಮೇಲೆ ಪರಿಣಾಮ ಬೀರಿವೆ. ಹೀಗಾಗಿ ರಾಜ್ಯದ ಪರಿಸರ ಸಮಸ್ಯೆಗಳು ಕೃಷಿ ಮತ್ತು ಭೂಮಿಯ ಸುಸ್ಥಿರತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿವೆ ಎಂದು ವರದಿ ಹೇಳಿದೆ.
ಈ ಕಳಪೆ ಸ್ಥಾನಕ್ಕೆ ಕುಸಿದಿರುವುದರ ನಡುವೆ ಮೋದಿ ಸರ್ಕಾರ ದೇಶದ ಅರಣ್ಯ ಭೂಮಿಯನ್ನು ಕೈಗಾರಿಕಾ ಮತ್ತು ಗಣಿಗಾರಿಕೆ ಯೋಜನೆಗಳಿಗೆ ಬಿಟ್ಟುಕೊಡುತ್ತಿದೆ. ಇತ್ತೀಚೆಗೆ ಛತ್ತೀಸ್ಗಢದ ಹಸ್ದೇವ್-ಅರಂದ್ ಅರಣ್ಯ ಪ್ರದೇಶದ 1,742.6 ಹೆಕ್ಟೇರ್ ಅರಣ್ಯವನ್ನು ಅದಾನಿ ಸಮೂಹ ಕೈಗೆತ್ತಿಕೊಂಡಿರುವ ರಾಜಸ್ಥಾನ ಸರ್ಕಾರದ ಕಲ್ಲಿದ್ದಲು ಬ್ಲಾಕ್ಗಾಗಿ ಕೇಂದ್ರ ಪರಿಸರ ಸಚಿವಾಲಯವೇ ತಾತ್ವಿಕ ಅನುಮತಿ ನೀಡಿದೆ.
ಅದೇ ರೀತಿ, ಮಹಾರಾಷ್ಟ್ರದಲ್ಲೂ ಅದಾನಿ ಸಮೂಹದ ಎರಡು ಯೋಜನೆಗಳಿಗೆ ಸುಮಾರು 83,700 ಚದರ ಅಡಿ ಅರಣ್ಯ ಭೂಮಿಯನ್ನು ಧಾರೆ ಎರೆಯಲು ಕೇಂದ್ರದ ಜತೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇದರಲ್ಲಿ ರಾಯಗಢದ ಮೀಸಲು ಅರಣ್ಯ ಮತ್ತು ಮ್ಯಾಂಗ್ರೂವ್ ಪ್ರದೇಶವೂ ಸೇರಿದೆ ಎಂದು ವರದಿಯಾಗಿದೆ.
ಪತ್ರಿಕಾ ಸ್ವಾತಂತ್ರ್ಯ, ಹಸಿವು ಸೂಚ್ಯಂಕ, ತಲಾದಾಯ ಪ್ರಮಾಣ, ಉದ್ಯೋಗ ಮಟ್ಟ, ಉತ್ತಮ ಜೀವನ ಮಟ್ಟ ಸೇರಿದಂತೆ ಭಾರತದ ಬಹುತೇಕ ಸೂಚ್ಯಂಕಗಳು ಜಾಗತಿಕವಾಗಿ ತೀರಾ ಕೆಳಮಟ್ಟಕ್ಕೆ ಕುಸಿದಿವೆ. ಆದರೂ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳದೆ ರಾಜಕೀಯದಲ್ಲೇ ನಿರತವಾಗಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇದೀಗ ಟೀಕೆಗಳು ಹೆಚ್ಚುತ್ತಿವೆ.




