ತೆಲಂಗಾಣದ ಹೈದರಾಬಾದ್‌ನಲ್ಲಿ ಶುಕ್ರವಾರ (ನ. 13) ಆರಂಭವಾಗಿರುವ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ‘ಭಾರತ್ ಶೃಂಗಸಭೆ’ ಆರಂಭಕ್ಕೂ ಮುನ್ನವೇ ರಾಜಕೀಯ ಹಾಗೂ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ (MEA) ಈಗಾಗಲೇ ಅನುಮತಿ ಪಡೆದಿದ್ದ 315 ವಿದೇಶಿ ಭಾಷಣಕಾರರ ಪೈಕಿ ಸುಮಾರು 113 ಮಂದಿಗೆ ಭಾರತ ಪ್ರವೇಶಿಸಲು ಕೊನೆಯ ಕ್ಷಣದಲ್ಲಿ ನಿರಾಕರಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು (MHA) ಕೆಲವು ಪ್ರತಿನಿಧಿಗಳ ವೀಸಾಗಳನ್ನು ರದ್ದುಗೊಳಿಸಿದೆ ಎಂದು ಶೃಂಗಸಭೆಯ ಆಯೋಜಕರ ಆಪ್ತ ಮೂಲಗಳು ತಿಳಿಸಿವೆ. ನವೆಂಬರ್ 13 ಮತ್ತು 14ರಂದು ನಡೆಯಲಿರುವ ಈ ಎರಡು ದಿನಗಳ ಸಮ್ಮೇಳನಕ್ಕೆ ಇದುವರೆಗೆ ಸುಮಾರು 202 ಪ್ರತಿನಿಧಿಗಳು ಮಾತ್ರ ಭಾರತಕ್ಕೆ ತಲುಪಲು ಸಾಧ್ಯವಾಗಿದೆ.
ಭಾರತಕ್ಕೆ ಪ್ರವೇಶ ನಿರಾಕರಿಸಲ್ಪಟ್ಟವರಲ್ಲಿ ನಾರ್ವೆಯ ಪ್ರಖ್ಯಾತ ಪತ್ರಕರ್ತೆ ಹೆಲ್ಲೆ ಲಿಂಗ್ ಕೂಡ ಸೇರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ತಮಗೆ ಸಮ್ಮೇಳನದಲ್ಲಿ ಭಾಗವಹಿಸಲು ಅಗತ್ಯವಿದ್ದ ರಾಜಕೀಯ ಅನುಮತಿ ಮತ್ತು ವೀಸಾ ಎರಡೂ ಸಿಕ್ಕಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. “ಇದು ಆಘಾತಕಾರಿ ಮತ್ತು ಹುಚ್ಚುತನದ ನಿರ್ಧಾರ. ನನ್ನ ಬಳಿ ರಾಜಕೀಯ ಅನುಮತಿ ಮತ್ತು ಅಧಿಕೃತ ವೀಸಾ ಇದ್ದರೂ, ಗೃಹ ಇಲಾಖೆಯು ನನಗೆ ಭಾರತ ಪ್ರವೇಶಿಸಲು ಅನುಮತಿ ಇಲ್ಲ ಎಂದು ನಿರ್ಧರಿಸಿರುವುದು ತಿಳಿದುಬಂದಿದೆ. ವಾರಾಂತ್ಯದ ಸಮ್ಮೇಳನಕ್ಕಾಗಿ ಕೆಲವೇ ದಿನಗಳ ಮಟ್ಟಿಗೆ ನಾನು ಭಾರತಕ್ಕೆ ಬರಬೇಕಿತ್ತು. ನನ್ನ ವಿಷಯದಲ್ಲಿ ಗೃಹ ಇಲಾಖೆಯ ಹಸ್ತಕ್ಷೇಪ ಏಕೆ ಬಂತು ಎಂಬುದೇ ಅರ್ಥವಾಗುತ್ತಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆಗೆ ಭೇಟಿ ನೀಡಿದ್ದಾಗ, ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಭಾರತದಲ್ಲಿ ಭಾರಿ ಸುದ್ದಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿಯವರಿಗೆ, “ವಿಶ್ವದ ಅತ್ಯಂತ ಸ್ವತಂತ್ರ ಪತ್ರಿಕೋದ್ಯಮದ (ನಾರ್ವೆ ಮಾಧ್ಯಮಗಳ) ಪ್ರಶ್ನೆಗಳಿಗೆ ನೀವು ಉತ್ತರಿಸುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿದ್ದರು. ಇದೀಗ ತಮ್ಮ ವೀಸಾ ರದ್ದತಿಗೆ ಪ್ರಧಾನಿ ಮೋದಿಯವರಿಗೆ ಕೇಳಿದ್ದ ಆ ಪ್ರಶ್ನೆ, ಭಾರತ ಸರ್ಕಾರದ ನೀತಿಗಳ ಕುರಿತ ತಮ್ಮ ಟೀಕೆ ಹಾಗೂ ಸರ್ಕಾರಕ್ಕೆ ಆಪ್ತರಾಗಿರುವ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರ ಕುರಿತ ತಮ್ಮ ಬರಹಗಳೇ ಕಾರಣ ಎಂದು ಲಿಂಗ್ ಆರೋಪಿಸಿದ್ದಾರೆ.
ಸಮ್ಮೇಳನದ ವೀಸಾಗಳನ್ನು ನೀಡುವುದು ಅಥವಾ ರದ್ದುಗೊಳಿಸುವುದು ಸಾಮಾನ್ಯವಾಗಿ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಯೋಜಕರ ಮೂಲಗಳು ಸರ್ಕಾರದ ಮಾರ್ಗಸೂಚಿಗಳನ್ನು (FAQ) ಉಲ್ಲೇಖಿಸಿ ವಾದಿಸಿವೆ.
ಸರ್ಕಾರದ ದಾಖಲೆಗಳ ಪ್ರಕಾರ, ವಿದೇಶಿಯರು ಭಾರತಕ್ಕೆ ಭೇಟಿ ನೀಡಿ ದಕ್ಷಿಣ ಏಷ್ಯಾ, ರಾಷ್ಟ್ರೀಯ ಭದ್ರತೆ ಅಥವಾ ಕಾಶ್ಮೀರದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸುವುದಿದ್ದರೆ ಮಾತ್ರ ಪೂರ್ವಭಾವಿ ರಾಜಕೀಯ ಅನುಮತಿ ಕಡ್ಡಾಯವಾಗಿರುತ್ತದೆ. ಆದರೆ, ಭಾರತ್ ಶೃಂಗಸಭೆಯಲ್ಲಿ ಅಂತಹ ಯಾವುದೇ ವಿಷಯಗಳಿಲ್ಲ ಎಂಬುದನ್ನು ಆಯೋಜಕರು ಮೊದಲೇ ಖಚಿತಪಡಿಸಿದ್ದರು.
ಭಾರತೀಯ ರಾಯಭಾರ ಕಚೇರಿಗಳು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ವೀಸಾ ಅರ್ಜಿಗಳನ್ನು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಗೆ ಕಳುಹಿಸುತ್ತವೆ.
ಅರ್ಜಿದಾರರು ಅಫ್ಘಾನಿಸ್ತಾನ, ಚೀನಾ, ಸುಡಾನ್, ಪಾಕಿಸ್ತಾನ, ಪಾಕಿಸ್ತಾನ ಮೂಲದ ವಿದೇಶಿಯರು ಅಥವಾ ಯಾವುದೇ ದೇಶದ ಪೌರತ್ವವಿಲ್ಲದವರಾಗಿದ್ದರೆ ಹಾಗೂ ಪ್ರತಿನಿಧಿಗಳು ಜಮ್ಮು ಮತ್ತು ಕಾಶ್ಮೀರ ಅಥವಾ ನಿರ್ಬಂಧಿತ ಈಶಾನ್ಯ ರಾಜ್ಯಗಳಿಗೆ (ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಹೊರತುಪಡಿಸಿ) ಭೇಟಿ ನೀಡುವುದಿದ್ದರೆ.
ನವೆಂಬರ್ 10ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ಈ ಶೃಂಗಸಭೆಯಲ್ಲಿ ನೆರೆಯ ರಾಷ್ಟ್ರಗಳ ಯಾವುದೇ ಪ್ರತಿನಿಧಿಗಳು ಭಾಗವಹಿಸುತ್ತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದರು. ಅಲ್ಲದೆ, ಸಮ್ಮೇಳನ ನಡೆಯುತ್ತಿರುವುದು ಹೈದರಾಬಾದ್‌ನಲ್ಲಿಯೇ ಹೊರತು ಯಾವುದೇ ನಿರ್ಬಂಧಿತ ಪ್ರದೇಶದಲ್ಲಲ್ಲ. ಹೀಗಿದ್ದರೂ ಗೃಹ ಸಚಿವಾಲಯ ಮಧ್ಯಪ್ರವೇಶಿಸಿ ವೀಸಾ ರದ್ದುಪಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿಂತಕರು, ರಾಜಕೀಯ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತಂದು ಪ್ರಜಾಪ್ರಭುತ್ವ, ಜಾಗತಿಕ ಸವಾಲುಗಳು ಮತ್ತು ಭಾರತದ ಭವಿಷ್ಯದ ಕುರಿತು ಸಂವಾದ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಹೈದರಾಬಾದ್‌ನಲ್ಲಿ ಈ ‘ಭಾರತ್ ಶೃಂಗಸಭೆ’ಯನ್ನು ಆಯೋಜಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ಸಮ್ಮೇಳನಕ್ಕೆ ವಿಶೇಷ ಮಹತ್ವ ನೀಡಲಾಗಿತ್ತು.
ಆದರೆ, ವಿದೇಶಾಂಗ ಸಚಿವಾಲಯ ಒಪ್ಪಿಗೆ ನೀಡಿದ ನಂತರವೂ ಗೃಹ ಸಚಿವಾಲಯದಿಂದ ನೂರಕ್ಕೂ ಹೆಚ್ಚು ಭಾಷಣಕಾರರಿಗೆ ತಡೆ ಒಡ್ಡಿರುವುದು ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ಸಂವಾದದ ಮೇಲಿನ ನಿರ್ಬಂಧ ಎಂದು ಕಾಂಗ್ರೆಸ್ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.



