ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳ ತೆಗೆದುಹಾಕುವಿಕೆ ವಿಚಾರದಲ್ಲಿ ಚುನಾವಣಾ ಆಯೋಗವು (EC) ವಿಪಕ್ಷಗಳ ತೀವ್ರ ವಾಗ್ದಾಳಿಗೆ ತುತ್ತಾಗಿದೆ. ಈ ಬೆನ್ನಲ್ಲೇ ಎಂದಿನಂತೆ ಬಿಜೆಪಿ ಆಯೋಗದ ಸಮರ್ಥನೆಗೆ ಧಾವಿಸಿದೆ. ಎಸ್‌ಐಆರ್ ಪ್ರಕ್ರಿಯೆಯು ಬಿಜೆಪಿ ಪರವಾಗಿದೆ ಎಂಬ ಆರೋಪಗಳು, ಅದಕ್ಕೆ ಬಲ ನೀಡುವ ಹಲವು ಘಟನೆಗಳೂ ನಡೆದಿವೆ. ಆದರೆ ವಿಪಕ್ಷಗಳ ಆರೋಪವನ್ನು ಆಧಾರರಹಿತ ಮತ್ತು ದ್ವಿಮುಖ ನೀತಿ ಎಂದು ಬಿಜೆಪಿ ಹೇಳಿಕೊಂಡಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, “SIR ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಹಾಗೂ ತಮ್ಮ ಬೆಂಬಲಿಗರ ಮತಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ವಿಪಕ್ಷಗಳು ಯಾವ ಕ್ಷೇತ್ರಗಳ ಬಗ್ಗೆ ಸತತವಾಗಿ ಆರೋಪ ಮಾಡುತ್ತಿದ್ದವೋ, ಅದೇ ಕ್ಷೇತ್ರಗಳ ಚುನಾವಣಾ ಫಲಿತಾಂಶಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಮತ ಕಳವು ದೇಶದ್ರೋಹದ ಕೃತ್ಯ: ಎಕ್ಸ್‌ಪ್ರೆಸ್ ವರದಿ ಬೆನ್ನಲ್ಲೇ ಇಸಿ, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
“ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕಲಾದ ಕ್ಷೇತ್ರಗಳಲ್ಲೂ ಟಿಎಂಸಿ ಮತ್ತು ಇತರೆ ವಿಪಕ್ಷಗಳೇ ಬಹುಸಂಖ್ಯಾತ ಸ್ಥಾನಗಳನ್ನು ಗೆದ್ದುಕೊಂಡಿವೆ. ಒಂದು ವೇಳೆ ಆಯೋಗವು ಯಾವುದೋ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದರೆ ಈ ಫಲಿತಾಂಶ ಹೇಗೆ ಸಾಧ್ಯವಾಗುತ್ತಿತ್ತು” ಎಂದು ಬಿಜೆಪಿ ಪ್ರಶ್ನಿಸಿದೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಚುನಾವಣಾ ಆಯುಕ್ತರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ, “ಆಯೋಗದ ಆಂತರಿಕ ಸಭೆಗಳಲ್ಲಿ ಸುದೀರ್ಘ ಚರ್ಚೆಗಳು, ಲಿಖಿತ ಟಿಪ್ಪಣಿಗಳು ಮತ್ತು ಭಿನ್ನ ಅಭಿಪ್ರಾಯಗಳ ವಿನಿಮಯ ನಡೆಯುವುದು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತ. ಪ್ರತಿಯೊಬ್ಬ ಆಯುಕ್ತರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರುತ್ತದೆ. ಆಡಳಿತಾತ್ಮಕವಾಗಿ ಚರ್ಚಿಸಿ ಅಂತಿಮವಾಗಿ ಸರ್ವಸಮ್ಮತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆಯೇ ಹೊರತು ಅಲ್ಲಿ ಯಾವುದೇ ಏಕಪಕ್ಷೀಯ ನಿರ್ಧಾರವಾಗಿಲ್ಲ” ಎಂದು ಪ್ರತಿಪಾದಿಸಿದೆ.




