“ಇಂದು ನಾನು ಕಾರ್ಪೆಟ್ ಮೇಲೆ ನಡೆಯುತ್ತೇನೆ. ಆದರೆ ಈ ಹಿಂದೆ ನಾನು ಕಾಡಿನಲ್ಲಿ ಎಲೆಗಳ ಮೇಲೆಯೇ ಮಲಗಿದ ಕಾಲವಿತ್ತು” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ರಾಜ್ಯಸಭೆ ಸಂಸದ ಕಪಿಲ್ ಸಿಬಲ್ ಅವರ ಪಾಡ್‌ಕ್ಯಾಸ್ಟ್ ಸರಣಿ ‘ದಿಲ್ ಸೇ’ ನಲ್ಲಿ ಮಾತನಾಡಿದ ಖರ್ಗೆ ಸ್ವಾತಂತ್ರ್ಯದ ನಂತರ ಬೀದರ್‌ನಲ್ಲಿ ರಜಾಕಾರರ ಹಿಂಸಾಚಾರಕ್ಕೆ ತಾಯಿ ಸೇರಿದಂತೆ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡ ನಂತರ ತಾವು ಕಳೆದ ಕಷ್ಟದ ಬದುಕನ್ನು ನೆನಪಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? 5 ವರ್ಷ ಕಷ್ಟ ಪಟ್ಟಿದ್ದು ನಾನು, 4 ತಿಂಗಳ ಹಿಂದೆ ಬಂದವರು ಸಿಎಂ ಆದರು: ಹುದ್ದೆ ಕೈತಪ್ಪಿದ ಬಗ್ಗೆ ಖರ್ಗೆ ಮಾತು
“ಆರು ವರ್ಷದವನಿದ್ದಾಗ, ಬೀದರ್‌ನಲ್ಲಿ ರಜಾಕಾರರ ದಾಳಿಗೆ ನನ್ನ ತಾಯಿ, ಸಹೋದರ, ಸಹೋದರಿ ಮತ್ತು ಚಿಕ್ಕಪ್ಪನನ್ನು ಕಳೆದುಕೊಂಡೆ. ರಜಾಕಾರರು ನಮ್ಮ ಮನೆಗೆ ಬೆಂಕಿ ಹಚ್ಚಿದಾಗ ನನ್ನ ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಾಯಿ ಮತ್ತು ಇತರರನ್ನು ರಜಾಕಾರರು ಕೊಂದರು. ನಾನು ಹೊಲದಲ್ಲಿ ಆಟವಾಡುತ್ತಿದ್ದೆ. ನನ್ನ ಕುಟುಂಬದ ಎಲ್ಲರ ಹತ್ಯೆಯಾದ ನಂತರ ಬೀದರ್ ತೊರೆಯುವ ಕಠಿಣ ನಿರ್ಧಾರವನ್ನು ನನ್ನ ತಂದೆ ತೆಗೆದುಕೊಂಡರು” ಎಂದು ಹೇಳಿದ್ದಾರೆ.
“ಗ್ರಾಮದಿಂದ ತಪ್ಪಿಸಿಕೊಂಡು ಹೊರಬಂದ ಬಳಿಕ ನಿಜಾಮನ ಕೋಪಕ್ಕೆ ಗುರಿಯಾಗುವ ಭಯದಿಂದ ನಮ್ಮ ಸಂಬಂಧಿಕರೂ ನಮಗೆ ಆಶ್ರಯ ನೀಡಲಿಲ್ಲ. ಆದ್ದರಿಂದ ನಾವು ಕಾಡಿನಲ್ಲಿ ಕೆಲವು ರಾತ್ರಿಗಳನ್ನು ಕಳೆಯಬೇಕಾಯಿತು. ಇಂದು ನನ್ನ ಕಾಲುಗಳ ಕೆಳಗೆ ಕಾರ್ಪೆಟ್ ಹಾಕಿಕೊಂಡು ನಾನು ನಡೆಯುತ್ತೇನೆ. ಆದರೆ ಆರು ವರ್ಷದ ಮಗುವಾಗಿದ್ದಾಗ ನಾನು ಕಾಡಿನ ಎಲೆಗಳ ಮೇಲೆ ಮಲಗಿದ್ದೆ” ಎಂದು ಖರ್ಗೆ ಬಾಲ್ಯ ನೆನೆದಿದ್ದಾರೆ.
ಶಿಕ್ಷಣ ಪಡೆಯಲು ತಾವು ಪಟ್ಟ ಕಷ್ಟದ ಬಗ್ಗೆಯೂ ಖರ್ಗೆ ಈ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. “ನಾವು ಕಲಬುರಗಿಗೆ ಹೋದೆವು. ಅಲ್ಲಿ ವ್ಯಕ್ತಿಯೊಬ್ಬರು ನಾನು ಶಾಲೆಗೆ ಸೇರಲು ಸಹಾಯ ಮಾಡಿದರು. ನನ್ನ ತಂದೆಗೆ ಅಲ್ಲಿಯೇ ಒಂದು ಗಿರಣಿಯೊಂದರಲ್ಲಿ ಅರೆಕಾಲಿಕ ಕೆಲಸ ಸಿಕ್ಕಿತು. ಇಂದು ನಾನು ಏನೇ ಆಗಿದ್ದರೂ ಅದಕ್ಕೆ ನನ್ನ ತಂದೆಯೇ ಕಾರಣ” ಎಂದು ಭಾವುಕರಾದರು.
ಅದಾದ ಬಳಿಕ ಖರ್ಗೆ ಕಾನೂನು ಅಧ್ಯಯನ ಮಾಡಿ ಕಾರ್ಮಿಕ ಚಳವಳಿಯನ್ನು ಮುನ್ನಡೆಸಿದರು. ನಂತರ ಶಾಸಕ, ಸಂಸದರಾಗಿದ್ದಾರೆ. ಸದ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.




