ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ (BHU) ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಜಾತಿ ಆಧಾರಿತ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ (ಎಸ್‌ಪಿ) ವಿದ್ಯಾರ್ಥಿ ನಾಯಕನನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ.
ವಿಶ್ವವಿದ್ಯಾಲಯದ ಹಿಂದಿ ವಿಭಾಗದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಪ್ರಶಾಂತ್ ಮಿಶ್ರಾ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಸ್‌ಪಿ ವಿದ್ಯಾರ್ಥಿ ಘಟಕ ಸಮಾಜವಾದಿ ಛಾತ್ರ ಸಭಾದ ಪದಾಧಿಕಾರಿ ಹಿಮಾಂಶು ಯಾದವ್ ಎಂಬಾತ ತರಗತಿಯ ಒಳಗೆ ತನ್ನ ಜಾತಿಯನ್ನು ಕೇಳಿ ಹಲ್ಲೆ ನಡೆಸಿದ್ದಾನೆ ಎಂದು ಮಿಶ್ರಾ ಆರೋಪಿಸಿದ್ದಾರೆ.
“ಬುಧವಾರ ಬೆಳಿಗ್ಗೆ ಸುಮಾರು 11.45ಕ್ಕೆ ನಾನು ತರಗತಿಗೆ ಬಂದಾಗ, ಹಿಮಾಂಶು ಯಾದವ್ ಅವರು ನನ್ನ ಹೆಸರು, ಜಾತಿ ಮತ್ತು ಕೋರ್ಸ್ ಬಗ್ಗೆ ವಿಚಾರಿಸಿದರು. ನನ್ನ ಮಾಹಿತಿ ನೀಡಿದ ಬಳಿಕ, ನಾವೂ ಯಾದವ್‌ಗೆ ಅದೇ ಪ್ರಶ್ನೆಗಳನ್ನು ಕೇಳಿದೆ. ಇದರಿಂದ ಕುಪಿತಗೊಂಡ ಯಾದವ್ ನನ್ನ ಕಪಾಳಕ್ಕೆ ಹೊಡೆದು, ಕೊಲೆ ಬೆದರಿಕೆ ಹಾಕಿದ್ದು, ಜಾತಿ ನಿಂದನೆ ಮಾಡಿದ್ದಾರೆ” ಎಂದು ಮಿಶ್ರಾ ವಿವರಿಸಿದ್ದಾರೆ. ಇಡೀ ಘಟನೆಯು ತರಗತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ಲೇಖನ ಓದಿದ್ದೀರಾ?: ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ
ವಿದ್ಯಾರ್ಥಿಯಿಂದ ದೂರು ಸ್ವೀಕರಿಸಿದ ವಿಶ್ವವಿದ್ಯಾಲಯದ ಪ್ರಾಕ್ಟೋರಿಯಲ್ ವಿಭಾಗವು ದೂರನ್ನು ವಾರಣಾಸಿಯ ಲಂಕಾ ಪೊಲೀಸ್ ಠಾಣೆಗೆ ರವಾನಿಸಿತ್ತು. ಆರೋಪಿ ಯಾದವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115(2), 352, 351(3) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಯು ತನಗೆ ರ‍್ಯಾಗಿಂಗ್‌ನಿಂದ ರಕ್ಷಣೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನ್ಯಾಯ ಒದಗಿಸಬೇಕು ಎಂದು ಪ್ರಾಕ್ಟೋರಿಯಲ್ ವಿಭಾಗಕ್ಕೆ ಮನವಿ ಮಾಡಿದ್ದಾರೆ.



