ಕೋಳಿ ಸಾಕಾಣಿಕೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘಗಳು ಜಂಟಿಯಾಗಿ ನವೆಂಬರ್ 25ರಂದು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಕೋಳಿ ಸ್ವೀಕಾರ ಮತ್ತು ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿವೆ ಎಂದು ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಹಾಗೂ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಳಿ ಸಾಕಾಣಿಕೆ ರೈತರಿಗೆ ಪ್ರತಿ ಕೆ.ಜಿ.ಗೆ ₹20 ಸಾಕಾಣಿಕೆ ವೆಚ್ಚ ನೀಡಬೇಕು ಹಾಗೂ ಈಗಾಗಲೇ ಸರ್ಕಾರ ಘೋಷಿಸಿರುವ ಹೆಚ್ಚುವರಿ ₹10 ಸಹಾಯಧನವನ್ನು ತಕ್ಷಣ ಜಾರಿಗೊಳಿಸಬೇಕು. ಐದು ವರ್ಷಗಳಿಂದ ನೀಡುತ್ತಿರುವ ₹6.25 ಸಾಕಾಣಿಕೆ ವೆಚ್ಚ ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಯಾವುದಕ್ಕೂ ಸಾಲುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಸುಗಟೂರು ಶ್ರೀಧರ್ ರೆಡ್ಡಿ ಮಾತನಾಡಿ, ಕೋಳಿ ಸಾಕಾಣಿಕೆ ರೈತರ ಹೋರಾಟದ ಫಲವಾಗಿ ಆರು ತಿಂಗಳ ಹಿಂದೆ ಸರ್ಕಾರ ಪ್ರತಿ ಕೆ.ಜಿ.ಗೆ ತಾತ್ಕಾಲಿಕವಾಗಿ ₹10 ಹೆಚ್ಚುವರಿ ನೀಡುವಂತೆ ಕಂಪನಿಗಳಿಗೆ ಸೂಚಿಸಿತ್ತು. ಆದರೆ ಕೋಳಿ ಮರಿ ಪೂರೈಕೆ ಕಂಪನಿಗಳು ಸರ್ಕಾರದ ಆದೇಶವನ್ನೇ ಪಾಲಿಸದೆ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ಈಗಾಗಲೇ ರಾಜ್ಯಾದ್ಯಂತ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಎರಡು-ಮೂರು ಬಾರಿ ಪ್ರಯತ್ನಿಸಿದರೂ ಅವಕಾಶ ನೀಡಿಲ್ಲ. ಹೈನುಗಾರರ ಹಿತದೃಷ್ಟಿಯಿಂದ ಹಾಲಿನ ದರ ಹಾಗೂ ಸಹಾಯಧನ ಹೆಚ್ಚಳಕ್ಕೆ ತ್ವರಿತವಾಗಿ ಕ್ರಮ ಕೈಗೊಂಡಿರುವ ಸರ್ಕಾರ, ಕೋಳಿ ಸಾಕಾಣಿಕೆ ರೈತರ ವಿಚಾರದಲ್ಲಿ ಏಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರಶ್ನಿಸಿದರು.
ಕೋಳಿ ಸಾಕಾಣಿಕೆ ಸಂಘದ ಜಿಲ್ಲಾ ಅಧ್ಯಕ್ಷ ದಿಂಬ ನಾಗರಾಜಗೌಡ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ನ.25ರಂದು ನಡೆಯುವ ವಿಧಾನಸೌಧ ಚಲೋ ಚಳವಳಿಯಲ್ಲಿ ಜಿಲ್ಲೆಯ ಎಲ್ಲ ಕೋಳಿ ಸಾಕಾಣಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಎನ್.ಎನ್ ಶ್ರೀರಾಮ್, ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ್ ರೆಡ್ಡಿ, ಶ್ರೀನಿವಾಸನಾಯ್ಡು ಮುಖಂಡರಾದ ವೆಂಕಟೇಶಪ್ಪ, ವೇಣುಗೋಪಾಲ್, ರಾಜರೆಡ್ಡಿ ಲೋಕೇಶ್, ರಾಜಪ್ಪ, ರಮೇಶ್, ಮಂಜುನಾಥ್, ಮುಂತಾದವರು ಇದ್ದರು




