ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ‘ಅಪರೂಪವೂ ಅಥವಾ ಅಸಾಮಾನ್ಯ’ವೇನೂ ಅಲ್ಲ. ಪ್ರತಿಯೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆಯನ್ನೇ ವಿಧಿಸಬೇಕಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. 2014ರಲ್ಲಿ ವರದಕ್ಷಿಣೆ ಕಿರುಕುಳದಿಂದ ಪತ್ನಿ ಮತ್ತು ಅಪ್ರಾಪ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪತಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಡಿತಗೊಳಿಸಿದೆ. 10 ವರ್ಷಗಳ ಜೈಲು ಶಿಕ್ಷೆಗೆ ಬದಲಾಯಿಸಿದೆ.
ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಅಪೂರ್ವ ಸಿನ್ಹಾ ರಾಯ್ ಅವರಿದ್ದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ. “ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ಕೇವಲ ‘ಅಪರೂಪದ ಪ್ರಕರಣಗಳಿಗೆ’ ಮಾತ್ರ ಕಾಯ್ದಿರಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತದೆ. ಆದ್ದರಿಂದ, ಪ್ರತಿ ವರದಕ್ಷಿಣೆ ಸಾವಿನ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ಕಡ್ಡಾಯವಲ್ಲ” ಎಂದು ಪೀಠ ಹೇಳಿದೆ.
ವರದಕ್ಷಿಣೆ ಬೇಡಿಕೆಯ ಕಿರುಕುಳವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಗಳು ಸಮಾಜದಲ್ಲಿ ಸಾಮಾನ್ಯವಾಗುತ್ತಿವೆ ಎಂದು ಹೈಕೋರ್ಟ್ ಹೇಳಿದೆ. ಪ್ರಸ್ತುತ ಪ್ರಕರಣದಲ್ಲಿ ಅಪರಾಧಿಯಾಗಿರುವ ಪತಿ ಸಜಲ್ ಪರುಯಿ ಎಂಬಾತನಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಕಡಿತಗೊಳಿಸುವುದಾಗಿ ತಿಳಿಸಿದೆ. ಆದರೆ, ಆತನಿಗೆ ವಿಧಿಸಲಾಗಿದ್ದ ದಂಡದ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೂ, ಪತಿಯ ಮೇಲಿನ ಅಪರಾಧ ನಿರ್ಣಯವನ್ನು ಹೈಕೋರ್ಟ್ ಎತ್ತಿಹಿಡಿದಿದೆ. “ಹೆಂಡತಿಯ ಮೇಲೆ ಆಕೆಯ ಪಿತೃಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವಂತೆ ಪತಿ ಒತ್ತಡ ಹೇರುವುದನ್ನು ಕೂಡ ‘ವರದಕ್ಷಿಣೆ ಬೇಡಿಕೆ’ ಎಂದೇ ಪರಿಗಣಿಸಬಹುದು” ಎಂದು ಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ:
ಮೃತ ದುರ್ದೈವಿ ಚಯಾನಿಕಾ ಮತ್ತು ಅಪರಾಧಿ ಸಜಲ್ ಪರುಯಿ 2010ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ವಧುವಿನ ಕುಟುಂಬದವರು ಚಿನ್ನ, ನಗದು ಹಾಗೂ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಇತ್ತು. ಆದರೆ, ಮದುವೆಯಾದ ಕೆಲವು ಸಮಯದ ನಂತರ, ಸಜಲ್ ಮತ್ತು ಆತನ ಕುಟುಂಬದವರು ಹೆಚ್ಚಿನ ಹಣಕ್ಕಾಗಿ ಚಯಾನಿಕಾಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಆಕೆಯ ತಂದೆಯ ಆಸ್ತಿಯಲ್ಲಿ ಪಾಲು ತರುವಂತೆ ಒತ್ತಾಯಿಸಿದ್ದರು. ಕೊನೆಗೆ ಆಕೆಯ ಸಹೋದರ ಆಸ್ತಿಯ ಕೆಲವು ಭಾಗಗಳನ್ನು ಮಾರಿ ಆಕೆಗೆ ಪಾಲು ನೀಡಿದ್ದರು.
ಹೀಗಿದ್ದರೂ ಕಿರುಕುಳ ನಿಲ್ಲದ ಕಾರಣ, 2014ರ ಜೂನ್‌ನಲ್ಲಿ ಚಯಾನಿಕಾ ತಮ್ಮ ಮಗಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪತಿ ಮತ್ತು ಆತನ ಪೋಷಕರ ವಿರುದ್ಧ ವರದಕ್ಷಿಣೆ ಸಾವಿನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪತಿಯ ಅಪರಾಧ ಸಾಬೀತಾಗಿದೆ. ಅಪರಾಧಿ ಸಜಲ್‌ಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯವು, ಆತನ ಪೋಷಕರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲವೆಂದು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.



