ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರೂಢಿಗಿಂತ ಕಡಿಮೆ ಮಳೆಯಾಗಿದ್ದು, ಈ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಅಗತ್ಯವಾಗಿದೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಮೋಡ ಬಿತ್ತನೆ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಹಾವೇರಿ ಜಿಲ್ಲೆಯಾದ್ಯಂತ ಮೂರು ದಿನ ಮೋಡ ಬಿತ್ತನೆ ಮಾಡಲಾಗುವುದು. ಮುಂಗಾರು ಮಳೆ ಕೊರತೆಯಿಂದ ರೈತರ ಬೆಳೆಗಳಿಗೆ ಹಾನಿಯಾಗಿದೆ. ಮುಂಗಾರು ಬೆಳೆ ಹಾನಿ ಕುರಿತು ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಗಾಲದ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಜಿಲ್ಲೆಯ 4 ತಾಲೂಕುಗಳಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಯಿತು. ಸೋಮವಾರ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.
ಮಳೆ ಸುರಿಸುವ ಮೋಡಗಳು ಲಭ್ಯವಿದ್ದ ಕಡೆ ಬಿತ್ತನೆ ಮಾಡಲಾಗಿದ್ದು, ಸೋಮವಾರ ಮಧ್ಯಾಹ್ನ 2:30ರಿಂದ ಕಾರ್ಯಾಚರಣೆ ಆರಂಭವಾಗಿದೆ. ಹಾನಗಲ್ ಮತ್ತು ಸವಣೂರು ತಾಲೂಕುಗಳಲ್ಲಿ 2 ಸುತ್ತು, ಹಾವೇರಿ ಮತ್ತು ರಾಣಿಬೆನ್ನೂರು ತಾಲೂಕುಗಳಲ್ಲಿ ಒಂದು ಸುತ್ತಿನ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ> ಹಾವೇರಿ | ಮಳೆ ಕೊರತೆ ಹಿನ್ನೆಲೆ ಶಾಸಕರ ಸ್ವಂತ ವೆಚ್ಚದಲ್ಲಿ ಮೋಡ ಬಿತ್ತನೆ
ಶಾಸಕ ಕೋಳಿವಾಡ್ ಮಾತನಾಡಿ, “ಹಾವೇರಿ, ಹಾನಗಲ್, ಸವಣೂರು ಹಾಗೂ ರಾಣಿಬೆನ್ನೂರು ತಾಲೂಕುಗಳಲ್ಲಿ ಮೋಡ ಬಿತ್ತನೆ ನಡೆಸಲಾಗಿದ್ದು, ಗಂಟೆಗೆ 15 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ. ತಜ್ಞರ ಸಲಹೆಯ ಮೇರೆಗೆ ಮುಂದಿನ 2 ರಿಂದ 3 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಹಿರೇಕೆರೂರು, ಬ್ಯಾಡಗಿ, ಶಿಗ್ಗಾಂವ್ ಮತ್ತು ರಟ್ಟೀಹಳ್ಳಿ ತಾಲೂಕುಗಳಲ್ಲಿ ಮೋಡದ ಸಾಂದ್ರತೆ ಇಲ್ಲದ ಕಾರಣ ಬಿತ್ತನೆ ಮಾಡಲಾಗಲಿಲ್ಲ. ಹವಾಮಾನ ಅನುಕೂಲಗಳನ್ನು ಗಮನಿಸಿ ಮುಂಬರುವ ದಿನಗಳಲ್ಲಿ ಉಳಿದ ತಾಲೂಕುಗಳಲ್ಲೂ ಮೋಡ ಬಿತ್ತನೆ ಕಾರ್ಯ ನಡೆಸಲಾಗುವುದು” ಎಂದು ಹೇಳಿದರು.
This video cannot be played in your browser. Open the video directly





