ತನ್ನ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ 1995ರಲ್ಲಿ ಇಬ್ಬರನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಆರ್‌ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಶುಕ್ರವಾರ(ಸೆ.01) ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣವು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಅಸಾಧಾರಣ ದುಃಖದ ಘಟನೆಯಾಗಿದೆ ಎಂದು ಹೇಳಿದ ನ್ಯಾಯಾಧೀಶರು ಹೈಕೋರ್ಟ್‌ನಿಂದ ಖುಲಾಸೆಗೊಂಡಿರುವುದನ್ನು ರದ್ದುಗೊಳಿಸುವ ಮೂಲಕ ಮಾಜಿ ಸಂಸದರನ್ನು ಆಗಸ್ಟ್ 18 ರಂದು ದೋಷಿ ಎಂದು ತೀರ್ಪು ನೀಡಿತ್ತು.
ಈ ಪ್ರಕರಣವನ್ನು ಶಿಕ್ಷೆಯ ಹಂತದಲ್ಲಿ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರ ಪೀಠ, “ಈ ರೀತಿಯ ಪ್ರಕರಣವನ್ನು ನಾವು ಹಿಂದೆಂದೂ ನೋಡಿಲ್ಲ” ಎಂದು ಹೇಳಿದೆ.
ಸಿಂಗ್ ಪರವಾಗಿ ಹಿರಿಯ ವಕೀಲರಾದ ಎಎಂ ಸಿಂಘ್ವಿ ಮತ್ತು ಆರ್ ಬಸಂತ್ ಮತ್ತು ಸಂತ್ರಸ್ತ ಹರೇಂದ್ರ ರೈ ಪರ ವಕೀಲರನ್ನು ಆಲಿಸಿದ ಪೀಠವು, “ಜೀವಾವಧಿ ಅಥವಾ ಮರಣದಂಡನೆ ಎರಡು ಆಯ್ಕೆಗಳಿವೆ” ಎಂದು ಹೇಳಿತು.
ಈ ಸುದ್ದಿ ಓದಿದ್ದೀರಾ? ಲಖನೌ | ಕೇಂದ್ರ ಸಚಿವ ಕೌಶಲ್ ಕಿಶೋರ್ ಮನೆಯಲ್ಲಿ ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ
ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಿದ ನ್ಯಾಯಾಲಯವು ಮೃತರಾದ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ಮತ್ತು ಗಾಯಗೊಂಡ ಸಾಕ್ಷಿಗೆ 5 ಲಕ್ಷ ರೂ.ನೀಡಬೇಕೆಂದು ಆರೋಪಿಗೆ ತಿಳಿಸಿತು.
ಡಿಸೆಂಬರ್ 2008 ರಲ್ಲಿ ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಭುನಾಥ್ ಸಿಂಗ್ ಅವರನ್ನು ಖುಲಾಸೆಗೊಳಿಸಿತು. ಪಾಟ್ನಾ ಹೈಕೋರ್ಟ್ ಕೂಡ 2012 ರಲ್ಲಿ ಖುಲಾಸೆಯನ್ನು ಎತ್ತಿಹಿಡಿದಿತ್ತು ಖುಲಾಸೆಗೊಳಿಸಿರುವುದನ್ನು ಮೃತ ರಾಜೇಂದ್ರ ರೈ ಅವರ ಸಹೋದರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು.
1995, ಮಾರ್ಚ್‌ನಲ್ಲಿ ಬಿಹಾರದ ಸರನ್ ಜಿಲ್ಲೆಯ ಚಪ್ರಾ ಮತಗಟ್ಟೆಯ ಬಳಿ ತನಗೆ ವಿರುದ್ಧವಾಗಿ ಮತ ಚಲಾಯಿಸಿದ ಕಾರಣ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅವರ ಸಲಹೆಯಂತೆ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.