ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಪದಗ್ರಹಣದ ಬೆನ್ನಲ್ಲೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸುವತ್ತ ಅವರು ವೇಗವಾಗಿ ಹೆಜ್ಜೆ ಇಟ್ಟಿದ್ದು, ಕರ್ನಾಟಕ ಸರ್ಕಾರದ ಮಾದರಿಯ ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಸಹಿ ಮಾಡಿದ ಮೊದಲ ಕಡತವು ಬಹುನಿರೀಕ್ಷಿತ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದ್ದಾಗಿದೆ. ರಾಜ್ಯದ ಎಲ್ಲಾ ಗೃಹಬಳಕೆಯ ಗ್ರಾಹಕರಿಗೆ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮಹತ್ವದ ಆದೇಶಕ್ಕೆ ಸಿಎಂ ವಿಜಯ್ ಅವರು ತಮ್ಮ ಮೊದಲ ಸಹಿ ಹಾಕುವ ಮೂಲಕ ರಾಜ್ಯದ ಜನಸಾಮಾನ್ಯರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.
ಮಹಿಳಾ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ನೂತನ ಮುಖ್ಯಮಂತ್ರಿಗಳು, ಇದಕ್ಕಾಗಿ ವಿಶೇಷ ವ್ಯವಸ್ಥೆಯೊಂದನ್ನು ರೂಪಿಸಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಮತ್ತು ಅವರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ‘ಮೀಸಲು ವಿಶೇಷ ಪಡೆ’ಯನ್ನು ರಚಿಸುವ ಮತ್ತೊಂದು ಪ್ರಮುಖ ಕಡತಕ್ಕೂ ಅವರು ತಮ್ಮ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕಾರ
ಇದರ ಜೊತೆಗೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ (ಡ್ರಗ್ಸ್) ಹಾವಳಿಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಸರ್ಕಾರ ಕಠಿಣ ನಿಲುವು ತಳೆದಿದೆ. ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ ಡ್ರಗ್ಸ್ ಜಾಲದ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ಸಿಎಂ ವಿಜಯ್ ಅವರು ಸೂಚನೆ ನೀಡಿದ್ದಾರೆ.
ಸಿಎಂ ವಿಜಯ್ ಅವರು ಜನಪರ ಯೋಜನೆಗಳ ಮೂಲಕ ಆಡಳಿತದ ಮೊದಲ ದಿನವೇ ಅವರು ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದು, ಮುಂಬರುವ ದಿನಗಳಲ್ಲಿ ಅವರ ಆಡಳಿತ ವೈಖರಿ ಕುರಿತು ಜನರಲ್ಲಿ ಭಾರಿ ನಿರೀಕ್ಷೆಗಳು ಮೂಡಿವೆ.




