ರಾಜಧಾನಿಯ ಮಲ್ಲತ್ತಹಳ್ಳಿಯಲ್ಲಿರುವ (ಶ್ರೀಗಂಧಕಾವಲು) ಪಿಯುಸಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಳಪೆ ಆಹಾರ, ಭದ್ರತಾ ಲೋಪ ಹಾಗೂ ವಾರ್ಡನ್ ಬೇಜವಾಬ್ದಾರಿಯನ್ನು ಖಂಡಿಸಿ ವಿದ್ಯಾರ್ಥಿಗಳು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ದೂರು ನೀಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಾಸ್ಟೆಲ್‌ನಲ್ಲಿ ಪ್ರತಿದಿನ ನೀಡುವ ಅನ್ನ-ಸಾಂಬಾರ್‌ನಲ್ಲಿ ಜಿರಳೆ ಮತ್ತು ಹುಳುಗಳು ಪತ್ತೆಯಾಗುತ್ತಿದ್ದು, ಇಂತಹ ಕಳಪೆ ಹಾಗೂ ಪೌಷ್ಟಿಕಾಂಶವಿಲ್ಲದ ಆಹಾರ ಸೇವಿಸಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ‘ನಮಗೆ ಮನುಷ್ಯರು ತಿನ್ನುವ ಆಹಾರ ನೀಡುತ್ತಿದ್ದಾರೆಯೇ ಅಥವಾ ಪ್ರಾಣಿಗಳಿಗೋ?’ ಎಂದು ವಿದ್ಯಾರ್ಥಿಗಳು ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದರ ಜೊತೆಗೆ, ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಇದುವರೆಗೆ ಪಠ್ಯಪುಸ್ತಕಗಳನ್ನು ವಿತರಿಸಿಲ್ಲ. ಈ ಬಗ್ಗೆ ವಾರ್ಡನ್ ಬಳಿ ಮನವಿ ಮಾಡಿದರೆ ಕೇವಲ ಸುಳ್ಳು ಭರವಸೆಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನು ಓದಿದ್ದೀರಾ? Hantavirus | ಹಂಟಾ ವೈರಸ್ ಕೋವಿಡ್‌ಗಿಂತ ಅಪಾಯಕಾರಿಯೇ?
ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಸ್ಟೆಲ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆ. ಯಾವುದೇ ರೆಕಾರ್ಡಿಂಗ್ ವ್ಯವಸ್ಥೆ ಇಲ್ಲದ ಕಾರಣ ಅಪರಿಚಿತರು ಬೇಕಾಬಿಟ್ಟಿ ಹಾಸ್ಟೆಲ್ ಒಳಗೆ ಪ್ರವೇಶಿಸುತ್ತಿದ್ದಾರೆ. ಇನ್ನು, ವಾರ್ಡನ್ ಅವರು ವಾರಕ್ಕೆ ಕೇವಲ ಎರಡು ದಿನ ಮಾತ್ರ ಹಾಸ್ಟೆಲ್‌ಗೆ ಭೇಟಿ ನೀಡುತ್ತಿದ್ದಾರೆ. ಹಾಸ್ಟೆಲ್‌ನ ಇತರ ಸಿಬ್ಬಂದಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಅಸಭ್ಯವಾಗಿ ವರ್ತಿಸಿ, ಬೆದರಿಕೆ ಹಾಕುತ್ತಿದ್ದಾರೆ. ನಿಯಮ ಮೀರಿ ಒಂದೇ ಕೊಠಡಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಲಾಗುತ್ತಿದ್ದು, ಓದಲು ಪೂರಕ ವಾತಾವರಣವಿಲ್ಲದೆ ವಿದ್ಯಾರ್ಥಿಗಳು ಶೈಕ್ಷಣಿಕ ಹಿನ್ನಡೆ ಅನುಭವಿಸುವಂತಾಗಿದೆ.
ಈ ಎಲ್ಲಾ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಾದ ಮಹದೇವಸ್ವಾಮಿ, ಅನಿಲ್ ಮಹಾದೇವ್, ವರುಣ್, ಲಿಖಿತ್, ವಿಶ್ವ, ಪ್ರಜ್ವಲ್, ಶಿವಕುಮಾರ್, ಶಶಿಕುಮಾರ್, ದರ್ಶನ್, ಮಲ್ಲಿಕಾರ್ಜುನ, ನಿಂಗರಾಜ್, ಮಂಚಯ್ಯ ಹಾಗೂ ಹನುಮಂತ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಹಿ ಮಾಡಿದ ದೂರು ಪತ್ರವನ್ನು ಸಲ್ಲಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ತಪ್ಪಿತಸ್ಥ ಸಿಬ್ಬಂದಿ ಹಾಗೂ ವಾರ್ಡನ್ ವಿರುದ್ಧ ಕಠಿಣ ಕ್ರಮ ಜರುಗಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.




