ಸಾರ್ವಜನಿಕ ಹ್ಯಾಂಡ್‌ಪಂಪ್‌ನಲ್ಲಿ (ಕೈಪಂಪ್) ನೀರು ಕುಡಿದ ಮತ್ತು ಅಲ್ಲಿಟ್ಟಿದ್ದ ಬಕೆಟ್ ಮುಟ್ಟಿದ ಎಂಬ ಕಾರಣಕ್ಕೆ 16 ವರ್ಷದ ದಲಿತ ಬಾಲಕನೊಬ್ಬನ ಮೇಲೆ ಮೇಲ್ಜಾತಿಯ ಪುಂಡರು ಅತಿ ಅಮಾನವೀಯವಾಗಿ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ, ಶೂ ನೆಕ್ಕಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ. ಮೇ 2 ರಂದು ಸಚೇಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಝಖ್ರಾ-ಸಂಭರಪುರ ಗ್ರಾಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಶನಿವಾರ ತಡವಾಗಿ ಎಫ್‌ಐಆರ್ (FIR) ದಾಖಲಾಗಿದೆ.
ಬಾಲಕನನ್ನು ರಕ್ಷಿಸಲು ಬಂದ ಆತನ ತಂದೆಯ ಮೇಲೂ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಬಾಲಕನ ಕೈ ಮೂಳೆ ಮುರಿದಿದ್ದರೆ, ತಂದೆಯ ಪಕ್ಕೆಲುಬುಗಳಿಗೆ ತೀವ್ರ ಪೆಟ್ಟಾಗಿದೆ. ದೌರ್ಜನ್ಯದ ಬಳಿಕ ಆರೋಪಿಗಳು ಹ್ಯಾಂಡ್‌ಪಂಪ್ ಸುತ್ತಲೂ ಗಂಗಾಜಲ ಪ್ರೋಕ್ಷಣೆ ಮಾಡಿ ‘ಶುದ್ಧೀಕರಣ’ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೂಲಿ ಕಾರ್ಮಿಕನ ಮಗನಾದ 16 ವರ್ಷದ ಬಾಲಕ ಮೇ.2ರಂದು ಗ್ರಾಮದ ಸಾರ್ವಜನಿಕ ಹ್ಯಾಂಡ್‌ಪಂಪ್ ಬಳಿ ನೀರು ಕುಡಿಯಲು ಹೋಗಿದ್ದ. ಆತ ಅಲ್ಲಿಟ್ಟಿದ್ದ ಬಕೆಟ್ ಮುಟ್ಟುತ್ತಿದ್ದಂತೆ, ಸ್ಥಳದಲ್ಲಿದ್ದ ಹಿಂದೂ ಸಮುದಾಯದ ಸಂಜಯ್, ಆತನ ಸಹೋದರ ದೀಪಕ್ ಹಾಗೂ ಅವರ ಸಹಚರರಾದ ಸಾಗರ್ ಮತ್ತು ಪಟಿಯಾ ಎಂಬುವವರು ಬಾಲಕನನ್ನು ತಡೆದಿದ್ದಾರೆ. ಬಾಲಕನ ಜಾತಿ ನಿಂದನೆ ಮಾಡಿದ ಅವರು, ಬಕೆಟ್ ಮುಟ್ಟಿ ಮೈಲಿಗೆ ಮಾಡಿದ್ದೀಯಾ ಎಂದು ಆರೋಪಿಸಿದ್ದಾರೆ.
ಅಷ್ಟಕ್ಕೇ ನಿಲ್ಲದ ನರಾಧಮರು ಬಾಲಕನಿಗೆ ಮೊದಲು ಶಿಕ್ಷೆ ನೀಡಿ, ಬಳಿಕ ಕೋಲು ಹಾಗೂ ಲಗಾಮುಗಳಿಂದ ಮನಬಂದಂತೆ ಥಳಿಸಿದ್ದಾರೆ. ನಂತರ ಬಾಲಕನ ಬಟ್ಟೆ ಬಿಚ್ಚಿ ಬೆತ್ತಲೆಗೊಳಿಸಿದ್ದಾರೆ. ಶೂ ಒಂದರ ಮೇಲೆ ಉಗುಳಿ, ಅದನ್ನು ಬಾಲಕನಿಂದ ಬಲವಂತವಾಗಿ ನೆಕ್ಕಿಸಿದ್ದಾರೆ. ಅಷ್ಟೇ ಅಲ್ಲದೆ, ಅದೇ ಶೂಗೆ ನೀರು ತುಂಬಿಸಿ ಆತನ ಕೈಯಿಂದ ಕುಡಿಸಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಮೂವರು ಕಾಮುಕರ ಬಂಧನ
ಮಗನನ್ನು ಉಳಿಸಲು ಧಾವಿಸಿ ಬಂದ ತಂದೆಯ ಮೇಲೂ ಈ ನಾಲ್ವರು ತೀವ್ರ ಹಲ್ಲೆ ನಡೆಸಿದ್ದಾರೆ. ಸದ್ಯ ಗಾಯಾಳು ಬಾಲಕನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಆನಂತರ ಉರ್ಸುಲಾ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಂತ್ರಸ್ತ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸಂಜಯ್, ದೀಪಕ್, ಸಾಗರ್ ಮತ್ತು ಪಟಿಯಾ ಎಂಬ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪಂಕಿ ವಿಭಾಗದ ಎಸಿಪಿ (ACP) ಮನೋಜ್ ಕುಮಾರ್ ಸಿಂಗ್, “ಪ್ರಕರಣದ ತನಿಖೆ ನಡೆಯುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.




