ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಸಮರ್ಪಣ ಟ್ರಸ್ಟ್, ಪ್ರಜ್ಞಾವಂತ ವೇದಿಕೆ, ಶ್ರೀ ರಂಗನಾಯಕಿ ಸಮಾಜ, ಅನನ್ಯ ಹಾರ್ಟ್ ಹಾಗೂ ಐಕ್ಯ ಅಲಯನ್ಸ್ ಸಂಸ್ಥೆಗಳ ವತಿಯಿಂದ ವಿಶ್ವ ಸಂಗ್ರಹಾಲಯ ದಿನವನ್ನು ಶ್ರೀರಂಗಪಟ್ಟಣದ ಚಾಮರಾಜೇಂದ್ರ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ಮಾತನಾಡಿ, ಶ್ರೀರಂಗಪಟ್ಟಣ ವಿಶ್ವ ವಿಖ್ಯಾತಿ ಪಡೆಯಲು ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಬಳಸಿದ ರಾಕೆಟ್ ತಂತ್ರಜ್ಞಾನ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಮೆರಿಕದ ನಾಸಾ ಸಂಸ್ಥೆಯಲ್ಲಿ ಕನ್ನಡದ ಸೈನಿಕ ರಾಕೆಟ್ ಉಡಾವಣೆಯ ಚಿತ್ರಪಟವನ್ನು ನೋಡಿ ತಮ್ಮ ಆತ್ಮಕಥನ ‘ದ ವಿಂಗ್ಸ್ ಆಫ್ ಫೈರ್’ನಲ್ಲಿ ಟಿಪ್ಪು ಸುಲ್ತಾನ್ ಅವರನ್ನು ರಾಕೆಟ್ ತಂತ್ರಜ್ಞಾನದ ಪಿತಾಮಹ ಎಂದು ಬಣ್ಣಿಸಿದ್ದಾರೆ ಎಂದು ತಿಳಿಸಿದರು. ವಸ್ತು ಸಂಗ್ರಹಾಲಯಗಳು ಶಿಕ್ಷಣ, ಸಂಶೋಧನೆ ಮತ್ತು ಸಂಸ್ಕೃತಿ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಅದರ ಅರಿವು ಜನರಲ್ಲಿ ಮೂಡಿಸುವುದು ಅಗತ್ಯ ಎಂದರು.
ಅನನ್ಯ ಹಾರ್ಟ್ ಸಂಸ್ಥೆಯ ಸಂಸ್ಥಾಪಕಿ ಅನುಪಮಾ ಮಾತನಾಡಿ, ವಸ್ತು ಸಂಗ್ರಹಾಲಯಗಳು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪಾರಂಪರಿಕ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಕೇಂದ್ರಗಳಾಗಿವೆ ಎಂದರು. ನಶಿಸುತ್ತಿರುವ ವಸ್ತುಶಿಲ್ಪಗಳನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ.ಎಸ್. ವೆಂಕಟೇಶ್ ಮಾತನಾಡಿ, ಬ್ರಿಟಿಷ್ ವಸ್ತು ಸಂಗ್ರಹಾಲಯಗಳು ಭವಿಷ್ಯದ ಶಿಕ್ಷಣ ಮತ್ತು ಸಂಶೋಧನೆಗಾಗಿ ಜಗತ್ತಿನ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸುವಲ್ಲಿ ಮುಂಚೂಣಿಯಲ್ಲಿವೆ ಎಂದು ಹೇಳಿದರು. ಕೊಹಿನೂರು ವಜ್ರ ಹಾಗೂ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನನ ಖಡ್ಗ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳು ಸಂಗ್ರಹಾಲಯಗಳ ಮಹತ್ವವನ್ನು ಹೆಚ್ಚಿಸಿವೆ ಎಂದರು. ಇಂತಹ ವಸ್ತುಗಳ ಸಂಗ್ರಹದಿಂದ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯುತ್ತಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಅಂಗಡಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗಾಗಿ ಅಭಿಯಾನ: ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ
ಕಾರ್ಯಕ್ರಮದಲ್ಲಿ ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಡಿ. ವಿಶಾಲಾಕ್ಷಿ, ಐಕ್ಯ ಅಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಮಾಜಿ ಅಧ್ಯಕ್ಷೆ ಎನ್. ಸರಸ್ವತಿ, ಪುರಸಭೆ ಮಾಜಿ ಸದಸ್ಯ ನಳಿನ, ಶಿಕ್ಷಕಿ ಎಚ್.ಜೆ. ಶೀಲಾ, ಶ್ರೀರಂಗನಾಯಕಿ ಸಮಾಜದ ನಿರ್ದೇಶಕರಾದ ಶೋಭಾ, ಸುಮಾ, ಸವಿತಾ, ಶ್ರೀರಂಗಪಟ್ಟಣ ಪುರಾತತ್ವ ಇಲಾಖೆಯ ಸಹಾಯಕ ಶಂಕರ ಲೋಕೇಶ್, ಸುದ್ದಿ ಸಾರಥಿ ಪತ್ರಿಕೆ ಸಂಪಾದಕ ಪುಟ್ಟಸ್ವಾಮಿ, ಸದಾನಂದ, ಶಿವಕುಮಾರ್, ಸುರೇಶ್, ಚಿಕ್ಕಮ್ಮೇಗೌಡ ಸೇರಿದಂತೆ ಹಲವರು ಇದ್ದರು.





