ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡಿರುವ ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ನ್ಯಾಯಾಂಗ ವಲಯದಿಂದಲೇ ತೀವ್ರ ವಿರೋಧ ಹಾಗೂ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ. ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್, ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಸೇರಿದಂತೆ ಪ್ರಮುಖ ಕಾನೂನು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ಚುನಾವಣಾ ಆಯೋಗದ ಪ್ರಸ್ತುತ ನಡವಳಿಕೆಯನ್ನು ಖಂಡಿಸಿದ್ದು, “ಈ ರೀತಿಯಾಗಿ ಕಾರ್ಯನಿರ್ವಹಿಸುವ ಅಥವಾ ವೈಫಲ್ಯ ಕಾಣುವ ಚುನಾವಣಾ ಆಯೋಗವನ್ನು ಹೊಂದಿರಲು ಸಾಧ್ಯವಿಲ್ಲ” ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕ ನಿಷೇಧವಾಗಲಿ: ನ್ಯಾ. ರೋಹಿಂಟನ್ ನಾರಿಮನ್ ಅಭಿಮತ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸುಮಾರು 90 ಲಕ್ಷ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬ ವಿಷಯವನ್ನು ಉಲ್ಲೇಖಿಸಿದ ಅವರು, “ನಮ್ಮ ಪ್ರಜಾಪ್ರಭುತ್ವದ ಹೃದಯವಾಗಿರುವ ‘ಮತದಾನದ ಹಕ್ಕು’ ಇಂದು ತೀವ್ರ ಅಪಾಯದಲ್ಲಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಕಾಯ್ದೆಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶೀಘ್ರವೇ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಉಜ್ಜಲ್ ಭುಯಾನ್ ಅವರು ಮತದಾರರ ಹಕ್ಕಿನ ಕುರಿತು ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. “ಲಕ್ಷಾಂತರ ಭಾರತೀಯ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಕ್ರಿಯೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಾರತೀಯ ಸಂವಿಧಾನವು ‘ಮತದಾನದ ಹಕ್ಕಿರುವ ನಾಗರಿಕರು’ ಮತ್ತು ‘ಮತದಾನದ ಹಕ್ಕಿಲ್ಲದ ನಾಗರಿಕರು’ ಎಂಬ ಎರಡು ವರ್ಗಗಳನ್ನು ಸೃಷ್ಟಿಸುವುದಿಲ್ಲ” ಎಂದು ಹೇಳಿದ್ದಾರೆ. ಯಾವುದೇ ‘ಕಾರಣಗಳು’ ಅಥವಾ ‘ಸಮರ್ಥನೆಗಳು’ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿಯುವುದಕ್ಕೆ ಸಮಜಾಯಿಷಿ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರೂ ನೇರವಾಗಿ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧವಾಗಿ ಮಾತನಾಡಿದ್ದಾರೆ. “ಚುನಾವಣಾ ಆಯೋಗ ಮತ್ತು ಇತರ ಸ್ವಾಯತ್ತ ಸಂಸ್ಥೆಗಳು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಹಾಗೂ ಯಾವುದೇ ಹಿತಾಸಕ್ತಿ ಸಂಘರ್ಷಗಳಿಗೆ ಆಸ್ಪದ ನೀಡಬಾರದು” ಎಂದು ಎಸ್. ಓಕಾ ಪ್ರತಿಪಾದಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಇತರೆ ಆಯುಕ್ತರ ಸಂಪೂರ್ಣ ಸಮ್ಮತಿಯಿಲ್ಲದೆ ಏಕಪಕ್ಷೀಯವಾಗಿ ಎಸ್‌ಐಆರ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ತನಿಖಾ ವರದಿ ಹೊರಬಂದ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ನ್ಯಾಯಾಂಗ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ವಿರೋಧ ಪಕ್ಷಗಳು, ಇತರೆ ಸಂಘಟನೆಗಳು ಈ ಪ್ರಕ್ರಿಯೆಯನ್ನು ಸಂವಿಧಾನಬಾಹಿರ ಎಂದು ಕರೆದಿದ್ದು, ಸಿಇಸಿ ರಾಜೀನಾಮೆಗೆ ಆಗ್ರಹಿಸುತ್ತಿವೆ.




