ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ-ಯುವಜನರ ಹೋರಾಟವನ್ನು ಹತ್ತಿಕ್ಕಲು ಸುಳ್ಳು ನಿರೂಪಣೆಗಳ ಹುನ್ನಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮ, ನಿರುದ್ಯೋಗ, ಶಿಕ್ಷಣ ವ್ಯವಸ್ಥೆಯ ಕುಸಿತ ಹಾಗೂ ಯುವಜನರ ಭವಿಷ್ಯದ ಕುರಿತು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ, ವಿದ್ಯಾರ್ಥಿ-ಯುವಜನರ ಅಳಲು, ಆತಂಕವನ್ನು ಗೋದಿ ಮೀಡಿಯಾಗಳು ಸೇರಿದಂತೆ ಮೋದಿ ಭಕ್ತರು ಬತ್ತಿಗೊತ್ತಿದ್ದಾರೆ. ಬದಲಾಗಿ, ಪ್ರತಿಭಟನೆಯ ಹಿಂದಿರುವವರು ಯಾರು, ಅವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು, ಸಿಜೆಪಿಗೆ ವಿದೇಶಿ ಫಂಡಿಂಗ್ ಇದೆ, ಪಾಕಿಸ್ತಾನ-ಬಾಂಗ್ಲಾದೇಶಿಗರ ಬೆಂಬಲವಿದೆ ಎಂಬ ಕಪೋಲಕಲ್ಪತ ಹಸಿ ಸುಳ್ಳುಗಳನ್ನು ಹೆಣೆದು ಪ್ರಚಾರ ಮಾಡುತ್ತಿವೆ.
ಆದಾಗ್ಯೂ, ಈ ಆರೋಪಕ್ಕೆ ಪೂರಕವಾದ ಯಾವುದೇ ದೃಢವಾದ ಪುರಾವೆ ಈವರೆಗೆ ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಂಡಿಲ್ಲ. ಗಮನಾರ್ಹವಾಗಿ, ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ಅವರು, “ಸಿಜೆಪಿ ಪ್ರತಿಭಟನೆಯ ಹಿಂದೆ ಯಾವುದೇ ವಿದೇಶಿ ನಿಧಿ ಅಥವಾ ಬಾಹ್ಯ ಹಸ್ತಕ್ಷೇಪವಿದೆ ಎಂಬ ಆರೋಪವನ್ನು ದೃಢೀಕರಿಸುವಂತಹ ಪುರಾವೆಗಳು ಅಥವಾ ಮಾಹಿತಿ ಸರ್ಕಾರದ ಬಳಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಯಾವುದೇ ಪ್ರತಿಭಟನೆ ಆರಂಭವಾದಾಗ ಹೋರಾಟದ ಬೇಡಿಕೆಗಳಿಗೆ ಸ್ಪಂದಿಸುವುದು ಮತ್ತು ಉತ್ತರ ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯ. ಆದರೆ, ಮೋದಿ ಆಡಳಿತದಲ್ಲಿ ಸರ್ಕಾರದ ವರ್ತನೆ ಬದಲಾಗಿದೆ. ಮೋದಿ ಸರ್ಕಾರವನ್ನು ಪ್ರಶ್ನಿಸುವವರು ಮತ್ತು ಟೀಕಿಸುವವರ ದೇಶಭಕ್ತಿಯನ್ನು ಪ್ರಶ್ನಿಸುವ, ಅವರನ್ನು ದೇಶ ವಿರೋಧಿಗಳು ಎಂದು ಬಿಂಬಿಸುವ ಖಯಾಲಿ ನಡೆಯುತ್ತಿದೆ. ಮೋದಿ ಸರ್ಕಾರದ ವಿರುದ್ಧ ನಡೆಯುವ ಪ್ರತಿಭಟನೆಗಳಿಗೆ ಬಾಂಗ್ಲಾ, ಪಾಕ್, ಖಲಿಸ್ತಾನಿಗಳ ನಂಟಿನ ಕುರಿತ ಸುಳ್ಳು ನಿರೂಪಣೆಗಳನ್ನು ಹೆಣೆಯುವುದು ವಾಡಿಕೆಯೇ ಆಗಿಹೋಗಿದೆ. ಪ್ರತಿಭಟನಾಕಾರರ ಹಣಕಾಸಿನ ಮೂಲ ಅಥವಾ ಅವರ ಉದ್ದೇಶಗಳ ಬಗ್ಗೆ ಅನುಮಾನ ಹುಟ್ಟಿಸುವ ನಿರೂಪಣೆಗಳನ್ನು ಸೃಷ್ಟಿಸಲಾಗುತ್ತಿದೆ. ರೈತ ಹೋರಾಟದಿಂದ ಹಿಡಿದು ವಿದ್ಯಾರ್ಥಿ ಚಳವಳಿಗಳು, ಕಾರ್ಮಿಕರ ಪ್ರತಿಭಟನೆಗಳಿಂದ ನಾಗರಿಕ ಸಮಾಜದ ಅಭಿಯಾನಗಳವರೆಗೆ ಅನೇಕ ಸಂದರ್ಭಗಳಲ್ಲಿ ಇದೇ ಮಾದರಿಯ ನಿರೂಪಣೆಗಳನ್ನು ಬಿಜೆಪಿಯ ಫೇಕ್ ಫ್ಯಾಕ್ಟರಿ ಸಿದ್ಧಪಡಿಸುತ್ತಿದೆ.
ಈಗ, ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ-ಯುವಜನರ ಪ್ರತಿಭಟನೆಯ ಸುತ್ತಲೂ ಇದೇ ಬಾಂಗ್ಲಾ-ಪಾಕಿಸ್ತಾನಿ ನಂಟು ಹಾಗೂ ವಿದೇಶಿ ಫಂಡಿಂಗ್‌ನ ಸುಳ್ಳು ಕಂತೆಗಳನ್ನು ಹೆಣೆಯಲಾಗಿದೆ.
ವಿದ್ಯಾರ್ಥಿ ಹೋರಾಟದ ಹಿಂದಿನ ಹಣಕಾಸು ಮೂಲವನ್ನು ಹುಡುಕುತ್ತಿರುವವರು, ಭಾರತದ ಅತಿದೊಡ್ಡ ಸಂಘಟನೆಯೆಂದು ಬೀಗುತ್ತಿರುವ, ಕನಿಷ್ಠ ನೋಂದಣಿಯೂ ಆಗದೇ ಇರುವ ಆರ್‌ಎಸ್‌ಎಸ್‌ನ ಹಣದ ಮೂಲಗಳನ್ನು ಪ್ರಶ್ನಿಸುವ ನೈತಿಕ ಧೈರ್ಯ ತೋರಿಲ್ಲ. ತನ್ನ ಚಟುವಟಿಕೆಗಳು ಮುಖ್ಯವಾಗಿ ಸದಸ್ಯರು, ಸ್ವಯಂಸೇವಕರು ಹಾಗೂ ಬೆಂಬಲಿಗರಿಂದ ಬರುವ ಸ್ವಯಂಪ್ರೇರಿತ ದೇಣಿಗೆಗಳ ಮೂಲಕ ನಡೆಯುತ್ತವೆ ಎಂದು ಆರ್‌ಎಸ್‌ಎಸ್ ಹೇಳಿಕೊಂಡಿದೆ. ಗುರುದಕ್ಷಿಣೆ, ವೈಯಕ್ತಿಕ ದೇಣಿಗೆಗಳು, ಬೆಂಬಲಿಗರ ಕೊಡುಗೆಗಳು ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ವಿವಿಧ ಸೇವಾ ಸಂಸ್ಥೆಗಳ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುತ್ತದೆ ಎಂಬುದು ಸಂಘ ವಾದಿಸುತ್ತದೆ.
ಆದರೆ, ಆರ್‌ಎಸ್‌ಎಸ್‌ನ ಹಣಕಾಸಿನ ಮೂಲಗಳು ಕೇವಲ ಕಾರ್ಯಕರ್ತರ ಸಣ್ಣ ದೇಣಿಗೆ, ಗುರುದಕ್ಷಿಣೆಗೆ ಸೀಮಿತವಾಗಿರಲು ಸಾಧ್ಯವೇ? ಆದ್ದರಿಂದಲೇ, ಸಂಘದ ದೇಣಿಗೆ ವ್ಯವಸ್ಥೆ ಮತ್ತು ಸಂಪನ್ಮೂಲಗಳ ಪಾರದರ್ಶಕತೆ ಕುರಿತು ನಾಗರಿಕ ಸಮಾಜವು ದೀರ್ಘಕಾಲದಿಂದ ಪ್ರಶ್ನಿಸುತ್ತಲೇ ಇದೆ. ಆರ್‌ಎಸ್‌ಎಸ್‌ನ ತನ್ನ ಆದಾಯ ಮತ್ತು ವೆಚ್ಚದ ಲೆಕ್ಕಪತ್ರವನ್ನು ಗೌಪ್ಯವಾಗಿ ಉಳಿಸಿಕೊಂಡಿರುವುದರಿಂದ, ಅದರ ವ್ಯವಹಾರಗಳ ಬಗ್ಗೆ ಗಂಭೀರ ಅನುಮಾನಗಳೂ ನಾಗರಿಕ ಸಮಾಜದಲ್ಲಿವೆ.
ಈ ಲೇಖನ ಓದಿದ್ದೀರಾ?: ಅಪರಾಧಗಳ ಚಕ್ರವ್ಯೂಹದಲ್ಲಿ ಯುವ ಸಮೂಹ; ಅಪಾಯ ಅರಿಯುವಲ್ಲಿ ಸಮಾಜ ವಿಫಲ
ಅಲ್ಲದೆ, ಅತಿ ಹೆಚ್ಚು ವಿದೇಶಿ ಫಂಡಿಂಗ್ ಬರುವುದೇ ಆರ್‌ಎಸ್‌ಎಸ್‌ಗೆ ಎಂಬ ಆರೋಪಗಳು ದಶಕಗಳಿಂದಲೂ ಇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡ ಆರ್‌ಎಸ್‌ಎಸ್ ನೋಂದಣಿ, ಸಂಘ ಪರಿವಾರದ ವಿವಿಧ ಸಂಘಟನೆಗಳಿಗೆ ದೇಶ-ವಿದೇಶಗಳಿಂದ ಬರುವ ದೇಣಿಗೆಗಳ ಮೂಲ ಮತ್ತು ಪಾರದರ್ಶಕತೆ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಈವರೆಗೆ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳಿಗೆ ಸಂಘಪರಿವಾರ ಉತ್ತರ ನೀಡಿಲ್ಲ. ಅಲ್ಲದೆ, ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು, ಆರ್‌ಎಸ್‌ಎಸ್‌ನ ಹಣದ ಮೂಲವನ್ನು ಪ್ರಶ್ನಿಸುವ ಧೈರ್ಯ ಗೋದಿ ಮೀಡಿಯಾಗಳಿಗಾಗಲೀ, ಮೋದಿ ಭಕ್ತರಿಗಾಗಲೀ, ಬಿಜೆಪಿ ಪರವಾಗಿ ತುತ್ತೂರಿ ಊದುವವರಿಗಾಗಲೀ ಇಲ್ಲ. ಬದಲಾಗಿ, ವಿದ್ಯಾರ್ಥಿಗಳ ಪ್ರತಿಭಟನೆ, ರೈತ ಹೋರಾಟ, ನಾಗರಿಕ ಸಂಘಟನೆಗಳ ಆಂದೋಲನಗಳು ಆರಂಭವಾಗುತ್ತಿದ್ದಂತೆಯೇ ‘ವಿದೇಶಿ ಫಂಡಿಂಗ್’ ಎಂಬ ಆರೋಪಗಳನ್ನು ಮುಂಚೂಣಿಗೆ ತರಲಾಗುತ್ತದೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಎತ್ತಿರುವ ಪ್ರಶ್ನೆಗಳು ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ, ಪರೀಕ್ಷಾ ಅಕ್ರಮಗಳ ವಿರುದ್ಧದ ಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಗೆ ಉತ್ತರದಾಯಿತ್ವ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ. ಈ ಪ್ರಶ್ನೆಗಳಿಗೆ ಉತ್ತರಿಸಲಾಗದ ಮೋದಿ ಸರ್ಕಾರ, ತಮ್ಮ ಫೇಕ್ ಫ್ಯಾಕ್ಟರಿ ಮೂಲಕ ಸುಳ್ಳು ನಿರೂಪಣೆಗಳನ್ನು ಹರಿಬಿಟ್ಟು, ಹೋರಾಟಗಳನ್ನು ಹತ್ತಿಕ್ಕಲು ಹವಣಿಸುತ್ತಿದೆ. ಆದರೆ, ಇಂತಹ ಸುಳ್ಳುಗಳನ್ನು ದೇಶವಾಸಿಗಳು ನಂಬುವ ಕಾಲ ಮುಗಿದುಹೋಗಿದೆ ಎಂಬುದನ್ನು ಮೋದಿ ಪಟಾಲಂ ಮರೆತಿದೆ.



