ಇತ್ತೀಚಿನ ವಿಧಾನಸಭಾ ಚುನಾವಣಾ ಸೋಲಿನ ನಂತರ ತೀವ್ರ ಆಂತರಿಕ ಭಿನ್ನಮತ ಹಾಗೂ ಬಿಕ್ಕಟ್ಟು ಎದುರಿಸುತ್ತಿರುವ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಪಕ್ಷದ ಮೂವರು ಪ್ರಮುಖ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಮಧುರಾಂಕತಂ ಕ್ಷೇತ್ರದ ಶಾಸಕಿ ಮರಗತಂ ಕುಮಾರವೇಲ್, ಪೆರಂದೊರೈ ಕ್ಷೇತ್ರದ ಶಾಸಕ ಜಯಕುಮಾರ್ ಮತ್ತು ಧರ್ಮಾಪುರಂ ಕ್ಷೇತ್ರದ ಶಾಸಕಿ ಸತ್ಯಭಾಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಯಕರಾಗಿದ್ದಾರೆ. ಇವರು ತಮಿಳುನಾಡು ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಖುದ್ದಾಗಿ ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಅಫ್ಘಾನ್ ಸರಣಿಗೆ ಭಾರತ ತಂಡ ಪ್ರಕಟ; ಗಿಲ್ ನಾಯಕ, ಮೂವರು ಕನ್ನಡಿಗರಿಗೆ ಮಣೆ
ಇತ್ತೀಚೆಗಷ್ಟೇ ನಡೆದ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ, ಇತರೆ ಮಿತ್ರಪಕ್ಷಗಳು ಹಾಗೂ ಎಐಎಡಿಎಂಕೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಮೇ 13ರಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ವಿಜಯ್ 144 ಮತಗಳನ್ನು ಪಡೆದು ಬಹುಮತ ಸಾಬೀತುಪಡಿಸಿದ್ದರು. ಈ ವೇಳೆ ಎಐಎಡಿಎಂಕೆಯ ಎಸ್.ಪಿ. ವೇಲುಮಣಿ ಬಣದ 25 ಬಂಡಾಯ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಟಿವಿಕೆ ಪರ ಮತ ಚಲಾಯಿಸಿದ್ದರು.
ಈ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಇದೀಗ ಆ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದ ಮೂವರು ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನವನ್ನು ತ್ಯಜಿಸಿ ಅಧಿಕೃತವಾಗಿ ಆಡಳಿತಾರೂಢ ಟಿವಿಕೆ ತೆಕ್ಕೆಗೆ ಜಾರಿದ್ದಾರೆ.




