ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಅಧಿಕೃತ ಮಾಲೀಕತ್ವ ಮತ್ತು ನಿಯಂತ್ರಣಕ್ಕಾಗಿ ಮಮತಾ ಬ್ಯಾನರ್ಜಿ ಮತ್ತು ರಿತಬ್ರತಾ ಬ್ಯಾನರ್ಜಿ ಬಣಗಳ ನಡುವೆ ನಡೆಯುತ್ತಿರುವ ಜಟಾಪಟಿ ಇದೀಗ ಕೇಂದ್ರ ಚುನಾವಣಾ ಆಯೋಗದ ಅಂಗಳಕ್ಕೆ ತಲುಪಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ವಾದವನ್ನು ಮಂಡಿಸಲು ಆಯೋಗ ನೀಡಿದ್ದ ಗಡುವಿನ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ನೇತೃತ್ವದ ಬಣವು ಸೋಮವಾರ ಅಧಿಕೃತವಾಗಿ ತನ್ನ ಲಿಖಿತ ಉತ್ತರವನ್ನು ಸಲ್ಲಿಸಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎದುರಿಸಿದ ಸೋಲಿನ ಬಳಿಕ TMCಯಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಪಕ್ಷದ ಆಸ್ತಿ, ಕಚೇರಿಗಳು ಮತ್ತು ನಿಯಂತ್ರಣವನ್ನು ತಮ್ಮ ಬಣಕ್ಕೆ ನೀಡಬೇಕೆಂದು ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ ಆಯೋಗದ ಮೊರೆ ಹೋಗಿದ್ದರು. ತಮಗೆ ಬಹು ಶಾಸಕರ ಬೆಂಬಲವಿದೆ ಎಂಬುದು ಅವರ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ, ಎರಡೂ ಬಣಗಳಿಗೆ ನೋಟಿಸ್ ನೀಡಿದ್ದ ಚುನಾವಣಾ ಆಯೋಗವು, ಪಕ್ಷದ ಸಾಂಸ್ಥಿಕ ಇತಿಹಾಸ ಮತ್ತು ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಸೋಮವಾರದವರೆಗೆ ಗಡುವು ನೀಡಿತ್ತು.
ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಬಂಡಾಯ ಬಣದ ಆರೋಪಗಳನ್ನು ತಳ್ಳಿಹಾಕಿದರು. “ಪಕ್ಷದ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡಿದೆ ಎಂಬ ರಿತಬ್ರತಾ ಬಣದ ವಾದ ಸುಳ್ಳು. 1997ರಿಂದ ಪಕ್ಷದ ಸಂವಿಧಾನ ಮತ್ತು ನಿಯಮಗಳಿಗೆ ಅನುಗುಣವಾಗಿಯೇ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. 2006ರಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಸಾಂಸ್ಥಿಕ ಅವಧಿಯನ್ನು 5 ವರ್ಷಗಳಿಗೆ ವಿಸ್ತರಿಸಲಾಗಿದ್ದು, ಅಂದಿನಿಂದ ನಿಯಮಿತವಾಗಿ ಚುನಾವಣೆಗಳು ನಡೆಯುತ್ತಿವೆ. 2022ರಲ್ಲಿ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: SIRನ ಎಲ್ಲಾ ಗೊಂದಲಗಳಿಗೆ ಜಾಗೃತ ಕರ್ನಾಟಕದ ʼಡಿಜಿಟಲ್ ಮಾರ್ಗದರ್ಶಿʼ
ರಿತಬ್ರತಾ ಬ್ಯಾನರ್ಜಿ ಬಣಕ್ಕೆ ನೇರ ಸವಾಲು ಹಾಕಿದ ಕಲ್ಯಾಣ್ ಬ್ಯಾನರ್ಜಿ, “ಅವರು ಪಕ್ಷದ ಅವಧಿ ಮುಗಿದಿದೆ ಎಂದು ವಾದಿಸುತ್ತಿದ್ದರೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಚಿಹ್ನೆಯಡಿಯಲ್ಲೇ ಅವರು ಹೇಗೆ ಸ್ಪರ್ಧಿಸಿದರು? ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲೇ ಅವರಿಗೆ ಚಿಹ್ನೆ ಹಂಚಿಕೆಯಾಗಿತ್ತು. ಅವರ ವಾದದ ಪ್ರಕಾರವೇ ಹೋದರೆ, ಅವರ ಶಾಸಕ ಸ್ಥಾನವೇ ಅಸಿಂಧುವಾಗುತ್ತದೆ. ಮೊದಲು ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ” ಎಂದು ಗುಡುಗಿದರು.
ಜೂನ್ 3ರಂದು ಸ್ಪೀಕರ್‌ಗೆ ಬರೆದ ಪತ್ರದಲ್ಲೂ ತಾವು ಟಿಎಂಸಿ ಪಕ್ಷದ ಬಣ ಎಂದು ಒಪ್ಪಿಕೊಂಡಿದ್ದ ರಿತಬ್ರತಾ, ಇದೀಗ ಕಾನೂನು ಬಾಹಿರವಾಗಿ ಹೊಸ ಪಕ್ಷ ಕಟ್ಟುವ ನಾಟಕವಾಡುತ್ತಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದರು. ಈ ವಿವಾದವು ಇದೀಗ ಚುನಾವಣಾ ಆಯೋಗದ ಅಂಗಳದಲ್ಲಿರುವುದರಿಂದ, ಆಯೋಗವು ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.




