ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ ಸರ್ಕಾರ ರಚನೆಗೆ ಎದುರಾಗಿದ್ದ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಎಡಪಕ್ಷಗಳು ಹಾಗೂ ‘ವಿಸಿಕೆ’ ಸಂಪೂರ್ಣ ಬೆಂಬಲ ಘೋಷಿಸಿರುವುದು ಮಹತ್ವದ ತಿರುವು ನೀಡಿದೆ. ಈ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಸಂಖ್ಯಾಬಲ ಒಟ್ಟುಗೂಡಿದ್ದು, ವಿಜಯ್ ಅವರು ಮುಖ್ಯಮಂತ್ರಿ ಗಾದಿಗೇರುವ ಹಾದಿ ಸುಗಮವಾಗಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಅಗತ್ಯವಿದೆ. ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಟಿವಿಕೆಗೆ ಅಧಿಕಾರದ ಚುಕ್ಕಾಣಿ ಹಿಡಿಯಲು 10 ಸ್ಥಾನಗಳ ಕೊರತೆಯಿತ್ತು. ಈಗಾಗಲೇ ಕಾಂಗ್ರೆಸ್ ತನ್ನ ಬೆಂಬಲವನ್ನು ಘೋಷಿಸಿತ್ತು. ಇದೀಗ ವಿಸಿಕೆ ಹಾಗೂ ಎಡಪಕ್ಷಗಳು ಕೂಡ ಅಧಿಕೃತವಾಗಿ ವಿಜಯ್ ಬೆನ್ನಿಗೆ ನಿಂತಿರುವುದರಿಂದ, ಟಿವಿಕೆ ನೇತೃತ್ವದ ಒಕ್ಕೂಟವು ಸುಲಭವಾಗಿ ‘ಮ್ಯಾಜಿಕ್ ನಂಬರ್’ ದಾಟಿದೆ.
ಇದನ್ನು ಓದಿದ್ದೀರಾ? ತಮಿಳುನಾಡಿನಲ್ಲಿ ತುಮಕೂರು ಮೂಲದ ಕನ್ನಡಿಗನ ಜಯಭೇರಿ; ಟಿವಿಕೆ ಪಕ್ಷದಿಂದ ಸುನಿಲ್ ಆನಂದ್ ಶಾಸಕ
ನೂತನ ಸರ್ಕಾರ ರಚನೆಯ ಈ ಕ್ಷಿಪ್ರ ಬೆಳವಣಿಗೆಗಳ ನಡುವೆ, ವಿಜಯ್ ಅವರು ಇಂದು ಸಂಜೆ ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರನ್ನು ಖುದ್ದಾಗಿ ಭೇಟಿಯಾಗಲಿದ್ದಾರೆ. ಈ ಮಹತ್ವದ ಭೇಟಿಯ ವೇಳೆ ವಿಜಯ್ ಅವರು, ಮೈತ್ರಿ ಪಕ್ಷಗಳ ಶಾಸಕರ ಸಹಿಯುಳ್ಳ ‘ಬೆಂಬಲ ಪತ್ರ’ವನ್ನು ರಾಜ್ಯಪಾಲರಿಗೆ ಸಲ್ಲಿಸಿ, ಅಧಿಕೃತವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಎಡಪಕ್ಷಗಳು ಮತ್ತು ವಿಸಿಕೆ ನಾಯಕರು ಟಿವಿಕೆ ಜೊತೆ ಕೈಜೋಡಿಸಿರುವುದರಿಂದ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಗೆ ಬಹುತೇಕ ತೆರೆಬಿದ್ದಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಅಧಿಕಾರದಿಂದ ದೂರ ಉಳಿಯುವುದು ಖಚಿತವಾಗಿದ್ದು, ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ.




