ಸುನಿಲ್ ಆನಂದ್ ಅವರಿಗಿರುವ ಅವಿನಾಭಾವ ‘ಕರ್ನಾಟಕ ನಂಟು’. ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು. “ನಾನು ಹೆಮ್ಮೆಯ ಕನ್ನಡಿಗ, ಕ್ಷೇತ್ರದ ಜನರ ಪ್ರೀತಿಯ ಜೊತೆ ನಮ್ಮೂರ ದೇವರ ಆಶೀರ್ವಾದದಿಂದಲೇ ಈ ಚುನಾವಣೆಯಲ್ಲಿ ಗೆದ್ದಿದ್ದೇನೆ” ಎಂದು ಫಲಿತಾಂಶದ ಬಳಿಕ ಭಾವುಕರಾಗಿ ನುಡಿಯುವ ಮೂಲಕ ಅವರು ತಮ್ಮ ತಾಯ್ನೆಲದ ಮೇಲಿನ ಪ್ರೀತಿಯನ್ನು ಅತ್ಯಂತ ಹೆಮ್ಮೆಯಿಂದ ಅಭಿವ್ಯಕ್ತಪಡಿಸಿದ್ದಾರೆ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ದ್ರಾವಿಡ ರಾಜಕಾರಣದಲ್ಲಿ ಒಂದು ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿದೆ. ದಳಪತಿ ವಿಜಯ್ ನೇತೃತ್ವದ ನೂತನ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಬರೋಬ್ಬರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯವನ್ನು ಮುರಿದಿದೆ. ದಶಕಗಳಿಂದ ಆಳವಾಗಿ ಬೇರೂರಿದ್ದ ಪ್ರಬಲ ದ್ರಾವಿಡ ಪಕ್ಷಗಳ ಅಭ್ಯರ್ಥಿಗಳನ್ನು ಮಣಿಸಿ, ತಮಿಳುನಾಡಿನ ನೆಲದಲ್ಲಿ ಟಿವಿಕೆ ಪಕ್ಷದ ವಿಜಯ ಪತಾಕೆಯನ್ನು ಅತ್ಯಂತ ಹೆಮ್ಮೆಯಿಂದ ಹಾರಿಸುವ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಈ ಬೃಹತ್ ರಾಜಕೀಯ ಪಲ್ಲಟದ ನಡುವೆ, ಕರ್ನಾಟಕಕ್ಕೆ ಅತ್ಯಂತ ಹೆಮ್ಮೆ ತರುವಂತಹ ವಿಶೇಷ ವಿದ್ಯಮಾನವೊಂದು ಕೊಯಮತ್ತೂರು ಜಿಲ್ಲೆಯ ‘ಮೆಟ್ಟುಪಾಳ್ಯಂ’ ವಿಧಾನಸಭಾ ಕ್ಷೇತ್ರದಲ್ಲಿ ಜರುಗಿದೆ.
ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುನಿಲ್ ಆನಂದ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಸುನಿಲ್ ಆನಂದ್ ಅವರು ಒಟ್ಟು 75,664 ಮತಗಳನ್ನು (ಶೇ. 31.08ರಷ್ಟು ಮತ ಪ್ರಮಾಣ) ಪಡೆದುಕೊಂಡಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ, ಡಿಎಂಕೆ ಪಕ್ಷದ ಅಭ್ಯರ್ಥಿ ಕವಿತಾ ಕಲ್ಯಾಣಸುಂದರಂ ಅವರನ್ನು ಸುಮಾರು 8 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಅಭೂತಪೂರ್ವ ಗೆಲುವು ಕೇವಲ ಅಬ್ಬರದ ಪ್ರಚಾರದಿಂದ ಒಲಿದಿದ್ದಲ್ಲ. ಸುನಿಲ್ ಆನಂದ್ ಅವರು ಬೃಹತ್ ಸಮಾವೇಶಗಳಿಗಿಂತ ಹೆಚ್ಚಾಗಿ ಜನರೊಂದಿಗಿನ ನೇರ ಸಂಪರ್ಕಕ್ಕೆ ಒತ್ತು ನೀಡಿದ್ದರು. ಮೆಟ್ಟುಪಾಳ್ಯಂನ ರೈತ ಸಂತೆ (ಉಳವರ್ ಸಂತೆ) ಹಾಗೂ ಬಸ್ ನಿಲ್ದಾಣಗಳಲ್ಲಿ ಜನಸಾಮಾನ್ಯರನ್ನು ಭೇಟಿಯಾಗಿ, ವಿಜಯ್ ಅವರ ರಾಜಕೀಯ ಚಿಂತನೆಗಳನ್ನು ಹಾಗೂ ಪಕ್ಷದ ‘ಶಿಳ್ಳೆ’ (ವಿಸಿಲ್) ಚಿಹ್ನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಳಮಟ್ಟದ ಮತದಾರರ ಮನಸ್ಸಿಗೆ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಈ ಜಯದ ಹಿಂದಿರುವ ಅತ್ಯಂತ ಗಮನಾರ್ಹ ಸಂಗತಿಯೆಂದರೆ ಸುನಿಲ್ ಆನಂದ್ ಅವರಿಗಿರುವ ಅವಿನಾಭಾವ ‘ಕರ್ನಾಟಕ ನಂಟು’. ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು. “ನಾನು ಹೆಮ್ಮೆಯ ಕನ್ನಡಿಗ, ಕ್ಷೇತ್ರದ ಜನರ ಪ್ರೀತಿಯ ಜೊತೆ ನಮ್ಮೂರ ದೇವರ ಆಶೀರ್ವಾದದಿಂದಲೇ ಈ ಚುನಾವಣೆಯಲ್ಲಿ ಗೆದ್ದಿದ್ದೇನೆ” ಎಂದು ಫಲಿತಾಂಶದ ಬಳಿಕ ಭಾವುಕರಾಗಿ ನುಡಿಯುವ ಮೂಲಕ ಅವರು ತಮ್ಮ ತಾಯ್ನೆಲದ ಮೇಲಿನ ಪ್ರೀತಿಯನ್ನು ಅತ್ಯಂತ ಹೆಮ್ಮೆಯಿಂದ ಅಭಿವ್ಯಕ್ತಪಡಿಸಿದ್ದಾರೆ.
ಅವರ ಕುಟುಂಬ ತಮಿಳುನಾಡಿಗೆ ವಲಸೆ ಹೋದ ಕಥೆ ಬದುಕಿನ ಹೋರಾಟದ ಸಂಕೇತವಾಗಿದೆ. ದಶಕಗಳ ಹಿಂದೆ ತುಮಕೂರು ಭಾಗದಲ್ಲಿ ಎದುರಾದ ಭೀಕರ ಬರಗಾಲದ ಸಂದರ್ಭದಲ್ಲಿ, ಜೀವನೋಪಾಯ ಅರಸಿ ಅವರ ಕುಟುಂಬವು ತಮ್ಮ ಹುಟ್ಟೂರನ್ನು ತೊರೆದು ತಮಿಳುನಾಡಿನತ್ತ ಮುಖಮಾಡಿತ್ತು. ಸುನಿಲ್ ಆನಂದ್, ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಡಕೆಘಟ್ಟ ಗ್ರಾಮದವರು. 1925ರಲ್ಲಿ ಬರಗಾಲದ ವೇಳೆ ಇವರ ತಾತ ಬೋರೇಗೌಡರು ತಮಿಳುನಾಡಿನ ಮೆಟ್ಟುಪಾಳ್ಯಂ ವಲಸೆ ಹೋಗಿದ್ದರು. ಬಳಿಕ ತಂದೆ ನಿಂಗೇಗೌಡ ಅವರು ಅಲ್ಲಿಯೇ ನೆಲೆಸಿ ಉದ್ಯಮ ಕಟ್ಟಿದರು. ತಂದೆಯ ಮಾರ್ಗದರ್ಶನದಲ್ಲಿ ಕೃಷಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ಸು ಕಂಡಿರುವ ಸುನಿಲ್, ಮೊದಲು ಎಐಎಡಿಎಂಕೆ ಪಕ್ಷದಲ್ಲಿ ಸಕ್ರಿಯರಾಗಿದ್ದರು. ತದನಂತರ, ಒಂದು ವರ್ಷದ ಹಿಂದೆ ವಿಜಯ್ ಅವರ ಕೋರಿಕೆಯಂತೆ ಟಿವಿಕೆ ಸೇರ್ಪಡೆಗೊಂಡರು. ಮೆಟ್ಟುಪಾಳ್ಯಂನಲ್ಲಿ ನೆಲೆನಿಂತು ತಮಿಳಿನವರಾಗಿದ್ದರೂ ತಮ್ಮ ಕನ್ನಡಿಗ ಅಸ್ಮಿತೆಯನ್ನು ಹಾಗೂ ಕನ್ನಡ ಭಾಷೆಯನ್ನು ಮಾತ್ರ ಎಂದಿಗೂ ಮರೆತಿಲ್ಲ.
ಸುನಿಲ್ ಆನಂದ್ ಅವರ ಚಿಕ್ಕಪ್ಪ ಎಚ್.ಬಿ. ನಂಜೇಗೌಡ 1994ರಲ್ಲಿ ಜನತಾದಳದಿಂದ ತುರುವೇಕೆರೆಯ ಶಾಸಕರಾಗಿದ್ದವರು. ತಮ್ಮ ಅಣ್ಣನ ಮಗ ತಮಿಳುನಾಡಿನಂತಹ ರಾಜ್ಯದಲ್ಲಿ ಪ್ರಬಲ ದ್ರಾವಿಡ ಪಕ್ಷಗಳ ಅಲೆ ಹಾಗೂ ತೀವ್ರ ಪೈಪೋಟಿಯನ್ನು ಮೆಟ್ಟಿ ನಿಂತು, ಜೋಸೆಫ್ ವಿಜಯ್ ಅವರ ನೂತನ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿರುವ ಬಗ್ಗೆ ಮಾಜಿ ಶಾಸಕ ಎಚ್.ಬಿ. ನಂಜೇಗೌಡರು ಹಾಗೂ ಇಡೀ ವಡಕೆಘಟ್ಟ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.
“ನಮ್ಮೂರಿನ ಮಣ್ಣಿನ ಮಗನೊಬ್ಬ ನೆರೆ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ರಾಜಕೀಯ ಯಶಸ್ಸು ಸಾಧಿಸಿರುವುದು ನಮ್ಮ ಕುಟುಂಬಕ್ಕೆ, ಇಡೀ ತಾಲೂಕಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಸಂಗತಿ. ಸುನಿಲ್ ತನ್ನ ತಳಮಟ್ಟದ ಹೋರಾಟ ಹಾಗೂ ಜನರೊಂದಿಗಿನ ಒಡನಾಟದಿಂದಲೇ ಈ ಬೃಹತ್ ಗೆಲುವು ಒಲಿಸಿಕೊಂಡಿದ್ದಾನೆ” ಎಂದು ನಂಜೇಗೌಡರು ಹಾಗೂ ಕುಟುಂಬಸ್ಥರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿದ್ದರೂ ವರ್ಷಕ್ಕೆ ಎರಡು ಬಾರಿ ತಪ್ಪದೆ ತಮ್ಮೂರು ವಡಕೆಘಟ್ಟ ಗ್ರಾಮಕ್ಕೆ ತಪ್ಪದೇ ಭೇಟಿ ನೀಡಿ ಸಂಬಂಧಿಕರು ಹಾಗೂ ಗ್ರಾಮದವರನ್ನು ಭೇಟಿ ಮಾಡುತ್ತಾರೆ.




