ಇತ್ತೀಚಿನ ಭೀಕರ ಪ್ರವಾಹದಿಂದಾಗಿ ಮನೆಮಠ ಕಳೆದುಕೊಂಡಿರುವ ನೂರಾರು ಜನರಿಗೆ ಬಿಹಾರದ ಭಾಗಲ್ಪುರ ಜಿಲ್ಲೆಯ ಎರಡು ಪರಿಹಾರ ಕೇಂದ್ರಗಳೇ ಸದ್ಯ ತಾತ್ಕಾಲಿಕ ಆಶ್ರಯ ತಾಣಗಳಾಗಿವೆ. ದಿನೇ ದಿನೇ ಏರುತ್ತಿರುವ ನೀರಿನ ಮಟ್ಟದಿಂದಾಗಿ ಮುಳುಗಡೆಯಾಗಿರುವ ಮನೆಗಳು ತಗ್ಗಿದ ಮೇಲಾದರೂ ವಾಸಕ್ಕೆ ಯೋಗ್ಯವಾಗಿರುತ್ತವೆಯೇ ಎಂಬ ಆತಂಕ ಸಂತ್ರಸ್ತರನ್ನು ಕಾಡುತ್ತಿದೆ.
ತಿಲ್ಕಾ ಮಾಂಝಿ ಭಾಗಲ್ಪುರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ‘ತಿಲ್ಹಾ ಕೋಠಿ’ಯ ಕಪ್ಪು ಪ್ಲಾಸ್ಟಿಕ್ ಡೇರೆಯ ಹೊರಗೆ ಮಲಗಿರುವ 25 ವರ್ಷದ ರಾಜ್ ಕಿಶೋರ್, ಹೈದರಾಬಾದ್‌ನಿಂದ ಧಾವಿಸಿ ಬಂದಿದ್ದಾರೆ. ಒಂದು ತಿಂಗಳ ಹಿಂದೆ ಮನೆಗೆ ನೀರು ನುಗ್ಗಿದಾಗ ಉಳಿಸಿಕೊಂಡ ಏಕೈಕ ವಸ್ತು ಈ ಮಂಚ. ‘ದಾಖಲೆಗಳು, ನಗದು, ಒಡವೆಗಳು ಹಾಗೂ ಡ್ರಮ್‌ಗಳಲ್ಲಿ ತುಂಬಿಟ್ಟಿದ್ದ ಧಾನ್ಯಗಳು ಸೇರಿದಂತೆ ಎಲ್ಲವೂ ಜಲಸಮಾಧಿಯಾಗಿವೆ’ ಎಂದು ಅವರು ಕಣ್ಣೀರು ಹಾಕುತ್ತಾರೆ.
ಕಿಶೋರ್ ಅವರಂತೆ, ಊರಿನ ಹೊರಗೆ ದುಡಿಯುತ್ತಿದ್ದ ನೂರಾರು ವಲಸೆ ಕಾರ್ಮಿಕರು ಕೆಲಸ ಬಿಟ್ಟು ಓಡಿಬಂದಿದ್ದಾರೆ. ಲುಧಿಯಾನದಿಂದ ರೈಲಿನಲ್ಲಿ ನಾಲ್ಕು ದಿನ ಪ್ರಯಾಣಿಸಿ ಬಂದಿರುವ ಸುಮನ್ ಕುಮಾರ್ ಹಾಗೂ ಹೈದರಾಬಾದ್‌ನಿಂದ ಬಂದಿರುವ ಕರಣ್ ಕುಮಾರ್ ಅವರದ್ದೂ ಇದೇ ಕಥೆ. ಸರ್ವಸ್ವವನ್ನೂ ಕಳೆದುಕೊಂಡಿರುವ ಹತಾಶೆಯಿಂದಾಗಿ ಸಣ್ಣಪುಟ್ಟ ವಿಚಾರಗಳಿಗೂ ಸಂತ್ರಸ್ತರ ನಡುವೆ ಜಗಳಗಳು ನಡೆಯುತ್ತಿರುವುದು ಶಿಬಿರಗಳಲ್ಲಿ ಸಾಮಾನ್ಯವಾಗಿದೆ.
ಕ್ಯಾಂಪಸ್‌ನ ರವೀಂದ್ರ ಭವನದಲ್ಲಿ ಸುಮಾರು 250 ಕುಟುಂಬಗಳಿಗೆ ದಿನಕ್ಕೆರಡು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಟಿ.ಎನ್.ಬಿ ಕಾಲೇಜು ಮೈದಾನದ ಪರಿಹಾರ ಕೇಂದ್ರದಲ್ಲಿ 650ಕ್ಕೂ ಹೆಚ್ಚು ಜನರು 400ಕ್ಕೂ ಅಧಿಕ ಜಾನುವಾರುಗಳೊಂದಿಗೆ ಆಶ್ರಯ ಪಡೆದಿದ್ದಾರೆ. ಪ್ರವಾಹದಲ್ಲಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸದ್ಯ ಈ ಜಾನುವಾರುಗಳೇ ಮುಂದಿನ ಬದುಕಿನ ಆಶಾಕಿರಣವಾಗಿವೆ.

ಹಿರಿಯರು ತಮ್ಮ ಭವಿಷ್ಯದ ಚಿಂತೆಯಲ್ಲಿದ್ದರೆ, ಜಿಲ್ಲಾಡಳಿತವು ಶಿಬಿರದಲ್ಲಿರುವ ಮಕ್ಕಳಿಗಾಗಿ ಕಲೆ ಹಾಗೂ ಸಂಸ್ಕೃತಿಯ ಮೂಲಕ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತಿದೆ. ಭಾಗಲ್ಪುರ ವಿಭಾಗದ ಸಾಂಪ್ರದಾಯಿಕ ಕಲೆಯಾದ ‘ಮಂಜೂಷಾ’ವನ್ನು ಮಕ್ಕಳಿಗೆ ಕಲಿಸಲಾಗುತ್ತಿದ್ದು, ಕಥೆ ಹೇಳುವ ಹಾಗೂ ಚಲನಚಿತ್ರ ಪ್ರದರ್ಶನದ ಮೂಲಕ ಕಲಾ ಚಿಕಿತ್ಸೆ (ಆರ್ಟ್ ಥೆರಪಿ) ನೀಡಲಾಗುತ್ತಿದೆ ಎಂದು ಕಲೆ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಅಂಕಿತ್ ರಂಜನ್ ತಿಳಿಸಿದ್ದಾರೆ.
ನೀರು ಇಳಿದ ಬಳಿಕ ಮನೆಗಳನ್ನು ಸ್ವಚ್ಛಗೊಳಿಸಿ, ಮಣ್ಣು ತೆಗೆದು ವಾಸಯೋಗ್ಯವನ್ನಾಗಿಸಲು ನವೆಂಬರ್‌ನಲ್ಲಿ ಬರುವ ‘ಛತ್’ ಹಬ್ಬದವರೆಗೂ ಕಾಯಬೇಕಾಗಬಹುದು ಎಂಬುದು ಟಿ.ಎನ್.ಬಿ ಕ್ಯಾಂಪಸ್‌ನಲ್ಲಿರುವ ಉಷಾ ದೇವಿ ಅವರ ಅಳಲು. ಪರಿಹಾರ ಕೇಂದ್ರಗಳು ಮುಚ್ಚಿದ ಬಳಿಕ ನಮ್ಮ ಬದುಕು ಮತ್ತು ಆದಾಯದ ಮೂಲವೇನು ಎಂಬ ಪ್ರಶ್ನೆ ಮಹಿಳೆಯರನ್ನು ತೀವ್ರವಾಗಿ ಕಾಡುತ್ತಿದೆ.
‘ನಾವು ಪ್ರತಿವರ್ಷ ದುಡಿಯುವುದನ್ನೆಲ್ಲಾ ಗಂಗಾ ನದಿ ಕೊಚ್ಚಿಕೊಂಡು ಹೋಗುತ್ತದೆ. ಕೃಷಿ ಹಾಗೂ ಮನೆ ಬಳಕೆಗಾಗಿ ಸ್ವಸಹಾಯ ಸಂಘಗಳಿಂದ ಪಡೆದಿದ್ದ 80 ಸಾವಿರ ರೂಪಾಯಿ ಸಾಲ ಈಗ ನನ್ನ ಮುಂದಿರುವ ದೊಡ್ಡ ಆತಂಕ. ಸರ್ಕಾರ ನಮ್ಮನ್ನು ನದಿ ನೀರು ಬಾರದ ಎತ್ತರದ ಪ್ರದೇಶಗಳಿಗೆ ಶಾಶ್ವತವಾಗಿ ಸ್ಥಳಾಂತರಿಸಬೇಕು’ ಎಂಬುದು ಸಂತ್ರಸ್ತ ಸೂರ್ಯ ನಾರಾಯಣ ಮಂಡಲ್ ಅವರ ಆಗ್ರಹವಾಗಿದೆ.




