ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಮಹಿಳೆ, ತನ್ನ ಪತಿಯ ತಾಯಿ-ತಂದೆಯನ್ನು (ಅತ್ತೆ-ಮಾವ) ತೊರೆಯಲು ಸಾಧ್ಯವಿಲ್ಲ. ಆಕೆ ಪತಿಯ ಕುಟುಂಬವನ್ನು ಪೋಷಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ಆದೇಶ ಹೊರಡಿಸಿದೆ. ಮಹಿಳೆಯು ತಾನು ದುಡಿಯುವ ವೇತನದಲ್ಲಿ 25%ರಷ್ಟು ಹಣವನ್ನು ಅತ್ತೆಗೆ ನೀಡಬೇಕೆಂದು ನಿರ್ದೇಶನ ನೀಡಿದೆ.
ಮಹಿಳೆಯೊಬ್ಬರು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದು, ಬಳಿಕ ಪತಿಯ ಕುಟುಂಬವನ್ನು ತೊರೆದಿದ್ದರು. ಆಕೆಯ ಧೋರಣೆಯನ್ನು ಪ್ರಶ್ನಿಸಿ ಅತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಜಸ್ಟಿಸ್ ಆನಂದ್ ಶರ್ಮಾ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. “ಪತಿಯ ಕುಟುಂಬವನ್ನು ಪೋಷಿಸುವುದಾಗಿ ಮುಚ್ಚಳಿಕೆ ನೀಡಿ ಕೆಲಸ ಪಡೆದ ಮೇಲೆ, ಆಕೆ ಬೇರೊಂದು ಮದುವೆಯಾದ ಕಾರಣಕ್ಕೆ, ಮೃತ ಪತಿಯ ಪೋಷಕರನ್ನು ತೊರೆಯುವ ಅಥವಾ ಅವರ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ” ಎಂದು ಹೇಳಿದೆ.
“ಅನುಕಂಪದ ಆಧಾರದ ಮೇಲಿನ ಕೆಲಸವು ಮೃತನ ಕುಟುಂಬಕ್ಕೆ ಒದಗುವ ಆರ್ಥಿಕ ಆಸರೆಯಾಗಿದೆ. ಕುಟುಂಬ ಎಂದರೆ ಕೇವಲ ಪತ್ನಿ ಮಾತ್ರವಲ್ಲ, ಕಾನೂನಿನ ಪ್ರಕಾರ ಮೃತನ ಪೋಷಕರು ಮತ್ತು ಇತರ ಅವಲಂಬಿತರೂ ಸೇರುತ್ತಾರೆ. ಉದ್ಯೋಗ ಪಡೆದ ನಂತರ ಗಂಡನ ಮನೆಯನ್ನು ತೊರೆದು, ಮರುಮದುವೆಯಾಗಿ ವೃದ್ಧ ಪೋಷಕರನ್ನು ಅವರ ಪಾಡಿಗೆ ಬಿಡುವುದು ಅನುಕಂಪದ ಉದ್ಯೋಗ ಯೋಜನೆಯ ಮೂಲ ಉದ್ದೇಶಕ್ಕೇ ವಿರುದ್ಧವಾದದ್ದು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರಾದ ಜೋಧ್‌ಪುರ ಮೂಲದ ಚೋತ್ ಮಲ್ ವರ್ಮಾ ಅವರ ಪುತ್ರ ‘ಅಜ್ಮೇರ್ ವಿದ್ಯುತ್ ವಿತರಣ ನಿಗಮ ನಿಯಮಿತ’ (AVVNL) ಸಂಸ್ಥೆಯಲ್ಲಿ ತಾಂತ್ರಿಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣ ಹೊಂದಿದ್ದರು. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಆತನ ಅಗಲಿಕೆಯ ನಂತರ, ಆತನ ಪತ್ನಿಗೆ ಅನುಕಂಪದ ಆಧಾರದ ಮೇಲೆ ಅದೇ ಸಂಸ್ಥೆಯಲ್ಲಿ ಕೆಲಸ ನೀಡಲಾಗಿತ್ತು. ಆ ಸಂದರ್ಭದಲ್ಲಿ ಆಕೆ ಮೃತನ ಕುಟುಂಬಸ್ಥರನ್ನು ನಿರಂತರವಾಗಿ ಪೋಷಿಸುವುದಾಗಿ ಪ್ರಮಾಣಪತ್ರ ನೀಡಿದ್ದರು.
ಆದರೆ, ಉದ್ಯೋಗ ಸಿಕ್ಕ ನಂತರ, ಆಕೆ ಮಾವ ಮತ್ತು ಅತ್ತೆಯನ್ನು ತೊರೆದು ಮರುಮದುವೆಯಾಗಿದ್ದರು. ಅಲ್ಲದೆ ಅವರಿಗೆ ಯಾವುದೇ ರೀತಿಯ ಆರ್ಥಿಕ ನೆರವು ನೀಡುತ್ತಿರಲಿಲ್ಲ. ಅರ್ಜಿದಾರರ ಉಳಿದ ಇಬ್ಬರು ಪುತ್ರರು ಉದ್ಯೋಗದಲ್ಲಿ ಇಲ್ಲದ ಕಾರಣ, ತಮಗೆ ಜೀವನ ನಿರ್ವಹಣೆಗೆ ಹಣಕಾಸಿನ ನೆರವು ನೀಡುವಂತೆ ವೃದ್ಧ ಪೋಷಕರು ನ್ಯಾಯಾಲಯದ ಬಾಗಿಲು ತಟ್ಟಿದ್ದರು.
ಈ ಲೇಖನ ಓದಿದ್ದೀರಾ?: ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ ನಿರೀಕ್ಷೆ
ವಿಚಾರಣೆ ವೇಳೆ ಉತ್ತರಿಸಿದ ಪತ್ನಿ ಪರ ವಕೀಲರು, “ಅರ್ಜಿದಾರರು ತಮ್ಮನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಗಂಡನ ಮನೆಯನ್ನು ಬಿಡಬೇಕಾಯಿತು. ಅರ್ಜಿದಾರರನ್ನು ಅವರ ಇತರ ಇಬ್ಬರು ಗಂಡು ಮಕ್ಕಳು ನೋಡಿಕೊಳ್ಳಬಹುದು” ಎಂದು ವಾದಿಸಿದರು.
ಆದರೆ, ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ‘ಭಗವಾನ್ ಸಿಂಗ್ vs ಅಜ್ಮೇರ್ ವಿದ್ಯುತ್ ವಿತರಣ ನಿಗಮ’ ಪ್ರಕರಣದ ಪೂರ್ವ ತೀರ್ಪನ್ನು ಉಲ್ಲೇಖಿಸಿ, “ಅನುಕಂಪದ ಉದ್ಯೋಗ ಪಡೆದ ವ್ಯಕ್ತಿಗೆ ಕುಟುಂಬವನ್ನು ನೋಡಿಕೊಳ್ಳುವ ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿ ಇರುತ್ತದೆ” ಎಂದು ನೆನಪಿಸಿತು.
ಮಹಿಳೆಯ ಮಾಸಿಕ ವೇತನದಿಂದ 25% ರಷ್ಟು ಮೊತ್ತವನ್ನು ಕಡಿತಗೊಳಿಸಿ ಮೃತನ ತಾಯಿಯ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಇದರ ಜೊತೆಗೆ, ಮೃತ ಉದ್ಯೋಗಿಗೆ ಬರಬೇಕಿದ್ದ ಒಟ್ಟು ಬಾಕಿ ನಿವೃತ್ತಿ/ಸೇವಾ ಸೌಲಭ್ಯಗಳ ಮೊತ್ತದಲ್ಲಿ 50% ರಷ್ಟನ್ನು ಅರ್ಜಿದಾರರಾದ ಪೋಷಕರಿಗೆ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗೆ ನಿರ್ದೇಶನ ನೀಡಿದೆ.



