ಪಶ್ಚಿಮ ಬಂಗಾಳದಲ್ಲಿ 12 ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ 72 ವರ್ಷದ ನಿವೃತ್ತ ಶಿಕ್ಷಕರೊಬ್ಬರ ಹೆಸರು ಮತಪಟ್ಟಿಯಲ್ಲಿ ಇಲ್ಲದಂತಾಗಿದೆ. ಇದೇ ಎಸ್‌ಐಆರ್ ವಿಷಯಕ್ಕೆ ಸಂಬಂಧಿಸಿದಂತೆ 68 ವರ್ಷದ ವ್ಯಕ್ತಿಯೊಬ್ಬರು ನ್ಯಾಯಮಂಡಳಿ ಸರದಿಯಲ್ಲಿ ನಿಂತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ನಿರಾಶ್ರಿತರಾಗಿ ಬಂದಿದ್ದ 97 ವರ್ಷದ ವೃದ್ಧ ಇದುವರೆಗೆ ಒಂದು ಚುನಾವಣೆಯಲ್ಲಿಯೂ ಮತದಾನ ಚಲಾಯಿಸದೇ ಇದ್ದಿರಲಿಲ್ಲ, ಆದರೆ ಈ ಬಾರಿ ಎಸ್‌ಐಆರ್ ಪ್ರಕ್ರಿಯೆಯಿಂದ ಅವರ ಹೆಸರನ್ನು ಮತಪಟ್ಟಿಯಿಂದ ಅಳಿಸಲಾಗಿದೆ. ಈ ಬಾರಿ ಚುನಾವಣೆಯನ್ನು ಎದುರಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಕಾರಣದಿಂದ ಇಂತಹ ಅನೇಕ ಪ್ರಸಂಗಗಳು ನಡೆದಿವೆ.
ಸಬರ್ಣಬಾಲ ಪೊದ್ದಾರ್ ಎನ್ನುವವರು ಅವಿಭಜಿತ ಬಂಗಾಳದಲ್ಲಿ ಹುಟ್ಟಿದ್ದು, 1947ರಲ್ಲಿ ಸ್ಥಳಾಂತರಗೊಂಡರು. ಆ ನಂತರ ಪ್ರತಿ ಚುನಾವಣೆಯಲ್ಲೂ ಅವರು ಮತ ಚಲಾಯಿಸುತ್ತಿದ್ದರು. ಆದರೀಗ ಅವರ ಹೆಸರನ್ನು ಮತ ಪಟ್ಟಿಯಿಂದ ತೆಗೆಯಲಾಗಿದೆ. ಈ ಬಗ್ಗೆ ಯಾವುದೇ ಅರಿವಿಲ್ಲದ ಅವರು, “ಆರೋಗ್ಯ ಕೈಕೊಡದಿದ್ದರೆ ನಾನು ಮತ ಚಲಾಯಿಸುತ್ತೇನೆ” ಎಂದು ಹೇಳಿದ್ದಾರೆ. ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನನ್ನಲ್ಲಿ ಮತದಾರರ ಗುರುತಿನ ಚೀಟಿ ಇದೆ. ಆದ್ದರಿಂದ ನಾನು ಯಾವ ಕಾರಣಕ್ಕಾಗಿ ಮತ ಚಲಾವಣೆ ಮಾಡಬಾರದು?” ಎಂದು ಮರುಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಮತ್ತೊಮ್ಮೆ ಮಹಾ ದೋಖಾ: ಜಾಹೀರಾತಿಗೇ ಸೀಮಿತವಾದ ‘ಜಿ ರಾಮ್ ಜಿ’, ಹತಾಶೆಯತ್ತ ಗ್ರಾಮೀಣ ಕೂಲಿಕಾರರು
ಕೊಲ್ಕತ್ತಾದ ನರ್ಕೆಲ್ಡಂಗಾ ಪ್ರದೇಶದಲ್ಲಿ ವಾಸವಿರುವ ವೃದ್ಧೆ ಈ ಮೊದಲು ಮನೆಯಿಂದಲೇ ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಮತದಾರರ ಗುರುತಿನ ಚೀಟಿ, ಆಧಾರ್, ಪಾಸ್‌ಬುಕ್ ಮತ್ತು ವಿಧವಾ ಪಿಂಚಣಿ ದಾಖಲೆಗಳನ್ನು ಸಲ್ಲಿಸಿದರೂ ಸಾಧ್ಯವಾಗಿಲ್ಲ. ಕಾರಣ 2002ರ ಮತದಾರರ ಪಟ್ಟಿಯಲ್ಲಿ ‘ಸ್ವರ್ಣಬಾಲಾ’ ಎಂದು ಇರುವುದರಿಂದ ಅವರ ಕ್ಲೇಮ್ ಅನ್ನು ತಿರಸ್ಕಾರ ಮಾಡಲಾಗಿದೆ. ಫಾರ್ಮ್ 6 ಮೂಲಕ ಹೊಸ ಸೇರ್ಪಡೆಯೂ ಸಾಧ್ಯವಾಗಿಲ್ಲ. ಇನ್ನು, ಅವರ ಕುಟುಂಬದ ಎಂಟು ಮಂದಿಯಲ್ಲಿ ನಾಲ್ಕು ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ. ಇಬ್ಬರು ಮೊಮ್ಮಕ್ಕಳು ಸೇರಿ ನಾಲ್ಕು ಮಂದಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.
ನಿವೃತ್ತ ಶಿಕ್ಷಕ ಎಸ್. ಅಶ್ರಫುಲ್ ಹಕ್ 12 ಚುನಾವಣೆಗಳಲ್ಲಿ ಮತಗಟ್ಟೆಯ ಅಧಿಕಾರಿಯಾಗಿದ್ದರು. ಅವರ ಕುಟುಂಬದ ಸದಸ್ಯರ ಹೆಸರು ಮತಪಟ್ಟಿಯಲ್ಲಿದ್ದರೂ, ಅವರ ಹೆಸರನ್ನು ಅಳಿಸಲಾಗಿದೆ. ಅವರು ಪಾಸ್‌ಪೋರ್ಟ್, ಭೂದಾಖಲೆ, ಆಧಾರ್ ಮತ್ತು ಬ್ಯಾಂಕ್ ದಾಖಲೆಗಳನ್ನು ಸಲ್ಲಿಸಿದ್ದಾರೆ. “ತಲೆಮಾರುಗಳಿಂದ ನಾನು ಇಲ್ಲಿ ವಾಸವಿದ್ದೇನೆ. 1944ರಿಂದೀಚಿನ ಭೂದಾಖಲೆಗಳಿವೆ. 1956ರ ಮತಪಟ್ಟಿ, ನನ್ನ ಪೋಷಕರ ಹೆಸರು ಇರುವ ದಾಖಲೆಗಳೂ ಇವೆ. 2002ರ ಮತಪಟ್ಟಿಯಲ್ಲಿ ನನ್ನ ಹೆಸರಿದೆ. ಆದಾಗ್ಯೂ ವಿಚಾರಣೆಗೆ ಕರೆಯಲಾಗಿದೆ. ನೋಟಿಸ್‌ನಲ್ಲಿ ನಿರ್ದಿಷ್ಟ ಕಾರಣ ನೀಡಿಲ್ಲ” ಎಂದು ಅವರು ಆರೋಪ ಮಾಡಿದ್ದಾರೆ.
ನಾದಿಯಾ ಜಿಲ್ಲೆಯ ರಾಣಘಾಟ್‌ನಲ್ಲಿ ಎಸ್‌ಡಿಓ ಕಚೇರಿ ಮುಂದೆ ಮತಪಟ್ಟಿ ಪರಿಷ್ಕರಣೆ ಸರದಿಯಲ್ಲಿ ನಿಂತಿದ್ದ ಜೀಬನಕೃಷ್ಣ ಬಿಸ್ವಾಸ್ ಕುಸಿದು ಬಿದ್ದು ಮೃತಪಟ್ಟ ಘಟನೆಯೂ ನಡೆದಿದೆ.




