ಮತ್ತೊಮ್ಮೆ ಮಹಾ ದೋಖಾ: ಜಾಹೀರಾತಿಗೇ ಸೀಮಿತವಾದ ‘ಜಿ ರಾಮ್ ಜಿ’, ಹತಾಶೆಯತ್ತ ಗ್ರಾಮೀಣ ಕೂಲಿಕಾರರು

Date:

ಯಾವುದೇ ಯೋಜನೆ ಜನಪರವಾಗಬೇಕಾದರೆ ಅದು ಜನರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರಬೇಕು. ಆದರೆ ಕೇಂದ್ರದ ಬಹುತೇಕ ಯೋಜನೆಗಳು 'ಜನಪರ' ಆಗುವುದಕ್ಕಿಂತ ಹೆಚ್ಚಾಗಿ 'ಜಾಹೀರಾತು ಪರ' ಆಗಿವೆ. ಜಾಹೀರಾತಿಗೆ ಖರ್ಚು ಮಾಡಿದ ಹಣದಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಸಬ್ಸಿಡಿಗೆ ನೀಡಿದ್ದರೆ ಬಡವರಿಗೆ ಅನುಕೂಲವಾಗುತ್ತಿತ್ತು.

ನವ ಭಾರತದಲ್ಲಿ ಆಡಳಿತವೆಂದರೆ ಜನಪರ ಕೆಲಸ ಮಾಡುವುದಲ್ಲ; ತಾವು ಮಾಡದ ಕೆಲಸವನ್ನೂ ಮಾಡಿದ್ದೇವೆ ಎಂದು ನಂಬಿಸುವ ಭ್ರಮೆ ಸೃಷ್ಟಿಸುವುದು ಎನ್ನುವಂತಾಗಿದೆ. ಮೋದಿ ಸರ್ಕಾರ ಈ ‘ಜಾಹೀರಾತು ರಾಜಕಾರಣ’ದಲ್ಲಿ ಪಿಎಚ್‌.ಡಿ ಮಾಡಿದಂತಿದೆ. ಅದರ ಇತ್ತೀಚಿನ ಬಲಿಪಶು ಗ್ರಾಮೀಣ ಭಾರತದ ಜೀವನಾಡಿ ಮನರೇಗಾ. ದಶಕಗಳ ಕಾಲ ದೇಶದ ಹಳ್ಳಿಗಳ ಹಸಿವು ನೀಗಿಸಿ, ಬಡವರ ಪಾಲಿನ ಕಲ್ಪವೃಕ್ಷವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಇಂದು ಕೇಂದ್ರ ಸರ್ಕಾರದ ವ್ಯವಸ್ಥಿತ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದೆ. ತಳಮಟ್ಟದಲ್ಲಿ ಉದ್ಯೋಗ ಭರವಸೆ ನೀಡಿದ್ದ ಈ ಯೋಜನೆಯನ್ನು ವ್ಯವಸ್ಥಿತವಾಗಿ ನಾಶ ಮಾಡಿ, ಅದರ ಜಾಗದಲ್ಲಿ ‘ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಅಜೀವಿಕ ಮಿಷನ್’ (VB-GRAM G) ಹೆಸರಿನ ‘ಕೇಂದ್ರದ ಪ್ರಾಡಕ್ಟ್‌’ನ್ನು ಮಾರುಕಟ್ಟೆಗೆ ಇಳಿಸಲಾಗಿದೆ. ಇನ್ನೂ ಅನುಮೋದನೆಯನ್ನೇ ಪಡೆಯದ ಈ ಯೋಜನೆಯ ಪ್ರಚಾರಕ್ಕಾಗಿ ಕೋಟಿ ಕೋಟಿ ಹಣ ವ್ಯಯಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರ ಶ್ರಮಿಕ ವರ್ಗಕ್ಕೆ ಮಾಡುತ್ತಿರುವ ಮಹಾ ದೋಖಾ.

- Advertisement -

ಜಾಹೀರಾತುಗಳು ಸಾಮಾನ್ಯ ಜನರ ಮನಃಸ್ಥಿತಿಯ ಮೇಲೆ ಯಾವ ರೀತಿಯ ಗಾಢ ಪ್ರಭಾವ ಬೀರಬಲ್ಲವು ಎಂಬುದನ್ನು ಕೇಂದ್ರ ಸರ್ಕಾರ ಚೆನ್ನಾಗೇ ಅರಿತುಕೊಂಡಿದೆ. ಕೋಟಿ ಕೋಟಿ ಹಣ ಸುರಿದು ಅತಿರಂಜಿತ ಜಾಹೀರಾತುಗಳನ್ನು ಸೃಷ್ಟಿಸಿದರೆ ಜನರ ಕಣ್ಣಿಗೆ ಮಣ್ಣೆರಚಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿರಬಹುದು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ದತ್ತಾಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೇವಲ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಸುಮಾರು 6,500 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ವ್ಯಯಿಸಿದೆ. ಅಂದರೆ, ದಿನವೊಂದಕ್ಕೆ ಸರಾಸರಿ 1.5 ರಿಂದ 2 ಕೋಟಿ ರೂಪಾಯಿಗಳನ್ನು ಕೇವಲ ತನ್ನ ವ್ಯಕ್ತಿ ಕೇಂದ್ರಿತ ಪ್ರಚಾರಕ್ಕಾಗಿ ಸುರಿಯುತ್ತಿದೆ. ಬಡ ಕಾರ್ಮಿಕರು ಪೋಸ್ಟರ್‌ಗಳನ್ನು ನೋಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವಂತಾಗಿದೆ. ಜನ ಈ ಜಾಹೀರಾತುಗಳನ್ನೇ ನಂಬಿ ಮತ ಚಲಾಯಿಸುತ್ತಾರೆ ಎಂಬ ಅಚಲ ನಂಬಿಕೆಯಿಂದಲೇ ಇಂತಹ ‘ಇಮೇಜ್ ಬಿಲ್ಡಿಂಗ್’ ತಂತ್ರಗಳಿಗೆ ತೆರಿಗೆದಾರರ ಸಾವಿರಾರು ಕೋಟಿ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...
ngr

ಯಾವ ಯೋಜನೆಯ ಹಿರಿಮೆ ಸಾರಲು ಸರ್ಕಾರ ದೇಶಾದ್ಯಂತ ಜಾಹೀರಾತುಗಳ ಮಳೆ ಸುರಿಸುತ್ತಿದೆಯೋ, ಆ ಯೋಜನೆಗೆ ಇಂದಿನವರೆಗೂ ಅಧಿಕೃತ ಬಜೆಟ್ ಅನುಮೋದನೆಯೇ ದೊರೆತಿಲ್ಲ. ಈಗಾಗಲೇ ಹೊಸ ಹಣಕಾಸು ವರ್ಷ 2026-27 ಚಾಲ್ತಿಯಲ್ಲಿದ್ದರೂ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ‘ಲೇಬರ್ ಬಜೆಟ್’ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಹೀಗಾಗಿ, ಕೆಲಸಕ್ಕಾಗಿ ಗ್ರಾಮ ಪಂಚಾಯತ್ ಮೆಟ್ಟಿಲೇರುವ ಕಾರ್ಮಿಕರಿಗೆ ಹೊಸ ಕೆಲಸ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅಂಕಿಅಂಶಗಳ ಪ್ರಕಾರ ಕರ್ನಾಟಕದ ಸುಮಾರು 5,958 ಗ್ರಾಮ ಪಂಚಾಯತ್‌ಗಳ ಪೈಕಿ ಶೇ.81ರಷ್ಟು ಪಂಚಾಯತ್‌ಗಳಲ್ಲಿ ಅಂದರೆ 4,869 ಪಂಚಾಯತ್‌ಗಳಲ್ಲಿ ಈ ವರ್ಷ ‘ಶೂನ್ಯ ವೆಚ್ಚ’ ದಾಖಲಾಗಿದೆ. ಇದು ಸಾವಿರಾರು ಹಳ್ಳಿಗಳಲ್ಲಿ ಉದ್ಯೋಗವಿಲ್ಲದೆ ಜನರು ಹತಾಶರಾಗಿ ಕುಳಿತಿರುವುದನ್ನು ತೋರಿಸುತ್ತದೆ. ಪ್ರಚಾರಕ್ಕಾಗಿ ಹಣದ ಹೊಳೆ ಹರಿಸುವ ಸರ್ಕಾರಕ್ಕೆ, ಗ್ರಾಮೀಣ ಶ್ರಮಿಕ ವರ್ಗಕ್ಕೆ ಕೂಲಿ ನೀಡಲು ಮಾತ್ರ ಹಣದ ಕೊರತೆ ಎದುರಾಗುತ್ತಿದೆ.

ಜಾಹೀರಾತು ಮೋಸದ ಜಾಲ ನರೇಗಾಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಬಿಡುಗಡೆಯಾದ ಹಣದ ಪೈಕಿ ಸುಮಾರು ಶೇ. 80ರಷ್ಟು ಹಣ ಕೇವಲ ಜಾಹೀರಾತು ಮತ್ತು ಪ್ರಚಾರಕ್ಕೇ ಬಳಕೆಯಾಗಿದೆ ಎಂದು ಸಂಸತ್ತಿನ ಸಮಿತಿಯ ವರದಿಯೇ ಬೊಟ್ಟು ಮಾಡಿದೆ! ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಬಳಕೆಯಾಗಬೇಕಿದ್ದ ಹಣ ಪ್ರಧಾನಿಯವರ ಫೋಟೋ ಇರುವ ಫ್ಲೆಕ್ಸ್ ಮತ್ತು ಪತ್ರಿಕಾ ಜಾಹೀರಾತುಗಳ ಪಾಲಾಗಿದೆ. ಇದು ಯೋಜನೆಯ ಉದ್ದೇಶವನ್ನೇ ಬುಡಮೇಲು ಮಾಡಿದ ಮಹಾ ವಂಚನೆ. ಹಾಗೆಯೇ, ‘ಉಜ್ವಲ ಯೋಜನೆ’ಯಡಿಯಲ್ಲಿ ಉಚಿತ ಗ್ಯಾಸ್ ನೀಡುತ್ತೇವೆಂದು ಕೋಟಿಗಟ್ಟಲೆ ಜಾಹೀರಾತು ನೀಡಲಾಯಿತು. ಇಂದು ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದ್ದು, ಬಡ ಮಹಿಳೆಯರು ಮತ್ತೆ ಕೊಳವೆ ಹಿಡಿದು ಒಲೆ ಊದುತ್ತಿದ್ದಾರೆ. ಜಾಹೀರಾತಿಗೆ ಖರ್ಚು ಮಾಡಿದ ಹಣದಲ್ಲಿ ಕನಿಷ್ಠ ಅರ್ಧದಷ್ಟನ್ನು ಸಬ್ಸಿಡಿಗೆ ನೀಡಿದ್ದರೆ ಬಡವರಿಗೆ ಅನುಕೂಲವಾಗುತ್ತಿತ್ತು. ಜಾಹೀರಾತುಗಳಲ್ಲಿ ಮುಗುಳ್ನಗುವ ಮಹಿಳೆಯರಿಗೂ, ವಾಸ್ತವದಲ್ಲಿ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಮಹಿಳೆಯರಿಗೂ ಯಾವುದೇ ಸಂಬಂಧವಿಲ್ಲ.

ಟಿವಿ, ಸಿನಿಮಾ ಮಂದಿರ ಹಾಗೂ ರೇಡಿಯೋಗಳಲ್ಲಿ ‘ಸ್ವಚ್ಛ ಭಾರತ್ ಅಭಿಯಾನ’ (Swachh Bharat Mission) ಯೋಜನೆಯ ಜಾಹೀರಾತುಗಳು ಅತಿ ಹೆಚ್ಚು ಪ್ರಸಾರವಾದವು. ಇದಕ್ಕಾಗಿ ಸೆಲೆಬ್ರಿಟಿಗಳನ್ನು ಬಳಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಯಿತು. ಆದರೆ, ಗ್ರಾಮೀಣ ಭಾಗದಲ್ಲಿ ಕಟ್ಟಲಾದ ಲಕ್ಷಾಂತರ ಶೌಚಾಲಯಗಳಿಗೆ ನೀರಿನ ಸಂಪರ್ಕವೇ ಇಲ್ಲ. ಜಾಹೀರಾತುಗಳಲ್ಲಿ ದೇಶ ‘ಬಯಲು ಶೌಚ ಮುಕ್ತ’ ಎಂದು ಘೋಷಿಸಲಾಯಿತಾದರೂ, ಆ ಶೌಚಾಲಯಗಳು ಇಂದು ಕಸದ ತೊಟ್ಟಿಗಳಾಗಿವೆ.

ನಗರಗಳನ್ನು ವಿದೇಶಿ ನಗರಗಳಂತೆ ಮಾಡುವುದಾಗಿ ‘ಸ್ಮಾರ್ಟ್‌ಸಿಟಿ ಮಿಷನ್‌’ನಡಿ ಭರ್ಜರಿ ಗ್ರಾಫಿಕ್ಸ್ ಜಾಹೀರಾತುಗಳನ್ನು ನೀಡಲಾಯಿತು. ಆದರೆ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿರುವ ನಗರಗಳು ಮಳೆಯಾದಾಗ ಮುಳುಗಿ, ಬೇಸಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ರಸ್ತೆಗಳು ಗುಂಡಿಮಯವಾಗಿವೆ. ಜಾಹೀರಾತಿನಲ್ಲಿ ತೋರಿಸಿದ ಹೈಟೆಕ್ ನಗರಗಳು ಕಂಪ್ಯೂಟರ್ ಸ್ಕ್ರೀನ್ ಬಿಟ್ಟು ಹೊರಗಿಳಿಯುತ್ತಲೇ ಇಲ್ಲ.

image 2026 04 09T163829.747

ಹಾವೇರಿ ಜಿಲ್ಲೆಯ ನರೇಗಾ ಕೂಲಿಕಾರ್ಮಿಕರ ಸಂಘಟನೆಯ ಮುಖಂಡರೊಬ್ಬರು ಸರ್ಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, “ಹಾವೇರಿಯ ಕೇವಲ ಐದು ಬ್ಲಾಕ್‌ಗಳಲ್ಲಿಯೇ 15,000ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಅರ್ಧಕ್ಕರ್ಧ ಮಹಿಳೆಯರೇ ಇದ್ದಾರೆ. ಸದ್ಯ ನರೇಗಾ ಹೆಸರನ್ನು ಬದಲಿಸಿ ‘ವಿಬಿಜಿ ರಾಮ್‌ ಜಿ’ ಎಂಬ ಹೊಸ ಯೋಜನೆ ತರುವ ಸರ್ಕಾರದ ಕಸರತ್ತಿನ ನಡುವೆ ಬಡವರ ಬದುಕು ಮೂರಾಬಟ್ಟೆಯಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳಾಗಲೀ ಅಥವಾ ಜಿಪಂ ಸಿಇಒ ಆಗಲೀ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಬಡವರ ಹೊಟ್ಟೆಪಾಡಿನ ಬಗ್ಗೆ ಯಾರಿಗೂ ಕಾಳಜಿ ಇಲ್ಲದಂತಾಗಿದೆ. ದಿನಕ್ಕೆ ಸಿಗುವ 370 ರೂಪಾಯಿ ಕೂಲಿಯಲ್ಲಿಯೇ ಜೀವನ ಸಾಗಿಸಬೇಕಾದ ಕಾರ್ಮಿಕರಿಗೆ ಈಗ ಎರಡೆರಡು ವಾರಗಳ ವೇತನ ಬಾಕಿ ಇದೆ. ಒಂದು ಕಡೆ ಹಳೆಯ ಬಾಕಿ ಹಣವೂ ಬಂದಿಲ್ಲ, ಇನ್ನೊಂದು ಕಡೆ ಹೊಸದಾಗಿ ಕೆಲಸವೂ ಸಿಗುತ್ತಿಲ್ಲ. ಹೀಗಾದರೆ ಬಡವರು ಬದುಕುವುದು ಹೇಗೆ? ಹೊಸ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವವರೆಗಾದರೂ ಹಳೆಯ ಯೋಜನೆಯಲ್ಲೇ ಕೆಲಸ ಕೊಡಬಹುದಿತ್ತು. ಆದರೆ ಸರ್ಕಾರ ಈಗ ‘ಅತ್ತ ಹಳೆಯದೂ ಇಲ್ಲ, ಇತ್ತ ಹೊಸದೂ ಇಲ್ಲ’ ಎನ್ನುವಂತಹ ಪರಿಸ್ಥಿತಿ ನಿರ್ಮಿಸಿ ಕಾರ್ಮಿಕರನ್ನು ಹತಾಶೆಗೆ ತಳ್ಳಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಯೋಜನೆ ಜನಪರವಾಗಬೇಕಾದರೆ ಅದು ಜನರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರಬೇಕು. ಆದರೆ ಕೇಂದ್ರದ ಬಹುತೇಕ ಯೋಜನೆಗಳು ‘ಜನಪರ’ ಆಗುವುದಕ್ಕಿಂತ ಹೆಚ್ಚಾಗಿ ‘ಜಾಹೀರಾತು ಪರ’ ಆಗಿವೆ. ಯೋಜನೆಯ ಯಶಸ್ಸಿಗಿಂತ ಹೆಚ್ಚಾಗಿ ಪ್ರಧಾನಿಯವರ ಇಮೇಜ್ ಬೆಳೆಸಲು ಈ ಹಣ ಬಳಕೆಯಾಗುತ್ತಿದೆ. ನರೇಗಾದಂತಹ ನೇರ ನಗದು ವರ್ಗಾವಣೆ ಮತ್ತು ಕೆಲಸ ನೀಡುವ ಯೋಜನೆಗಳನ್ನು ನಾಶ ಮಾಡಿ, ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಗಳಿಗೆ ಜಾಹೀರಾತಿನ ಬಣ್ಣ ಹಚ್ಚಲಾಗುತ್ತಿದೆ.

“ರಾಜ್ಯ ಸರ್ಕಾರವು ಕಾಲಕಾಲಕ್ಕೆ ಎಲ್ಲಾ ಅಂದಾಜು ಪಟ್ಟಿಗಳನ್ನು ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಲೇಬರ್ ಬಜೆಟ್ ಅನುಮೋದನೆಯನ್ನು ತಡೆಹಿಡಿದಿದೆ. ಹೊಸ ವ್ಯವಸ್ಥೆ ಸಿದ್ಧವಾಗದಿದ್ದರೂ ಹಳೆಯದನ್ನು ಸ್ಥಗಿತಗೊಳಿಸಿರುವುದು ಮತ್ತು ಜಾಹೀರಾತುಗಳ ಮೂಲಕ ಬಣ್ಣದ ಸುಳ್ಳುಗಳನ್ನು ಹೇಳುತ್ತಿರುವುದು ಗ್ರಾಮೀಣ ಭಾರತಕ್ಕೆ ಮಾಡುತ್ತಿರುವ ದೊಡ್ಡ ಅವಮಾನ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಬದಲಿಗೆ ಬಡವರಿಂದ ಶ್ರೀಮಂತರ ಕಡೆಗೆ ಸಂಪತ್ತನ್ನು ವರ್ಗಾಯಿಸುವ ಮತ್ತು ಜನರ ಗಮನವನ್ನು ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ಜಾಹೀರಾತು ಮಾದರಿಯ ಸರ್ವಾಧಿಕಾರ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿರುವುದಾಗಿ ‘ದ ಹಿಂದೂ’ ವರದಿ ಮಾಡಿದೆ.

ಇದನ್ನೂ ಓದಿ: ʼಗ್ಲೋಬಲ್‌ ವಾರ್ಮಿಂಗ್ʼ ಮಹಾಮಾರಿಗೆ ನಿಮ್ಮನೆಯ ಎಸಿ, ರೆಫ್ರಿಜರೇಟರ್‌ಗಳ ಕೊಡುಗೆ ಏನು ಗೊತ್ತೇ?

ಯಾವುದೇ ಸರ್ಕಾರದ ಯಾವುದೇ ಯೋಜನೆಗಳು ಬಡವನ ಹೊಟ್ಟೆ ತುಂಬಿಸುತ್ತಿದ್ದರೆ, ಅವುಗಳಿಗೆ ಕೋಟಿ ಹಣ ಸುರಿದು, ಸೆಲೆಬ್ರಿಟಿಗಳ ಕರೆತಂದು, ಜಾಹೀರಾತು ನೀಡಿ ಪ್ರಚಾರ ಮಾಡುವ ಅಗತ್ಯವೇ ಇಲ್ಲ. ಅವು ಜನಪರವಾಗಿದ್ದರೆ, ತಾವಾಗಿಯೇ ಪ್ರಚಾರವಾಗುತ್ತವೆ, ಸರ್ಕಾರದ ಅಧಿಕಾರದ ಕುರ್ಚಿಗೆ ಕಾಲುಗಳಾಗುತ್ತವೆ. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಪರಿಸ್ಥಿತಿ ಹೀಗಿಲ್ಲ. ಈಗಿನ ಪ್ರತಿ ಜಾಹೀರಾತುಗಳ ಮೇಲಿನ ಒಂದೊಂದು ರೂಪಾಯಿಯೂ ಹಸಿದವನ ಬಾಯಿಯಿಂದ ಕಸಿದುಕೊಂಡ ತುತ್ತಿನಂತಿದೆ. ಈ “ಜಾಹೀರಾತು ರಾಜಕಾರಣ”ದ ವಿರುದ್ಧ ಜನರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೀನಾಯ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.

ಸವಕಲಾದ ಭರವಸೆಗಳಿಗಿಂತ ಸಬಲವಾದ ಕೆಲಸದ ಅಗತ್ಯವಿರುವ ಈ ಹೊತ್ತಿನಲ್ಲಿ, ಸರ್ಕಾರವು ತನ್ನ ಪ್ರಚಾರದ ಗೀಳು ಬಿಟ್ಟು ಜನರ ಬದುಕಿನ ಕಡೆಗೆ ಗಮನಹರಿಸಬೇಕಿದೆ. ಹಸಿವಿನ ಸಂಕಟ ಎಂಥದ್ದು ಎಂಬ ಕನಿಷ್ಠ ಜ್ಞಾನ ಈ ಆಡಳಿತಾರೂಢರಿಗೆ ಅರ್ಥವಾಗಬೇಕಿದೆ. ಅಲ್ಲಿಯವರೆಗೆ, ‘ವಿಕಸಿತ ಭಾರತ’ ಎನ್ನುವುದು ಬಡವರ ಪಾಲಿಗೆ ದುಬಾರಿ ಮತ್ತು ಮೋಸದ ಜಾಹೀರಾತು ಆಗಿಯೇ ಉಳಿಯಲಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...