ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೂತನ ಆತ್ಮಕತೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಇತ್ತೀಚೆಗೆ ಪ್ರಕಟಗೊಂಡಿದ್ದು, ದೇಶದ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ. 544 ಪುಟಗಳ ಈ ಪುಸ್ತಕದಲ್ಲಿ ಅವರು 2011ರ ಅಣ್ಣಾ ಹಜಾರೆ ನೇತೃತ್ವದ ‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ (IAC) ಭ್ರಷ್ಟಾಚಾರ ವಿರೋಧಿ ಚಳವಳಿ, ಯುಪಿಎ (UPA-II) ಸರ್ಕಾರದ ಮೇಲಾದ ಪರಿಣಾಮ ಮತ್ತು ಡಾ. ಮನಮೋಹನ್ ಸಿಂಗ್ ಅನುಭವಿಸಿದ ರಾಜಕೀಯ ಒತ್ತಡಗಳ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ.
ಆದಾಗ್ಯೂ, ಈ ಪುಸ್ತಕದಲ್ಲಿ ಉಲ್ಲೇಖಿಸಲಾದ ಕೆಲವು ಮುಖ್ಯ ದಿನಾಂಕಗಳು ಮತ್ತು ರಾಜಕೀಯ ಘಟನೆಗಳಲ್ಲಿ ಕಂಡುಬಂದಿರುವ ಕಾಲಾನುಕ್ರಮದ ದೋಷಗಳು ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಯ ವಸ್ತುವಾಗಿವೆ. ಅಣ್ಣಾ ಹಜಾರೆ ಅವರು 2011ರ ಏಪ್ರಿಲ್ 5ರಂದು ಹೋರಾಟ ಆರಂಭಿಸಿದ್ದರು. ಆದರೆ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಈ ಚಳವಳಿ 2012ರಲ್ಲಿ ಪ್ರಾರಂಭವಾಯಿತು ಎಂದು ತಪ್ಪಾಗಿ ಬರೆದಿದ್ದಾರೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿ ಒಂದು ದೊಡ್ಡ ತಪ್ಪು; ಇಂದಿರಾ ಗಾಂಧಿಗೂ ಪಶ್ಚಾತ್ತಾಪವಿತ್ತು: ಸೋನಿಯಾ ಗಾಂಧಿ
ಇದನ್ನು ಹೊರತುಪಡಿಸಿದಂತೆ ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರು ಅಣ್ಣಾ ಹಜಾರೆ ಅವರ ಚಳವಳಿಯ ತೆರೆಯ ಮರೆಯಲ್ಲಿದ್ದ ರಾಜಕೀಯ ತಂತ್ರಗಳನ್ನು ಮುಕ್ತವಾಗಿ ವಿಮರ್ಶಿಸಿದ್ದಾರೆ. ಅಣ್ಣಾ ಹಜಾರೆ ನೇತೃತ್ವದ ಚಳವಳಿಯು ಕೇವಲ ಜನಸಾಮಾನ್ಯರ ಸತ್ಯಾಗ್ರಹವಾಗಿರಲಿಲ್ಲ, ಅದರ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅತ್ಯಂತ ಯೋಜನಾಬದ್ಧವಾಗಿ ಬೆಂಬಲ ನೀಡಿದ್ದವು ಎಂದು ಆರೋಪಿಸಿದ್ದಾರೆ.
ಚಳವಳಿಯ ನೈಜ ಉದ್ದೇಶ ಭ್ರಷ್ಟಾಚಾರ ನಿರ್ಮೂಲನೆಯಾಗಿರಲಿಲ್ಲ, ಬದಲಿಗೆ ತೀವ್ರ ಸುಳ್ಳು ಪ್ರಚಾರಗಳ ಮೂಲಕ ಆಗಿನ ಯುಪಿಎ-2 ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿತ್ತು. ಈ ರಾಜಕೀಯ ಉದ್ದೇಶ ಈಡೇರಿ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಣ್ಣಾ ಹಜಾರೆ ಅಥವಾ ಅವರ ಹೋರಾಟದ ಬಗ್ಗೆ ಯಾರೂ ಮಾತನಾಡಲಿಲ್ಲ, ಚಳವಳಿ ಸಂಪೂರ್ಣವಾಗಿ ಮರೆಯಾಯಿತು ಎಂದು ಬರೆದಿದ್ದಾರೆ.
ಯುಪಿಎ ಸರ್ಕಾರವು ತೀವ್ರ ರಾಜಕೀಯ ಒತ್ತಡದ ನಡುವೆಯೂ 2013-14ರಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ 2014ರ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಲೋಕಪಾಲ್ ಸಂಸ್ಥೆಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿತು ಮತ್ತು ಅದನ್ನು ಹಲ್ಲುಗಳಿಲ್ಲದ ಹುಲಿಯನ್ನಾಗಿ ಪರಿವರ್ತಿಸಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅಂತರಂಗದ ಧ್ವನಿ ‘ಬಿಲಾಂಗಿಂಗ್’- ರಾಜೀವ್ ಹತ್ಯೆಯ ನಂತರದ ಧರ್ಮಸಂಕಟ ಬಿಚ್ಚಿಟ್ಟ ಸೋನಿಯಾ ಗಾಂಧಿ
ಈ ಚಳವಳಿ ಮತ್ತು ಮಾಧ್ಯಮಗಳ ಏಕಪಕ್ಷೀಯ ದಾಳಿಯಿಂದಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವಕ್ಕೆ ಕುಂದು ತರಲು ಯತ್ನಿಸಲಾಯಿತು. ಆದರೆ ಮನಮೋಹನ್ ಸಿಂಗ್ ಅವರು “ಮಾಧ್ಯಮಗಳಿಗಿಂತ ಇತಿಹಾಸವೇ ನನ್ನ ಬಗ್ಗೆ ಹೆಚ್ಚು ದಯೆ ತೋರಿಸುತ್ತದೆ” ಎಂದು ಹೇಳುವ ಮೂಲಕ ತಮ್ಮ ಘನತೆಯನ್ನು ಎತ್ತಿ ಹಿಡಿದರು ಎಂದು ಸ್ಮರಿಸಿದ್ದಾರೆ.
ಅಣ್ಣಾ ಹಜಾರೆ ಪರ-ವಿರೋಧ ಆಕ್ರೋಶ
ಅಣ್ಣಾ ಹಜಾರೆ ಬಗ್ಗೆ ಸೋನಿಯಾ ಗಾಂಧಿ ಬರೆದಿರುವುದನ್ನು ಬೆಂಬಲಿಸಿ ಒಂದು ವರ್ಗದ ನೆಟ್ಟಿಗರು ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದು ವರ್ಗ ಕಾಲಕ್ರಮ ತಪ್ಪಾಗಿರುವುದನ್ನೇ ಮುನ್ನೆಲೆಗೆ ತರುವ ಯತ್ನ ನಡೆಸುತ್ತಿದ್ದಾರೆ. 2011ರಲ್ಲಿ ಕೋಟಿಗಟ್ಟಲೆ ಜನಸಾಮಾನ್ಯರು ಭ್ರಷ್ಟಾಚಾರದ ವಿರುದ್ಧ ಶುದ್ಧ ಭಾವನೆಯಿಂದ ಬೀದಿಗೆ ಇಳಿದಿದ್ದರು. ಆದರೆ, ಅಣ್ಣಾ ಹಜಾರೆ ಮತ್ತು ಅವರ ಸಹಚರರು ಅಂದರೆ ಇಂದಿನ ಆಪ್ ಮ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಆರ್‌ಎಸ್‌ಎಸ್‌ನ ಅಜೆಂಡಾಕ್ಕೆ ಬಳಕೆಯಾದರು ಎಂದು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಣ್ಣಾ ಹಜಾರೆ ಅವರು ಲೋಕಪಾಲ್ ಸ್ಥಾಪನೆ ಅಥವಾ ಪ್ರಸ್ತುತ ಬೆಲೆ ಏರಿಕೆ, ಭ್ರಷ್ಟಾಚಾರದ ವಿಷಯಗಳ ಬಗ್ಗೆ ಗಂಭೀರ ಹೋರಾಟವನ್ನೇ ಮಾಡಲಿಲ್ಲ. “ಅಂದು ಯುಪಿಎ ಸರ್ಕಾರವನ್ನು ಉರುಳಿಸುವುದಕ್ಕಷ್ಟೇ ಇವರ ಹೋರಾಟ ಸೀಮಿತವಾಗಿತ್ತೇ?” ಎಂದು ನೆಟ್ಟಿಗರು ಹಜಾರೆ ಅವರ ನಿಲುವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ಮತ್ತು ಚಳವಳಿಯ ವಿರುದ್ಧ ಸೋನಿಯಾ ಗಾಂಧಿ ಅವರ ಪುಸ್ತಕ ಹಾಗೂ ನೆಟ್ಟಿಗರ ಆಕ್ರೋಶದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಣ್ಣಾ ಹಜಾರೆ ಪ್ರತಿಕ್ರಿಯಿಸಿದ್ದು, “ಜನರು ಯಾವ ಬಣ್ಣದ ಕನ್ನಡಕ ಧರಿಸುತ್ತಾರೋ ಅವರಿಗೆ ಜಗತ್ತು ಅದೇ ಬಣ್ಣದಲ್ಲಿ ಕಾಣಿಸುತ್ತದೆ” ಎಂದು ಹೇಳುವ ಮೂಲಕ ತಮ್ಮ ಹೋರಾಟಕ್ಕೆ ಯಾವುದೇ ರಾಜಕೀಯ ಬಣ್ಣವಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಇಂದಿನ ಸರ್ಕಾರದ ಭ್ರಷ್ಟತೆ, ಬೆಲೆ ಏರಿಕೆ ಬಗ್ಗೆ ಪ್ರತಿಭಟಿಸದೆ ಇರುವುದು ಏಕೆ ಎಂಬ ಬಗ್ಗೆ ಉತ್ತರಿಸಿಲ್ಲ.




