ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಕುಸಿದಿದ್ದರೂ ಜನಸಾಮಾನ್ಯರಿಗೆ ಅದರ ಲಾಭ ಮಾತ್ರ ಸಿಗುತ್ತಿಲ್ಲ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರುತ್ತಲೇ ಇವೆ ಏಕೆ? ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಜೆ ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಾರಿಗೆಯಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ಪ್ರತಿಯೊಂದು ವಲಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಸಾಮಾನ್ಯ ಜನರ ಮೇಲಿನ ಹಣದುಬ್ಬರದ ಹೊರೆ ತೀವ್ರಗೊಳ್ಳುತ್ತಿದೆ. ಆದರೂ ಸರ್ಕಾರದ ಲೂಟಿ ಮತ್ತು ಲಾಭಕೋರತನ ಮುಂದುವರಿದಿದೆ. ಜಾಗತಿಕವಾಗಿ ಕಚ್ಚಾ ತೈಲ ಅಗ್ಗವಾಗಿದ್ದರೂ ಭಾರತದಲ್ಲಿ ಇಂಧನ ಏಕೆ ದುಬಾರಿಯಾಗುತ್ತಿದೆ? ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನು ʼಮೆಹಂಗಾಯಿ ಮಾನವʼ (ಹಣದುಬ್ಬರದ ಮನುಷ್ಯ) ಎಂದು ಲೇವಡಿ ಮಾಡಿದ್ದು, ʼಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದು ಮತ್ತು ಉಳಿದ ಸಮಯದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದು ಸರ್ಕಾರದ ಕೆಲಸವಾಗಿದೆʼ ಎಂದು ಟೀಕಿಸಿದ್ದಾರೆ.
ಸದ್ಯ ತೈಲ ಕಂಪನಿಗಳು ಅಂತಾರಾಷ್ಟ್ರೀಯ ದರಗಳ ಏರಿಳಿತದ ಹೊರೆಯನ್ನು ಗ್ರಾಹಕರ ಮೇಲೆ ಸತತವಾಗಿ ಹಾಕುತ್ತಿರುವುದರಿಂದ, ಜಾಗತಿಕ ಮಾರುಕಟ್ಟೆಯ ಇಳಿಕೆಯ ಲಾಭ ಸದ್ಯಕ್ಕಂತೂ ಭಾರತೀಯರ ಕೈಸೇರುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಇರಾನ್ ಸಂಘರ್ಷ ತಿಳಿಯಾಗುವ ಮುನ್ಸೂಚನೆಗಳ ನಡುವೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೊನೆಗೂ $100ಕ್ಕಿಂತ ಕಡಿಮೆಯಾಗಿದೆ. ಡಬ್ಲ್ಯುಟಿಐ (WTI) ಕಚ್ಚಾ ತೈಲದ ಬೆಲೆ ಶೇ.6ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ $90.80 ತಲುಪಿದ್ದರೆ, ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 5.64 ರಷ್ಟು ಇಳಿಕೆಯಾಗಿ $97.70ಕ್ಕೆ ತಲುಪಿದೆ.
ಆದರೆ, ಜಾಗತಿಕವಾಗಿ ತೈಲ ಬೆಲೆ ಕುಸಿಯುತ್ತಿದ್ದರೂ, ಭಾರತೀಯ ಗ್ರಾಹಕರಿಗೆ ಮಾತ್ರ ಇಂಧನ ಬೆಲೆ ಏರಿಕೆಯ ಬಿಸಿ ತಪ್ಪಿಲ್ಲ. ಕಳೆದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ದೇಶದಲ್ಲಿ ನಾಲ್ಕು ಬಾರಿ ಇಂಧನ ದರವನ್ನು ಹೆಚ್ಚಿಸಲಾಗಿದ್ದು, ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 8 ರೂಪಾಯಿಗಳಷ್ಟು ದುಬಾರಿಯಾಗಿದೆ.
ಜಾಗತಿಕವಾಗಿ ಬೆಲೆ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಲು ಕೆಲ ಪ್ರಮುಖ ಕಾರಣಗಳೂ ಇವೆ ಎನ್ನುತ್ತಿದ್ದಾರೆ ವಿಶ್ಲೇಷಕರು.
ಇರಾನ್ ಸಂಘರ್ಷದ ಉತ್ತುಂಗದಲ್ಲಿದ್ದಾಗ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು $120 ತಲುಪಿತ್ತು. ಆ ಸಮಯದಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC, BPCL ಮತ್ತು HPCL ಗ್ರಾಹಕರಿಗೆ ಸಂಪೂರ್ಣ ಹೊರೆಯನ್ನು ವರ್ಗಾಯಿಸದೆ ನಷ್ಟ ಅನುಭವಿಸಿದ್ದವು. ಈಗ ಜಾಗತಿಕ ಬೆಲೆ ಇಳಿಕೆಯಾಗಿದ್ದರೂ, ಕಂಪನಿಗಳು ತಮ್ಮ ಹಳೆಯ ನಷ್ಟವನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡುತ್ತಿವೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒಪ್ಪಿದ್ದಾರೆ ಎಂಬುದು ಅಪ್ರಸ್ತುತ: ಡಾ. ಪರಮೇಶ್ವರ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲವನ್ನು ಡಾಲರ್ ಮೂಲಕ ಖರೀದಿಸಲಾಗುತ್ತದೆ. ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದುರ್ಬಲಗೊಂಡಿರುವುದರಿಂದ, ಕಚ್ಚಾ ತೈಲ ಅಗ್ಗವಾದರೂ ಆಮದು ವೆಚ್ಚ ಮಾತ್ರ ದುಬಾರಿಯಾಗಿಯೇ ಉಳಿದಿದೆ.
ಭಾರತವು ತನ್ನ ಒಟ್ಟು ಅಗತ್ಯದ ಶೇ. 85 ರಿಂದ 90 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸದ್ಯ $100ರ ಆಸುಪಾಸಿನ ಬೆಲೆ $120ಕ್ಕೆ ಹೋಲಿಸಿದರೆ ಕಡಿಮೆಯಾಗಿ ಕಾಣಬಹುದು, ಆದರೆ ಐತಿಹಾಸಿಕವಾಗಿ ಇದು ಭಾರತದಂತಹ ಆಮದು ಆಧಾರಿತ ದೇಶಕ್ಕೆ ಇಂದಿಗೂ ಅತ್ಯಂತ ದುಬಾರಿ.





