ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾರ್ಗವಾಗಿ ಭದ್ರಾ (ಮುತ್ತೋಡಿ) ಅಭಯಾರಣ್ಯಕ್ಕೆ ಬಲವಂತವಾಗಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮವನ್ನು CPI-ML Red Star ಪಕ್ಷದ ಚಿಕ್ಕಮಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂದೀಪ್ ಬಿ.ಆರ್ ತಿಳಿಸಿದ್ದಾರೆ.
ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಮಾನವ–ಆನೆ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಡಾನೆಗಳ ದಾಳಿಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರೈತರು ತಮ್ಮ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದು, ಕಾಫಿ ಬೆಳೆಗಾರರು ಹಾಗೂ ಗ್ರಾಮೀಣ ಜನರು ನಿರಂತರ ಆತಂಕದಲ್ಲಿ ಬದುಕುವಂತಾಗಿದೆ.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆಯ ಬೇಲೂರು ಭಾಗದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಗಳಿಗೆ ಬಲವಂತವಾಗಿ ಅಟ್ಟುವುದು ಜನರ ಬದುಕಿನ ಮೇಲೆ ಮತ್ತಷ್ಟು ಅಪಾಯವನ್ನು ತಂದೊಡ್ಡಲಿದೆ. ಈ ವಿಚಾರದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಜಂಟಿಯಾಗಿ ವಿರೋಧ ವ್ಯಕ್ತಪಡಿಸಿ, ಆನೆಗಳನ್ನು ಹಿಂದಕ್ಕೆ ಕಳುಹಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಯನಾ ಮೋಟಮ್ಮ ಅವರು ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳೇ ತಮ್ಮ ಕ್ಷೇತ್ರದ ಜನರ ಜೀವ ಮತ್ತು ಬದುಕಿನ ರಕ್ಷಣೆಗಾಗಿ ರಾಜೀನಾಮೆಯಂತಹ ತೀವ್ರ ನಿರ್ಧಾರಕ್ಕೆ ಮುಂದಾಗಿರುವುದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ.
ಒಂದು ಪ್ರದೇಶದ ಮಾನವ–ವನ್ಯಜೀವಿ ಸಂಘರ್ಷದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನೆಪದಲ್ಲಿ ಮತ್ತೊಂದು ಪ್ರದೇಶದ ಜನರ ಮೇಲೆ ಸಮಸ್ಯೆಯನ್ನು ವರ್ಗಾಯಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ವನ್ಯಜೀವಿಗಳ ಸಂರಕ್ಷಣೆ ಅತ್ಯಂತ ಅಗತ್ಯ. ಅದೇ ರೀತಿ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ರೈತರು, ಕಾರ್ಮಿಕರು, ಆದಿವಾಸಿಗಳು ಹಾಗೂ ಗ್ರಾಮೀಣ ಜನರ ಜೀವ ಮತ್ತು ಜೀವನೋಪಾಯದ ರಕ್ಷಣೆಯೂ ಸರ್ಕಾರದ ಜವಾಬ್ದಾರಿಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ‘ನಾಟಕ ನಿಲ್ಲಿಸಿ ನಯನ ಮೋಟಮ್ಮ’ ; ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ
ಹಕ್ಕೋತ್ತಾಯಗಳು:
1. ಬೇಲೂರಿನಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಬಲವಂತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು.
2. ಈಗಾಗಲೇ ಮೂಡಿಗೆರೆ ಭಾಗಕ್ಕೆ ಬಂದಿರುವ ಆನೆಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ, ಅವುಗಳ ಸುರಕ್ಷಿತ ನಿರ್ವಹಣೆ, ಜನರ ರಕ್ಷಣೆ ಮತ್ತು ಮಾನವ–ಆನೆ ಸಂಘರ್ಷ ತಡೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
3. ಭದ್ರಾ ಅಭಯಾರಣ್ಯದ ಪರಿಸರ ಸಾಮರ್ಥ್ಯ, ಆಹಾರ ಮತ್ತು ನೀರಿನ ಲಭ್ಯತೆ, ವನ್ಯಜೀವಿಗಳ ಆವಾಸಸ್ಥಾನ ಹಾಗೂ ಸ್ಥಳೀಯ ಜನರ ಸುರಕ್ಷತೆಯ ಕುರಿತು ತಜ್ಞರ ಸಮಗ್ರ ವರದಿ ಪಡೆಯಬೇಕು.
4. ಸ್ಥಳೀಯ ರೈತರು, ಗ್ರಾಮಸ್ಥರು, ಆದಿವಾಸಿ ಸಮುದಾಯಗಳು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪರಿಗಣಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು.
5. ಮಾನವ–ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು. ಬೆಳೆ ನಷ್ಟ ಮತ್ತು ಜೀವಹಾನಿಗೆ ತಕ್ಷಣ ಸಮರ್ಪಕ ಪರಿಹಾರ ನೀಡಬೇಕು.
ಇದನ್ನೂ ಓದಿದ್ದೀರಾ?ಹಾಸನ | ಆರ್.ಡಿ ವೀರಪ್ಪ ಸಾವು ನಿರ್ಲಕ್ಷ್ಯ: ಡಿ. 3ರಂದು ಬೃಹತ್ ಹೋರಾಟ; ಎಸ್.ಪಿ ಕಛೇರಿ ಮುತ್ತಿಗೆ
6. ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳನ್ನು ಸಂರಕ್ಷಿಸಿ, ಅರಣ್ಯ ಪ್ರದೇಶಗಳ ನಾಶ ಮತ್ತು ಒತ್ತುವರಿಯನ್ನು ತಡೆಯಬೇಕು.



