ಇತ್ತೀಚೆಗೆ, ತಮ್ಮ ಆಡಳಿತಾತ್ಮಕ ಸೇವೆಯ (ಐಎಎಸ್) ಹುದ್ದೆಗೆ ರಾಜೀನಾಮೆ ನೀಡಿದ್ದ ಉತ್ತರ ಪ್ರದೇಶ ಕೆಡರ್‌ನ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ರಾಜಕೀಯ ರಂಗಕ್ಕೆ ಧುಮುಕುವುದಾಗಿ ಘೋಷಿಸಿದ್ದಾರೆ. ಆದರೆ, ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ. ನೇರವಾಗಿ ಸಾರ್ವಜನಿಕರ ಜೊತೆಗೂಡಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಅವರ ರಾಜೀನಾಮೆ ಮತ್ತು ನಿರ್ಧಾರಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ದಿವ್ಯಾ ಮಿತ್ತಲ್ ಅವರು ಸುಮಾರು 13 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು, ಕೆಲವೇ ವಾರಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮಿರ್ಜಾಪುರ ಮತ್ತು ದೇವರಿಯಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ (ಡಿಎಂ) ಸೇವೆ ಸಲ್ಲಿಸಿದ್ದ ಅವರು, ಮಿರ್ಜಾಪುರದ ತೀರಾ ಗ್ರಾಮಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಯೋಜನೆ ತಲುಪಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು.
ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದಾಗಿನಿಂದಲೂ ಅವರ ಮುಂದಿನ ನಡೆ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದವು. ಇದೀಗ, ತಮ್ಮ ನಿರ್ಧಾರದ ಕುರಿತು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ದಿವ್ಯಾ ಮಿತ್ತಲ್, “ಉತ್ತರ ಪ್ರದೇಶವೇ ತಮ್ಮ ಕರ್ಮಭೂಮಿಯಾಗಿದ್ದು, ಇಲ್ಲಿಂದಲೇ ತಮ್ಮ ನೂತನ ರಾಜಕೀಯ ಪ್ರಯಾಣ ಆರಂಭವಾಗಲಿದೆ” ಎಂದು ತಿಳಿಸಿದ್ದಾರೆ.
“ನಾನು ಯಾವುದೇ ಪಕ್ಷದ ಪರವಾಗಿರದೆ, ಸಾಮಾನ್ಯ ನಾಗರಿಕರ ಪರ ಧ್ವನಿಯಾಗಲು ರಾಜಕೀಯ ಪ್ರವೇಶಿಸುತ್ತಿದ್ದೇನೆ. ಸರ್ಕಾರಿ ಕಚೇರಿಗಳಲ್ಲಿ ಧ್ವನಿ ತಲುಪದ ಮತ್ತು ಧ್ವನಿ ತಲುಪಿದರೂ ಆಲಿಸಲ್ಪಡದ ಶೋಷಿತ ಮತ್ತು ನಿರ್ಲಕ್ಷಿತ ಜನರ ಪರವಾಗಿ ನಿಲ್ಲುವುದು ನನ್ನ ಮುಖ್ಯ ಉದ್ದೇಶ” ಎಂದಿದ್ದಾರೆ.
“ಸ್ವಾತಂತ್ರ್ಯ ದೊರೆತು 80 ವರ್ಷಗಳಾಗುತ್ತಿದ್ದರೂ ಇಂದಿಗೂ ಆಡಳಿತ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ಕೊರತೆ ಎದ್ದುಕಾಣುತ್ತಿದ್ದು, ಆ ವ್ಯವಸ್ಥೆಯನ್ನು ಪ್ರಶ್ನಿಸುವ ಕೆಲಸವನ್ನು ನಾನು ಮಾಡುತ್ತೇನೆ” ಎಂದು ಪ್ರತಿಪಾದಿಸಿದ್ದಾರೆ.
कुछ दिन पहले IAS से त्यागपत्र दिया था और आपके मन में कई सवाल छोड़ दिए थे। अपनी बात इस वीडियो में कह दी है। अगर आपको लगे कि ये आपकी भी बात है, तो 9198956957 पर whatsapp मैसेज करिए। pic.twitter.com/mtS6gzBzRw
— Divya Mittal (@divyamittal_IAS) September 29, 2026
ಆಡಳಿತ ಯಂತ್ರದ ವಿಳಂಬ ಧೋರಣೆಗೆ ಉದಾಹರಣೆಯಾಗಿ ಲಹುರಿಯಾ ದಹಾ ಗ್ರಾಮದ ಪರಿಶೀಲನಾ ಸಂದರ್ಭವನ್ನು ನೆನಪಿಸಿಕೊಂಡ ಅವರು, “ಲಹುರಿಯಾದಲ್ಲಿ ಮಹಿಳೆಯೊಬ್ಬರು ಐದನೇ ತರಗತಿಯ ನಂತರದ ಶಾಲೆಗಾಗಿ ಮನವಿ ಮಾಡಿದ್ದರು. ನಾವು ನಿಯಮಾವಳಿಗಳನ್ನು ಪರಿಶೀಲಿಸಿ ಶಾಲೆಗೆ ಮಂಜೂರಾತಿ ನೀಡಿದ್ದೆವು. ಆದರೂ, ಮೂರು ವರ್ಷಗಳು ಕಳೆದರೂ ಶಾಲೆಯ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ನಿರ್ಧಾರ ಕೈಗೊಳ್ಳುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಒಂದೇ ಒಂದು ಕಡತವು ಬೃಹತ್ ಬೆಟ್ಟದಂತೆ ನಿಂತುಬಿಡುತ್ತದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಗ್ರಾಮೀಣ ಭಾಗಗಳಲ್ಲಿ ರಸ್ತೆ, ಸೇತುವೆಗಳ ಕೊರತೆ, ಮಳೆಗಾಲದಲ್ಲಿ ಮಕ್ಕಳು ಎದುರಿಸುವ ಸಂಕಷ್ಟ, ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸೋರಿಕೆ, ಧೀರ್ಘಕಾಲ ಎಳೆಯುವ ಉದ್ಯೋಗ ಭರ್ತಿ ಪ್ರಕ್ರಿಯೆಗಳು ಹಾಗೂ ಕೃತಕ ಬುದ್ಧಿಮತ್ತೆಯ (AI) ಸವಾಲುಗಳ ನಡುವೆ ಯುವಜನತೆಯ ಭವಿಷ್ಯವು ಆತಂಕದಲ್ಲಿದೆ. ಇಂದಿನ ರಾಜಕೀಯದಲ್ಲಿ ಅಧಿಕಾರ ಮತ್ತು ಗದ್ದಲವಿದೆಯೇ ಹೊರತು ದೀರ್ಘಕಾಲೀನ ಚಿಂತನೆಗಳಿಲ್ಲ. ಈ ಆಡಳಿತಾತ್ಮಕ ಮತ್ತು ರಾಜಕೀಯ ಚಿಂತನಾ ಶೂನ್ಯತೆಯನ್ನು ಸರಿಪಡಿಸಲು ಜಂಟಿ ಸಾರ್ವಜನಿಕ ಭಾಗವಹಿಸುವಿಕೆ ಅಗತ್ಯ” ಎಂದಿದ್ದಾರೆ.
ಶಿಕ್ಷಕರು, ರೈತರು, ವಿದ್ಯಾರ್ಥಿಗಳು, ವೈದ್ಯರು, ಕಾರ್ಮಿಕರು ಮತ್ತು ವಕೀಲರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರು ಪ್ರಜಾಪ್ರಭುತ್ವದ ನಿಜವಾದ ಬದಲಾವಣೆಗೆ ತಮ್ಮೊಂದಿಗೆ ಕೈಜೋಡಿಸಬೇಕೆಂದು ದಿವ್ಯಾ ಮಿತ್ತಲ್ ವಿನಂತಿಸಿದ್ದಾರೆ.



