ದೆಹಲಿಯ ಜಂತರ್ ಮಂತರ್‌ನಲ್ಲಿ 36 ದಿನಗಳ ಕಾಲ ನಡೆದ ಐತಿಹಾಸಿಕ ವಿದ್ಯಾರ್ಥಿ ಹೋರಾಟದ ಬಳಿಕ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮುಂದಾಗಿದೆ. ಇದೇ ಆಗಸ್ಟ್ 5ರಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವಾಲುಜ್‌ನಲ್ಲಿರುವ ಅಭಿಜಿತ್ ದೀಪ್ಕೆ ಅವರ ನಿವಾಸದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ವರದಿಯಾಗಿದೆ.
ಸುಮಾರು 15 ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಜಂತರ್ ಮಂತರ್‌ನಲ್ಲಿ ಮತ್ತೆ ಪ್ರತಿಭಟನೆ ಆರಂಭಿಸುವ ಕುರಿತು ಹಾಗೂ ಪಕ್ಷದ ಮುಂದಿನ ಹೋರಾಟದ ದಿಕ್ಕಿನ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಭೆಯ ಬಳಿಕ ಮಾಧ್ಯಮಗೋಷ್ಠಿಯನ್ನೂ ಉದ್ದೇಶಿಸಲಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ನಡೆದ ಹೋರಾಟವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಅಂತ್ಯಗೊಂಡಿತ್ತು. ಆದರೆ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು, ಪೊಲೀಸ್ ಕ್ರಮ ಹಾಗೂ ಹೋರಾಟದ ವೇಳೆ ನಡೆದ ಘಟನೆಗಳ ಕುರಿತು ಇನ್ನೂ ಹಲವು ಪ್ರಶ್ನೆಗಳು ಉಳಿದಿರುವ ಹಿನ್ನೆಲೆಯಲ್ಲಿ ಮುಂದಿನ ಹಂತದ ಹೋರಾಟದ ಬಗ್ಗೆ ಸಿಜೆಪಿ ನಾಯಕತ್ವ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಈ ಬಾರಿಯ ಹೋರಾಟವು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಡಿಕೆಶಿ ಕ್ಯಾಬಿನೆಟ್ | 10 ಮಂದಿ ಹೊಸಬರು; ಉಳಿದವರಲ್ಲಿ ಯಾರು ಎಷ್ಟು ಬಾರಿ ಮಂತ್ರಿ ಆಗಿದ್ದಾರೆ; ಪರಿಪೂರ್ಣ ಡೀಟೇಲ್ಸ್!
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಂತರ್ ಮಂತರ್‌ನಲ್ಲಿ ಮತ್ತೆ ವಿದ್ಯಾರ್ಥಿಗಳ ಪ್ರತಿಭಟನೆ ಆರಂಭವಾಗಿದೆ ಎಂಬ ಗುಮಾನಿ ಹರಿದಾಡುತ್ತಿರುವ ನಡುವೆಯೇ, ಆಗಸ್ಟ್ 5ರ ಸಭೆ ರಾಜಕೀಯ ಹಾಗೂ ವಿದ್ಯಾರ್ಥಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಭೆಯ ಕಾರ್ಯಸೂಚಿಯನ್ನು ಅಭಿಜಿತ್ ದೀಪ್ಕೆ ಬಹಿರಂಗಪಡಿಸಿಲ್ಲ. ಆದರೆ ಪಕ್ಷದ ಮುಂದಿನ ಹೋರಾಟದ ಕಾರ್ಯತಂತ್ರ, ಸಂಘಟನೆ ವಿಸ್ತರಣೆ ಹಾಗೂ ದೇಶಾದ್ಯಂತ ಯುವಜನರೊಂದಿಗೆ ಸಂಪರ್ಕ ಬಲಪಡಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂಬುದಕ್ಕೆ ಅಧಿಕೃತ ದೃಢೀಕರಣ ಈವರೆಗೆ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.




