ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಹೊಂದಿದ್ದವರಿಗೆ ನಿರಾಸೆಯಾದರೂ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಉಪಸಭಾಧ್ಯಕ್ಷ ಹುದ್ದೆ ನೀಡುವ ಮೂಲಕ ಸರ್ಕಾರ ಮಹತ್ವದ ಜವಾಬ್ದಾರಿಯನ್ನು ವಹಿಸಿದೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಗೆ ಪ್ರತಿನಿಧಿತ್ವವಾಗಿ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ಸಚಿವ ಸ್ಥಾನ ಜಿಲ್ಲೆಗೆ ಕೈತಪ್ಪಿದ್ದು, ಅದರ ಬದಲಾಗಿ ಎ.ಎಸ್. ಪೊನ್ನಣ್ಣ ಅವರನ್ನು ಉಪಸಭಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಎ.ಎಸ್. ಪೊನ್ನಣ್ಣ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.
ಆದರೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೊಂಚ ನಿರಾಸೆ ವ್ಯಕ್ತವಾಗಿದ್ದರೂ, ವಿಧಾನಸಭೆಯ ಉಪಸಭಾಧ್ಯಕ್ಷ ಎಂಬ ಮಹತ್ವದ ಸಂವಿಧಾನಾತ್ಮಕ ಹುದ್ದೆ ದೊರೆತಿರುವುದು ಜಿಲ್ಲೆಯ ರಾಜಕೀಯ ಪ್ರತಿನಿಧಿತ್ವಕ್ಕೆ ಹೊಸ ಬಲ ನೀಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ವಿಶೇಷ ಸುದ್ದಿ ಓದಿದ್ದೀರಾ?SIR: ಕೊಡಗಿನ ಆದಿವಾಸಿಗಳ ಅಸ್ತಿತ್ವದ ಪ್ರಶ್ನೆಯ ಮುಂದೆ ಆಡಳಿತದ ಅಂಕಿ-ಅಂಶಗಳು ಸಾಕೇ?
ಉಪಸಭಾಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ ಅವರ ನೇಮಕವು ವಿಧಾನಸಭೆಯ ಕಲಾಪ ನಿರ್ವಹಣೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸುವ ಅವಕಾಶವಾಗಿದ್ದು, ರಾಜ್ಯ ರಾಜಕೀಯದಲ್ಲಿ ಅವರ ಪಾತ್ರ ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ವ್ಯಕ್ತವಾಗಿದೆ.




