ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, ‘ಸುಂಟರಗಾಳಿ’ ಸಿನಿಮಾದ ‘ಸಾರಾಯಿ ಶಾರದೆ’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಲಲಿತಮ್ಮ (65) ಅವರು ಅಕ್ಟೋಬರ್ 4ರಂದು ನಿಧನರಾಗಿದ್ದಾರೆ.
ಕಳೆದ ಎರಡೂವರೆ ತಿಂಗಳಿಂದ ಪಾರ್ಶ್ವವಾಯು (ಸ್ಟ್ರೋಕ್) ಮತ್ತು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೂಕ್ತ ಆಸರೆ ಇಲ್ಲದೆ ಕಷ್ಟದ ಪರಿಸ್ಥಿತಿಯಲ್ಲಿದ್ದರು. ಈ ವೇಳೆ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ವೃದ್ಧಾಶ್ರಮವು ಆಸರೆ ನೀಡಿತ್ತು. ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೃದ್ಧಾಶ್ರಮದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ
ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಲಲಿತಮ್ಮ ಅವರು 180ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು. ನಟ ದರ್ಶನ್ ನಟನೆಯ ‘ಸುಂಟರಗಾಳಿ’ ಸಿನಿಮಾದಲ್ಲಿ ಖಳನಾಯಕಿ ‘ಸಾರಾಯಿ ಶಾರದೆ’ ಪಾತ್ರದ ಮೂಲಕ ಮನೆಮಾತಾಗಿದ್ದರು.
ಈ ಸಿನಿಮಾ ಮಾತ್ರವಲ್ಲದೆ ‘ಜಂಗ್ಲಿ’, ‘ಲೈಫು ಇಷ್ಟೇನೆ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಹಾಗೂ ‘ರಂಗೋಲಿ’ ಮುಂತಾದ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅವರ ಅಗಲಿಕೆಗೆ ಕನ್ನಡ ಚಿತ್ರರಂಗ, ರಂಗಭೂಮಿ ಕಲಾವಿದರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.




