ಹೊಸ ಸರ್ಕಾರ | ಸಮರ್ಥ ಸಚಿವರನ್ನು ನೇಮಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬಲ್ಲುದೇ?

Date:

ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದ ಜಯಮಾಲರವರು ವಿಧಾನಸೌಧದ ತಮ್ಮ ಕಚೇರಿಗೆ ಬರುವುದೇ ಅಪರೂಪವಾಗಿತ್ತು. ತದನಂತರ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆಯವರ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ನಂತರ ಬಂದ ಹಾಲಪ್ಪ ಆಚಾರ್‌ ಮಹತ್ವದ ವಿಚಾರಗಳ ಬಗ್ಗೆ ಖಡಕ್ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ...

ರಾಜ್ಯದಲ್ಲಿ ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಮೊದಲ ಕಂತಿನ ಸಚಿವ ಸಂಪುಟದಲ್ಲಿ, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಒಬ್ಬರೂ ಮಹಿಳೆಯರಿಲ್ಲದಿರುವುದು ಸಹಜವಾಗೇ ಮಹಿಳೆಯರಲ್ಲಿ ನಿರಾಸೆ ಮೂಡಿಸಿದೆ. ಸಾಮಾಜಿಕ ನ್ಯಾಯ ಮತ್ತು ಲಿಂಗಸಮಾನತೆ ಕುರಿತು ಬದ್ಧತೆ ಇರುವ ವಿರಳ ರಾಜಕಾರಣಿಗಳಲ್ಲಿ ಸಿದ್ಧರಾಮಯ್ಯನವರೂ ಒಬ್ಬರಾಗಿರುವುದರಿಂದ ಮುಂದಿನ ಹಂತದ ಸಚಿವ ಸಂಪುಟದಲ್ಲಿ ಖಂಡಿತವಾಗಿಯೂ ಮಹಿಳೆಯರಿಗೆ ನ್ಯಾಯಬದ್ಧ ಪ್ರಾತಿನಿಧ್ಯ ದೊರೆಯಲಿದೆ ಎನ್ನುವ ಭರವಸೆ ಇದೆ. ಅದರಲ್ಲೂ, ರಾಜ್ಯದ ಮಹಿಳೆಯರು ಮತ್ತು ಮಕ್ಕಳನ್ನು ಪ್ರತಿನಿಧಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಹಿಳಾ ಸಚಿವರನ್ನೇ ನೇಮಿಸಲಿ ಎನ್ನುವ ಆಶಯವಿದೆ.

2015-16ರ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 1000 ಗಂಡು ಮಕ್ಕಳಿಗೆ 979 ಹೆಣ್ಣು ಮಕ್ಕಳಿದ್ದು ಲಿಂಗಾನುಪಾತ ಇನ್ನೂ ಸುಧಾರಿಸಬೇಕಿದೆ. ರಾಜ್ಯದ ಪ್ರತಿ 3 ಮಕ್ಕಳಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಶಿಶು ಮರಣ ಪ್ರತಿ ಸಾವಿರ ಮಕ್ಕಳಲ್ಲಿ 43ರಷ್ಟಿದೆ. ಪ್ರತಿ 100 ಮಕ್ಕಳಲ್ಲಿ 3 ಮಕ್ಕಳು ಹೆಚ್ಐವಿ ಪೀಡಿತರಾಗಿದ್ದಾರೆ. ಕಡಿಮೆ ತೂಕ ಹೊಂದಿರುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆ ಶೇ.35.2. 18 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2009ರಲ್ಲಿ 9597 ಆಗಿತ್ತು. 23% ಹೆಣ್ಣು ಮಕ್ಕಳ ಬಾಲ್ಯ ವಿವಾಹಗಳಾಗುತ್ತಿವೆ.

2011-12ರ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 1ಲಕ್ಷ 46 ಸಾವಿರ ವಿಕಲಚೇತನರಿದ್ದು, ಅವರಲ್ಲಿ ಮಕ್ಕಳ ಪ್ರಮಾಣವನ್ನು ನಿಖರವಾಗಿ ಗುರುತಿಸಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.11ರಷ್ಟು ಬಾಲ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ಕಾಣೆಯಾಗುತ್ತಿರುವ ಮಕ್ಕಳು 5000ಕ್ಕೂ ಹೆಚ್ಚಿದ್ದರೆ, 1000 ಮಕ್ಕಳಲ್ಲಿ 120ಕ್ಕಿಂತಲೂ ಹೆಚ್ಚು ಮಕ್ಕಳು ಮಾರಾಟವಾಗುತಿದ್ದು, ಓಡಿ ಹೋಗುತ್ತಿರುವ ಮಕ್ಕಳ ಸಂಖ್ಯೆ 8,500ಕ್ಕೂ ಹೆಚ್ಚು. ಶಿಕ್ಷಣ ಹಕ್ಕಿನ ಕಾಯಿದೆ ಪ್ರಕಾರ ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದರೂ ಮತ್ತು “ಬೇಟಿ ಬಚಾವೋ ಬೇಟಿ ಪಢಾವೋ” ಎನ್ನುವ ಯೋಜನೆಯಿದ್ದರೂ ಹೆಣ್ಣು ಮಕ್ಕಳ ಸಾಕ್ಷಾರತಾ ಪ್ರಮಾಣ ಶೇ.68ರಷ್ಟಿದ್ದು, ಶಾಲಾ ಶಿಕ್ಷಣ ಪೂರ್ಣಗೊಳಿಸದ ಹೆಣ್ಣು ಮಕ್ಕಳು ಶೇ.73. ಮಕ್ಕಳ ಭಿಕ್ಷಾಟನೆ, ಮಕ್ಕಳ ಕಳ್ಳ ಸಾಗಣೆಯಂತಹ ವಿಷ ವರ್ತುಲದಲ್ಲಿ ನಲುಗುತ್ತಿರುವ ಮಕ್ಕಳು ಅಗಾಧ ಪ್ರಮಾಣದಲ್ಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯದ ಮಕ್ಕಳು ಎದುರುಸಿತ್ತಿರುವ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾದ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯದ್ದು. ಆದ್ಧರಿಂದ ಈ ಇಲಾಖೆಯನ್ನು “ಮಾತೃ ಇಲಾಖೆ” ಎಂದು ತಾಯಿ ಸ್ಥಾನದಲ್ಲಿ ನೋಡಲಾಗುತ್ತದೆ. ಈ ನಿಟ್ಟಿನಲ್ಲಿ ಸದರಿ ಇಲಾಖೆಯ ಸಚಿವರ ಸಾಮಾಜಿಕ ಬದ್ಧತೆ ಮತ್ತು ಕಾರ್ಯವೈಖರಿ ಅತ್ಯಂತ ಮಹತ್ವದ್ದು. ಈ ಇಲಾಖೆಯ ಇತ್ತೀಚೆಗಿನ ಸಚಿವರ ಬದ್ಧತೆ ಮತ್ತು ಕಾರ್ಯವೈಖರಿ ಗಮನಿಸಿದಾಗ ಉಮಾಶ್ರೀಯವರು ಉತ್ತಮ ಕಾರ್ಯ ನಿರ್ವಹಿಸಿರುವುದಾಗಿ ಅಭಿಪ್ರಾಯವಿದೆ. ಸ್ವತಹ ತಮ್ಮನ್ನು ತಳಸಮುದಾಯದ ಒಬ್ಬ ಶೋಷಿತ ಮಹಿಳೆಯಾಗಿ ಗುರುತಿಸಿಕೊಂಡು ದಮನಿತ ಮಹಿಳೆಯರು ಜೀವನವೆಂಬ ಹೋರಾಟದಲ್ಲಿ ಎದೆಗುಂದದೆ ಮುಂದೆ ಬರಬೇಕು ಎನ್ನುವ ಅವರ ನಿಲುವು ಇದಕ್ಕೆ ಕಾರಣವಿರಬಹುದು.

ಇದನ್ನು ಓದಿ ಈ ದಿನ ಸಂಪಾದಕೀಯ | ಬೆಂಗಳೂರು: ಅಂಡರ್‌ಪಾಸ್, ಫ್ಲೈಓವರ್, ರಸ್ತೆ ಗುಂಡಿ; ಹೆಜ್ಜೆ ಹೆಜ್ಜೆಗೂ ಕಾಡುವ ಸಾವು!

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದ ಜಯಮಾಲರವರು ವಿಧಾನಸೌಧದ ತಮ್ಮ ಕಚೇರಿಗೆ ಬರುವುದೇ ಅಪರೂಪವಾಗಿತ್ತು. ತದನಂತರ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆಯವರ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಅಂಗನವಾಡಿ ಮಕ್ಕಳಿಗೆ ಪೂರೈಸುವ ಮೊಟ್ಟೆ ವಿತರಣೆಯ ಟೆಂಡರಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಹೆಸರಿನಲ್ಲಿ ಅವರ ಏಜೆಂಟ್ 25ಲಕ್ಷ ಕಮೀಷನ್ ತೆಗೆದುಕೊಳ್ಳುವುದನ್ನು ಕನ್ನಡ ಸುದ್ದಿವಾಹಿನಿಯೊಂದು ಸ್ಟಿಂಗ್ ಆಪರೇಷನ್ ಮುಖಾಂತರ ರಾಜ್ಯದ ಜನತೆ ಎದುರು ಬಟಾಬಯಲು ಮಾಡಿತ್ತು. ಆದರೂ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವ ಬದಲಿಗೆ ಮುಜರಾಯಿ ಇಲಾಖೆ ನೀಡಿ ಸಮಾಧಾನಿಸಲಾಗಿತ್ತು! ಖಾತೆ ಬದಲಾದರೂ ಭ್ರಷ್ಟಾಚಾರದಲ್ಲಿ ತಮಗೆ ಸಾಥ್ ಕೊಟ್ಟ ಕಡುಭ್ರಷ್ಟ ಅಧಿಕಾರಿಗಳನ್ನು ಬೆನ್ನ ಹಿಂದೆ ನಿಂತು ಕಾಪಾಡಿದ ಹಿರಿಮೆ ಇವರದು.

ಇವರ ನಂತರ ಬಂದ ಹಾಲಪ್ಪ ಆಚಾರ್ ಅವರಿಗೆ ಗಣಿ ಮತ್ತು ಭೂ ವಿಜ್ನಾನ ಖಾತೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ವಹಿಸಿಕೊಡಲಾಗಿತ್ತು. ಸ್ವತಹ ಗಣಿ ಉದ್ಯಮಿಯಾಗಿದ್ದ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕುರಿತು ಅಷ್ಟೊಂದು ಒಲವಿರಲಿಲ್ಲ. ಮಹತ್ವದ ವಿಚಾರಗಳ ಬಗ್ಗೆ ಅವರು ಖಡಕ್ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಸ್ವಜಾತಿ ಅಧಿಕಾರಿಗಳ ಸುಪರ್ದಿಗೆ ಎಲ್ಲವನ್ನು ವಹಿಸಿಕೊಟ್ಟ ಪರಿಣಾಮ ವರ್ಗಾವಣೆ ಮುಂತಾದವುಗಳು ಎಗ್ಗಿಲ್ಲದೆ ನಡೆದವು. ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕನೊಬ್ಬನ ಲೈಂಗಿಕ ಕಿರುಕುಳದ ವಿರುದ್ಧ ನೊಂದ ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಮೇಲೆ ಯಾವುದೇ ಕ್ರಮ ಜರುಗಿಸದ ಅವರು ಅತ್ಯಂತ ದುರ್ಬಲ ಸಚಿವರಾಗಿದ್ದರು. ರಾಜಕೀಯ ಒತ್ತಡಗಳಿಗೆ ಮಣಿದು ಭ್ರಷ್ಟರನ್ನು ರಕ್ಷಿಸಿದರು.

ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆ ಮಾಡಲು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಸಮಿತಿ ನೀಡಿದ್ದ ಶಿಫಾರಸ್ಸುಗಳನ್ನು ಗಾಳಿಗೆ ತೂರಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಸದರಿ ಸಮಿತಿಯ ಮೇಲ್ವಿಚಾರಣಾ ಸಮಿತಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಸಮಿತಿ ನೀಡಿದ್ದ ಶಿಫಾರಸ್ಸಿಗನುಗುಣವಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಒದಗಿಸುತ್ತಿರುವ ಸ್ಥಳೀಯ ಆಹಾರ ವ್ಯವಸ್ಥೆಗೆ ಬದಲಾಗಿ ಸರ್ಕಾರದ ಕಪ್ಪು ಪಟ್ಟಿಗೆ ಸೇರಿದ್ದ ಕಂಪನಿಗೆ ಪೌಷ್ಟಿಕ ಆಹಾರ ಪೂರೈಸುವ ಟೆಂಡರ್ ಕೊಡಿಸುವ ಷಡ್ಯಂತ್ರ ಕೂಡ ನಡೆಯಿತು. ದಿನಾಂಕ 31-05-2012ರಂದು ಆದೇಶವೊಂದನ್ನು ಹೊರಡಿಸಿ, ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ತಮಿಳುನಾಡು ಮೂಲದ ಇಂಡಸ್ಟ್ರಿ ಜೊತೆಗೆ ಸರ್ಕಾರ ಮಾಡಿಕೊಂಡಿದ್ದ ಕರಾರನ್ನು ರದ್ದು ಪಡಿಸಿದ ನಂತರವೂ, ಹಿಂಬಾಗಿಲ ಮೂಲಕ ಆ ಕಂಪನಿಗೆ ಟೆಂಡರ್ ಕೊಡಿಸುವ ಸಂಚನ್ನು ಕೆಲವು ಭ್ರಷ್ಟ ಅಧಿಕಾರಿಗಳು ನಡೆಸಿದ್ದರು. ಈ ಕುರಿತು ಡಿಸೆಂಬರ್ 20,2022ರಂದು ಕನ್ನಡದ ಪ್ರಮುಖ ದಿನಪ್ರತ್ರಿಕೆಯೊಂದು ಮುಖಪುಟದ ವರದಿ ಮಾಡಿತ್ತು. ಆಶ್ಚರ್ಯಕರ ಬೆಳವಣಿಗೆಯೆಂದರೆ, ಅದೇ ದಿನಪತ್ರಿಕೆಯಲ್ಲಿ ಡಿಸೆಂಬರ್ 26,2022ರಂದು “ವಚನದಂತೆ ಬದ್ಧತೆಯ ಕಡೆಗೆ-ಅಪೌಷ್ಟಿಕತೆಯ ಅಂತ್ಯ” ಎನ್ನುವ ಜಾಹೀರಾತುದಾರರ ವಿವರವಿಲ್ಲದ ಜಾಹೀರಾತೊಂದು ಪ್ರಕಟವಾದದ್ದು! ದಿನಾಂಕ 31-05-2012ರಂದು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತದ್ವಿರುದ್ಧವಾದ ಆ ಜಾಹೀರಾತಿನ ವಾರಸುದಾರರ ಕುರಿತು ಮಾಹಿತಿ ಪಡೆಯುವ ಪ್ರಯತ್ನಕ್ಕೆ ಸೂಕ್ತ ಉತ್ತರ ಸಿಗಲಿಲ್ಲ. ಒಂದಂತೂ ಸ್ಪಷ್ಟ. ಕಳಪೆ ಆಹಾರ ಪದಾರ್ಥಗಳನ್ನು ಅಂಗನವಾಡಿಗಳಿಗೆ ಪೂರೈಸಿ ದುಂಡಗಾಗಿರುವ ಭ್ರಷ್ಟ ಅಧಿಕಾರಿಗಳು ಈಗಲೂ ಮಕ್ಕಳ ಹೊಟ್ಟೆಯ ಮೇಲೆ ಹೊಡೆದು ಹಣ ದೋಚಲು ಹಪಹಪಿಸುತ್ತಿದ್ದಾರೆ.

ಇದನ್ನು ಓದಿ ಯು ಟಿ ಖಾದರ್ ಹೊಸ ಸ್ಪೀಕರ್ : ವಿಧಾನಸೌಧದ ಬೀಗಧಾರಿ; ದೀಪಧಾರಿ

ಬಾಲ ಕಾರ್ಮಿಕತೆ, ಬಾಲ್ಯವಿವಾಹ, ಮಕ್ಕಳ ಭಿಕ್ಷಾಟನೆ, ಮಕ್ಕಳ ಸಾಗಾಣಿಕೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮುಂತಾದವುಗಳಿಂದ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕಿದ್ದ ಸರ್ಕಾರದ ವ್ಯವಸ್ಥೆಗಳನ್ನು ಬಲಹೀನಗೊಳಿಸಿದ ಅಪಕೀರ್ತಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಶಿಕ್ಷಣ ಹಕ್ಕಿನ ಕಾಯಿದೆ (ಆರ್.ಟಿ.ಇ ಆ್ಯಕ್ಟ್)-2009, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ (ಪೋಕ್ಸೋ ಆ್ಯಕ್ಟ್)-2012, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ -2015 ಮುಂತಾದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾಯಿದೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರಾಜ್ಯಮಟ್ಟದ ಸಂವಿಧಾನ ಬದ್ಧ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸೂಕ್ತ ಅನುದಾನ ಮತ್ತು ಸಿಬ್ಬಂದಿ ಒದಗಿಸಿದೆ ನಿತ್ರಾಣ ಮಾಡಲಾಯಿತು. ಆಯೋಗದ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಸುಮಾರು ಹತ್ತು ತಿಂಗಳು ಉದಾಸೀನ ಮಾಡಲಾಯಿತು. ಈ ಕುರಿತು ಅನೇಕ ಬಾರಿ ಮಾಧ್ಯಮಗಳು ಎಚ್ಚರಿಸಿದರೂ ಕೇರ್ ಮಾಡಲಿಲ್ಲ. ಕೊನೆಗೆ ವಿದ್ಯಾರ್ಥಿಗಳ ಮತ್ತು ಪೋಷಕರ ಸಂಘಟನೆಯವರು ಆಯೋಗದ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಯಿತು! ಪುನಹ ಸದಸ್ಯರ ನೇಮಕಾತಿಯಲ್ಲೂ ವಿಳಂಬ ಧೋರಣೆ ಅನುಸರಿಸಲಾಯಿತು. ಇನ್ನೇನು ಸರ್ಕಾರದ ಅವಧಿ ಮುಗಿಯಲಿದೆ ಎನ್ನುವ ಹಂತದಲ್ಲಿ ಸದಸ್ಯರ ನೇಮಕಾತಿ ನಡೆಯಿತು. 24/7 ಮಕ್ಕಳ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸಬೇಕಾಗಿರುವ ಆಯೋಗದ ಸದಸ್ಯರಿಗೆ ಸೂಕ್ತ ಸ್ಥಾನಮಾನವೂ (ಸ್ಟೇಟಸ್) ಇಲ್ಲದೆ, ಗೌರವ ಧನವೂ ಇಲ್ಲದೆ ಹೆಣಗಾಡಬೇಕಾದ ದುಃಸ್ಥಿತಿಯಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಂತರ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅರೆನ್ಯಾಯಿಕ ಸಂಸ್ಥೆಯಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ-2015ರಡಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ಕಲ್ಯಾಣ ಸಮಿತಿಗಳ ಹಾಗೂ ಬಾಲನ್ಯಾಯ ಸಮಿತಿಗಳ ಅಧ್ಯಕ್ಷರ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ಕಳೆದ ಸುಮಾರು 3 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗಳಲ್ಲಿ ಸೂಕ್ತ ಸದಸ್ಯರ ಸಂಖ್ಯಾ ಬಲವಿಲ್ಲದೆ, ಕೋರಂ ಕೊರತೆಯಿಂದ ಪ್ರಕರಣಗಳ ವಿಚಾರಣೆಗೆ ತಡೆಯಾಗುತ್ತಿದೆ. ಇದರಿಂದ ನೊಂದ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಸಕಾಲಕ್ಕೆ ರಿಲೀಫ್ ಸಿಗದಂತಾಗಿ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಬಾಲನ್ಯಾಯ ಮಂಡಳಿಗಳಿಗೆ ಹಾಗೂ ಬಾಲನ್ಯಾಯ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡುವ ರಾಜ್ಯಮಟ್ಟದ ಆಯ್ಕೆ ಸಮಿತಿಗೆ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರೊಬ್ಬರು ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದ ಸರ್ಕಾರದ ಆಮೆ ನಡೆ ಮತ್ತು ಅಸಡ್ಡೆಯಿಂದ ಖುದ್ದು ಹೋಗಿ, ಈಗಾಗಲೇ ಇಬ್ಬರು ಹೈಕೋರ್ಟಿನ ನ್ಯಾಯಾಧೀಶರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ಘಟನೆ ಕೂಡ ನಡೆದಿದೆ.

ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯಿದೆ-2015ರ ಸೆಕ್ಷನ್ 41(1)ರಡಿ ನೋಂದಣಿಯಾದ ಮಕ್ಕಳ ಪಾಲನಾ ಸಂಸ್ಥೆಗಳು ಮಾತ್ರ ಕಾನೂನು ರೀತಿಯಲ್ಲಿ, ಪಾಲನೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳಿಗೆ ಆಶ್ರಯ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಾಧ್ಯ. ಅದಾಗಲೇ ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಗಳು ಸದರಿ ಕಾಯಿದೆಯಡಿ ನೋಂದಣಿ ಪ್ರಮಾಣ ಪತ್ರ ಕೋರಿ ರಾಜ್ಯಾದ್ಯಂತ ಅರ್ಜಿ ಸಲ್ಲಿಸಿವೆ. ವರ್ಷಾನುಗಟ್ಟಲೆ ಕಾಯ್ದರೂ ಅವುಗಳಿಗೆ ಪ್ರಮಾಣ ಪತ್ರ ದೊರೆಯದಿರುವುದರಿಂದ ಸದರಿ ಸಂಸ್ಥೆಗಳು ಗೊಂದಲ ಹಾಗೂ ಆತಂಕದಲ್ಲಿ ಮಕ್ಕಳನ್ನು ಸಲಹುವಂತಾಗಿದೆ. ನೋಂದಣಿ ಪ್ರಮಾಣಪತ್ರ ಇಲ್ಲದ ಕಾರಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಮ್ಮನ್ನು ಶೋಷಣೆ ಮಾಡುತ್ತಿದ್ದಾರೆಂದು ಸಂಸೆಗಳ ಮುಖ್ಯಸ್ಥರು ಗೌಪ್ಯವಾಗಿ ಉಸುರುತ್ತಿದ್ದಾರೆ. ಇಂತಹ ನೂರಾರು ಸಂಸ್ಥೆಗಳು ಬೆಂಗಳೂರು ನಗರವೊಂದರಲ್ಲೇ ಇವೆ. ಸಮಗ್ರ ಮಕ್ಕಳ ರಕಣಾ ಯೋಜನೆಯ ನಿರ್ದೇಶನಾಲಯ ಈ ಕುರಿತು ಚುರುಕಾಗಿ, ಮಕ್ಕಳ ಹಿತದೃಷ್ಟಿಯಿಂದ ಚಿಂತಿಸಿ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕಿದೆ.

ಇದನ್ನು ಓದಿ ಸಚಿವ ಸಂಪುಟ ವಿಸ್ತರಣೆ-ಖಾತೆ ಹಂಚಿಕೆಗೆ ದೆಹಲಿಗೆ ಹೊರಟ ಸಿಎಂ, ಡಿಸಿಎಂ

ಕುಟುಂಬದಲ್ಲಿ ಮಾತ್ರವಲ್ಲದೇ ಇಡೀ ಸಮಾಜದಲ್ಲಿ ತಿರಸ್ಕಾರಕ್ಕೆ, ಅಪಹಾಸ್ಯಕ್ಕೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವವರೆಂದರೆ ವಿಕಲಚೇತನರು. ಅದರಲ್ಲೂ ವಿಕಲಚೇತನ ಮಕ್ಕಳು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ವಿಕಲಚೇತನರ ಹಾಗೂ ವಿಕಲಚೇತನ ಮಕ್ಕಳ ರಕ್ಷಣೆಗಾಗಿ, ವಿಕಲಚೇತನರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) -ಕಾಯಿದೆ, 1995ರ ಚಾಪ್ಟರ್ ಘಿII ಸೆಕ್ಷನ್ 60(1)ರಡಿ ಅಸ್ತಿತ್ವಕ್ಕೆ ಬಂದಿರುವ “ವಿಕಲಚೇತನರ ಅಧಿನಿಯಮ”ಕ್ಕೆ ಕಳೆದ ಎರಡು ವರ್ಷಗಳಿಂದ ಆಯುಕ್ತರನ್ನೇ ಬಿಜೆಪಿ ಸರ್ಕಾರ ನೇಮಿಸಲಿಲ್ಲ. ಇದರಿಂದ ರಾಜ್ಯದ ವಿಕಲಚೇತನರು ಮತ್ತು ವಿಕಲಚೇತನ ಮಕ್ಕಳು ಪಡುತ್ತಿರುವ ಪರಿಪಾಠಲು ಅಷ್ಟಿಷ್ಟಲ್ಲ.

ಹೀಗೆ, ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ, ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳ ದುರ್ಬಲೀಕರಣದ ಜೊತೆಗೆ ಭ್ರಷ್ಟಾಚಾರ ಮಿತಿ ಮೀರಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪೂರ್ಣವಾಗಿ ಹಳಿತಪ್ಪಿದೆ. ಮಕ್ಕಳ ಗೌರವ ಮತ್ತು ಘನತೆಗೆ ಧಕ್ಕೆಯಾಗಿದೆ. ನೂತನ ಸರ್ಕಾರ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಸಮರ್ಥ ಮಹಿಳಾ ಸಚಿವರನ್ನು ನೇಮಿಸುವುದರ ಮೂಲಕ ಇಡೀ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳನ್ನು ಸಬಲೀಕರಣಗೊಳಿಸಲೆಂದು ಆಶಿಸಬಹುದೇ?

ವೈ ಮರಿಸ್ವಾಮಿ
+ posts
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

 

ಪೋಸ್ಟ್ ಹಂಚಿಕೊಳ್ಳಿ:

ವೈ ಮರಿಸ್ವಾಮಿ
ವೈ ಮರಿಸ್ವಾಮಿ
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
 

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...