ಏಕರೂಪ ನಾಗರಿಕ ಸಂಹಿತೆ | ಧ್ರುವೀಕರಣದ ಆಟಕ್ಕೆ ಎರಡು ಸಾಧ್ಯತೆಗಳು: ರಾಜಾರಾಂ ತಲ್ಲೂರು ಬರಹ

Date:

ಚುನಾವಣೆ ಮುಂದಿರುವಾಗ, ಈ ರೀತಿಯಲ್ಲಿ ಮೂಡಿಸಲಾಗುವ “ಅವ್ಯಕ್ತದ ಭಯ” ತಂದುಕೊಡುವಷ್ಟು ಚುನಾವಣಾ ಲಾಭವನ್ನು ಇನ್ಯಾವುದೂ ತಂದುಕೊಡುವುದಿಲ್ಲ ಎಂಬುದು ಕಳೆದೆರಡು ದಶಕಗಳಲ್ಲಿ ಹಲವು ಬಾರಿ ಸಾಬೀತಾಗಿದೆ. ಸಂವಿಧಾನದ ಆಯಕಟ್ಟಿನ ಸಂಧಿಗಳನ್ನು ಜನರ ನಡುವೆ ದ್ವೇಷ, ಅಶಾಂತಿ ಬಿತ್ತಲು ಬಳಸಿಕೊಳ್ಳುವುದು ಅವ್ಯಕ್ತದ ಭಯ ಮೂಡಿಸುವ ಹಾದಿಯಲ್ಲಿ ಸುಲಭ. 

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆ (UCC) ಮಂಡನೆ ಆಗುವ ಬಗ್ಗೆ ಸದ್ದು ಜೋರಾಗಿಯೇ ಮೊಳಗತೊಡಗಿದೆ. ಸಾರ್ವತ್ರಿಕ ಚುನಾವಣೆಗಳಿಗೆ ಕೇವಲ ಹತ್ತು ತಿಂಗಳು ಬಾಕಿ ಇರುವಾಗ ಈ ಸದ್ದು ಬಂದಿದೆ ಎಂದರೆ ಅದರ ಅರ್ಥ ಬಿಜೆಪಿ 2024ರ ಚುನಾವಣೆಗಳಿಗೆ ತನ್ನ ತಯಾರಿಯನ್ನು ಗಂಭೀರವಾಗಿ ಆರಂಭಿಸಿದೆ ಎಂದು.

ಈ ಹಂತದಲ್ಲಿ ಎರಡು ಸಾಧ್ಯತೆಗಳು ಕಾಣಿಸುತ್ತಿವೆ. ಒಂದು, ಕೇವಲ ಚುನಾವಣೆಯಲ್ಲಿ ಮತಗಳ ಧ್ರುವೀಕರಣದ ರುಚಿಗೆ ತಕ್ಕಷ್ಟೇ ಉಪ್ಪು ಸುರಿಯುವುದು; ಅರ್ಥಾತ್ ಸದನದಲ್ಲಿ ಮಸೂದೆ ಮಂಡಿಸಿ, ಅದನ್ನ ಸದನ ಸಮಿತಿಗೆ ಒಪ್ಪಿಸಿ ಚುನಾವಣೆ ಎದುರಿಸಲು ಹೊರಡುವುದು. ಎರಡನೇ ಸಾಧ್ಯತೆ, ಈ ಮಸೂದೆಯನ್ನು ಅದರ ಸ್ಥೂಲರೂಪದಲ್ಲಿ ಮಂಡಿಸಿ, ಎರಡೂ ಸದನಗಳಲ್ಲಿರುವ ಬಹುಮತದ ಲಾಭ ಪಡೆದು, ತಮ್ಮೆಲ್ಲ ರಾಜಕೀಯ ಆಶ್ವಾಸನೆಗಳನ್ನು ಈಡೇರಿಸಿದ (ರಾಮಜನ್ಮಭೂಮಿ, ಆರ್ಟಿಕಲ್ 370, ಸಮಾನ ನಾಗರಿಕ ಸಂಹಿತೆ) ಹೆಗ್ಗಳಿಕೆಯೊಂದಿಗೆ ಮತ ಕೇಳುವುದು.

ಇನ್ನೂ ಅವರ ತಲೆಯಲ್ಲಿರುವ “ಸಮಾನ ನಾಗರಿಕ ಸಂಹಿತೆ”ಯ ಸ್ವರೂಪ ಏನು ಎಂಬುದು ಬಹಿರಂಗಗೊಂಡಿಲ್ಲ. ಅದು ಹೊರ ಬರದೆ ಈ ಕುರಿತ ಚರ್ಚೆಗಳು ಅಪ್ರಸ್ತುತ ಮತ್ತು ಅಂತಹ ಎಲ್ಲ ಚರ್ಚೆಗಳೂ, ಅನಗತ್ಯ ಗೊಂದಲಗಳ ಮೂಲಕ ಮತ ದ್ರುವೀಕರಣಕ್ಕೇ ಇನ್ನಷ್ಟು ಹಾದಿ ತೆರೆದುಕೊಡಲಿವೆ. ಒಂದು ಹಂತಕ್ಕೆ, ಅವರ ಈ ರಾಜಕೀಯದ ಉದ್ದೇಶ ಕೂಡ ಇದೇ… ಈ ಬಾರಿ ಬಿಜೆಪಿ ಎರಡು ಅವಧಿಗೆ ಅಧಿಕಾರದಲ್ಲಿದ್ದು ಮರುಆಯ್ಕೆ ಬಯಸುತ್ತಿರುವ ಆಡಳಿತ ಪಕ್ಷವಾಗಿರುವುದರಿಂದ, “ಅಧಿಕಾರ ವಿರೋಧಿ ಅಲೆ”ಯ ಭಯ ಅವರಿಗೆ ತಮ್ಮ “no stone is left unturned” ಪ್ರಯತ್ನ ನಡೆಸಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಪ್ರೇರೇಪಿಸುತ್ತಿದೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಿಕೊಳ್ಳಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗಾಗಲೇ ಗೋವಾದಲ್ಲಿ 1867ರಿಂದಲೇ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿದೆ, 1966ರಲ್ಲಿ ಅದಕ್ಕೆ ಆಧುನಿಕ ರೂಪವನ್ನೂ ನೀಡಲಾಗಿದೆ. ಉತ್ತರಾಖಂಡ ರಾಜ್ಯದಲ್ಲಿ ಹೊಸದಾಗಿ UCC ಕರಡು ಮಸೂದೆ ಸಿದ್ಧಗೊಂಡಿದ್ದು, ದೇಶವ್ಯಾಪಿ ಮಸೂದೆಗೆ ಅದೇ ಮೂಲ ಮಾದರಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆ ಕರಡು ಇನ್ನೂ ಬಹಿರಂಗವಾಗಿ ಲಭ್ಯವಾಗಿಲ್ಲ. ಇದಲ್ಲದೇ, ಈ ಹಿಂದೆ ಶಿವಸೇನೆಯ ಚಂದ್ರಕಾಂತ್ ಭಾವೂರಾವ್ ಕಾಯಿರೆ ಅವರು 2018ರಲ್ಲಿ ಸಮಾನ ನಾಗರಿಕ ಸಂಹಿತೆಯ ಖಾಸಗಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು.

ಚಂದ್ರಕಾಂತ್ ಮಾದರಿ ಏನು ಹೇಳುತ್ತದೆ?

ಚಂದ್ರಕಾಂತ್ ಭಾವೂರಾವ್ ಕಾಯಿರೆ ಅವರ ಖಾಸಗಿ ಮಸೂದೆಯಲ್ಲಿ ಸಮಾನ ನಾಗರಿಕ ಸಂಹಿತೆಯ ಕಾನೂನು ಅಳವಡಿಸಿದ ಬಳಿಕ, ಅದು ನಿರ್ಧರಿಸಬೇಕಾಗಿರುವ ಸಮಾನ ಮದುವೆ, ವಿಚ್ಛೇದನ, ಸಕ್ಸೆಷನ್, ಇನ್‌ಹೆರಿಟೆನ್ಸ್, ಮೇಂಟೆನೆನ್ಸ್, ಅಡಾಪ್ಷನ್, ಗಾರ್ಡಿಯನ್‌ಷಿಪ್, ಪಾರ್ಟಿಷನ್ ಆಫ್ ಲ್ಯಾಂಡ್ ಅಂಡ್ ಅಸೆಟ್ಸ್ ಇತ್ಯಾದಿ ಸಂಹಿತೆಗಳ ಕುರಿತು ತೀರ್ಮಾನಿಸಲು ಸಮಿತಿಯೊಂದನ್ನು (National Inspection and Investigation Committee) ರಚಿಸಲು ಹೇಳಲಾಗಿದೆ. ನಿವೃತ್ತ CJI ನೇತೃತ್ವದ ಸಮಿತಿ ಇದನ್ನೆಲ್ಲ ತೀರ್ಮಾನಿಸಬೇಕೆಂದು ಆ ಮಸೂದೆ ಹೇಳುತ್ತದೆ. ಭಾರತ ಸರ್ಕಾರ ಈಗ ಮುಂದಿನ ಅಧಿವೇಶನದಲ್ಲಿ ತರಬಯಸಿರುವ UCC ಈ ಮಾದರಿಯದಾಗಿದ್ದರೆ (ಇದು ಸುಲಭ ಮಾದರಿ!) ಅದು ಅಪಾಯಕಾರಿ.

ಯಾಕೆಂದು ವಿವರಿಸುತ್ತೇನೆ. ಸರ್ಕಾರಕ್ಕೆ ಸಂವಿಧಾನದ ಚೌಕಟ್ಟಿನೊಳಗೆ ಇರುವಂತೆ ಕಾಣಿಸುವ ಸ್ಥೂಲವಾದ ಕಾನೂನೊಂದನ್ನು ತಂದು, ಅದನ್ನು ಸಂಸತ್ತಿನಿಂದ ಹೊರಗೆ, ಕಾರ್ಯಾಂಗವು ರೂಪಿಸುವ ನಿಯಮಗಳ ಮೂಲಕ ನಿರ್ವಹಿಸಲು ಹೊರಡುವ “ಸಂವಿಧಾನ ಬಾಹಿರ” ಅಡ್ಡಹಾದಿಯೊಂದು ಈಗ ಸ್ಪಷ್ಟವಾಗಿ ಬೆಳೆದುನಿಂತಿದೆ. CAA-NRC ಗದ್ದಲದ ವೇಳೆ ಇದು ಎಷ್ಟು ಅಪಾಯಕಾರಿ ಎಂಬುದು ದೇಶಕ್ಕೆ ಅರ್ಥವಾಗಿದೆ ಎಂದುಕೊಂಡಿದ್ದೇನೆ. ಈ ಮಾದರಿಯನ್ನು ಕೋವಿಡ್ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗಿಸಿ, ಈಗ ಪರಿಣತಿಯನ್ನು ಪಡೆಯಲಾಗಿದೆ. ಸಂಸತ್ತಿನ ಹಂಗಿಲ್ಲದೆ ನಿಯಮಗಳನ್ನು ಹೇರುವುದು ಈಗ ನೀರು ಕುಡಿದಷ್ಟು ಸಲೀಸು!!

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿ ಎಂಬ ಗ್ರೇಟ್ ಇಂಡಿಯನ್ ವಾಶಿಂಗ್ ಮಶೀನ್!

ಸ್ಥೂಲವಾಗಿ ಕಾಯಿದೆ ರೂಪಿಸಿ, ಅದರ ವಿವರಗಳನ್ನೆಲ್ಲ ಸಂಸತ್ತಿನಿಂದ ಹೊರಗೇ ನಿಭಾಯಿಸುವ “ಹಾವೂ ಸಾಯದ ಕೋಲೂ ಮುರಿಯದ” ಮಾದರಿಗೆ ಇನ್ನೊಂದು ಕ್ಲಾಸಿಕ್ ಉದಾಹರಣೆ ಎಂದರೆ 1986ರ ಪರಿಸರ ಸಂರಕ್ಷಣಾ ಕಾಯಿದೆ. ಅದು ಬಂದು ಈಗ 40 ವರ್ಷಗಳು ಕಳೆದರೂ, ಅದರ ಪೂರ್ಣ ಅನುಷ್ಠಾನ ಇಂದಿಗೂ ಸಾಧ್ಯವಾಗಿಲ್ಲ. ಈಗೀಗ ಅದು ಅನುಷ್ಠಾನ ಆಗುವುದು ಬೇಡವೆಂದೇ ಬಂದ ಕಾಯಿದೆಯಂತೆ ಕಾಣಿಸತೊಡಗಿದೆ!

UCC ಜಾರಿಗೆ ತಂದರೆ…

ಧರ್ಮವಾರು ಕಾನೂನುಗಳ (ಹಿಂದೂ ಕೋಡ್ ಬಿಲ್, ಮುಸ್ಲಿಂ ಪರ್ಸನಲ್ ಲಾ ಇತ್ಯಾದಿ) ವಿಷಯ ವ್ಯಾಪ್ತಿ ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಕೇಂದ್ರ-ರಾಜ್ಯಗಳ ಜಂಟಿಪಟ್ಟಿಯೊಳಗೆ (ಕನ್‌ಕರೆಂಟ್ ಲಿಸ್ಟ್) ಬರುವುದರಿಂದ, ಅವನ್ನೆಲ್ಲ ಒಳಗೊಂಡ ಒಂದು ಸಮಾನ ಕಾನೂನನ್ನು (UCCಯನ್ನು) ಒಂದು ವೇಳೆ ಜಾರಿಗೆ ತಂದರೂ, ರಾಜ್ಯಗಳ ಮೂಲಕ ಅದರ ಕಾರ್ಯಸಾಧ್ಯ ಅನುಷ್ಠಾನ “ರಾಜಕೀಯ” ನೆಲೆಯಲ್ಲಿ ಸಂಕೀರ್ಣ ಸ್ವರೂಪದ್ದಾಗಲಿದೆ. ಹಾಗಾಗಿ ಅಂತಹ ಒಂದು ಕಾನೂನು ಚುನಾವಣೆಗೆ ಮುನ್ನ ಚಾಲ್ತಿಗೆ ಬರುವುದು ಪ್ರಾಕ್ಟಿಕಲಿ ಅಸಾಧ್ಯ! ಈ ಕಾರಣಕ್ಕಾಗಿಯೇ ನನಗೆ ಮೇಲೆ ವಿವರಿಸಿದ ವಿಧಾನ ಬಳಕೆಗೆ ಬರಬಹುದೆಂಬ ಬಗ್ಗೆ ಶಂಕೆ.

ಸಂವಿಧಾನದ 14, 15ನೇ ವಿಧಿಗಳು ಧರ್ಮ, ವರ್ಗ, ಜಾತಿ, ಲಿಂಗ, ಜನ್ಮಸ್ಥಳಗಳ ಆಧಾರದಲ್ಲಿ ಸಮಾನತೆಯ ಹಕ್ಕನ್ನು ಹೇಳುತ್ತವೆಯಾದರೆ ಸಂವಿಧಾನದ 25, 26, 27, 28ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಹೇಳುತ್ತವೆ. ಸಂವಿಧಾನದ ಪೀಠಿಕೆಯಲ್ಲಿಯೇ ಭಾರತ “ಧರ್ಮ ನಿರಪೇಕ್ಷ” ಎಂದು ಹೇಳಲಾಗಿದೆ. ಜೊತೆಗೆ, ಸಂವಿಧಾನದ 44ನೇ ವಿಧಿ (ನಿರ್ದೇಶಕ ತತ್ವಗಳ ಅಡಿ) ಸಮಾನ ನಾಗರಿಕ ಸಂಹಿತೆಯನ್ನು ಹೊಂದುವತ್ತ ದೇಶ ಸಾಗುವ ಅಗತ್ಯವನ್ನು ಸೂಚಿಸುತ್ತದೆ. ಇವೆಲ್ಲ ಒಟ್ಟಿಗೆ ಒಂದು ಚೌಕಟ್ಟು. ಈ ಚೌಕಟ್ಟಿನಲ್ಲಿ ಅನಾರೋಗ್ಯಕರವಾದುದು ಏನೂ ಇಲ್ಲ. ಪ್ರಜೆಯೊಬ್ಬ ತನ್ನ ಇತಿಮಿತಿಗಳ ಒಳಗೆ ಸ್ವತಂತ್ರ ಬದುಕು ಸಾಗಿಸಲು ಈ ಚೌಕಟ್ಟು ಸಾಕಾಗುವಷ್ಟಿದೆ. ಈ ಚೌಕಟ್ಟನ್ನು ರಾಜಕೀಯದ ಹಿತಾಸಕ್ತಿಗಳ ಕಣ್ಣಿನಿಂದ ಅರ್ಥೈಸಿಕೊಳ್ಳಬಾರದು. ಈ ಸಾಂವಿಧಾನಿಕ ಚೌಕಟ್ಟಿನ ಆಚರಣೆ ಕೇವಲ ಇನ್ ಲೆಟರ್ ಇದ್ದು, ಇನ್ ಸ್ಪಿರಿಟ್ ಆಗದೇ ಹೋದರೆ, ದ್ವೇಷ-ಅಸಹನೆಗಳ ಅಂಗಡಿಯನ್ನಲ್ಲ, ಬದಲಾಗಿ ಸೂಪರ್ ಸ್ಟೋರನ್ನೇ ತೆರೆಯುವಷ್ಟು ಅವಕಾಶ ಕೂಡ ಇಲ್ಲಿದೆ. ಹಾಲೀ ಭಾರತ ಸರ್ಕಾರ UCC ಕುರಿತು ಸಂವಿಧಾನದ ಚೌಕಟ್ಟಿನೊಳಗೆ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರವಾದ ರಾಷ್ಟ್ರೀಯ ಸಹಮತವನ್ನು ರೂಪಿಸಲು ಹೊರಡುವ ಬದಲು, UCC ಜಾರಿಗೆ ತಂದೇ ಮುಂದಿನ ಚುನಾವಣೆ ಎದುರಿಸುತ್ತೇನೆ ಎಂದು ಹೊರಟರೆ ಆಗಬಹುದಾದದ್ದು ಇಷ್ಟೇ.

ಮಹಿಳೆಯರಿಗೆ, ಅವಕಾಶ ವಂಚಿತರಿಗೆ, ಅಸಹಾಯಕರಿಗೆ ಸಮಾನ ಅವಕಾಶಗಳು ಸಿಗುವ ನಿಟ್ಟಿನಲ್ಲಿ ಅರ್ಥೈಸಿಕೊಳ್ಳಬೇಕಾಗಿದ್ದ ಈ ಸಾಂವಿಧಾನಿಕ ಚೌಕಟ್ಟನ್ನು ಧರ್ಮಗಳ ಚೌಕಟ್ಟಿನಲ್ಲಿ ನೋಡತೊಡಗಿರುವುದೇ ಎದ್ದಿರುವ ಎಲ್ಲ ಗೊಂದಲಗಳ ಮೂಲ. ಎಲ್ಲ ರಾಜಕೀಯಸ್ಥರಿಗೂ ಇದು ಅನುಕೂಲಕರವೇ ಆದದ್ದರಿಂದ, ಎಲ್ಲರೂ ಅದನ್ನು ಆ ದೃಷ್ಟಿಕೋನದಿಂದಲೇ ನೋಡುತ್ತಿದ್ದಾರೆ. ಯಾಕೆ ಈ ಕಾನೂನು ತರಲು ತುರ್ತು ಎಂದು ಕೇಳಿದರೆ, ಸುಪ್ರೀಂಕೋರ್ಟು ಎರಡೆರಡು ಬಾರಿ ಹೇಳಿದೆಯಲ್ಲ ಎಂದು ಬೊಟ್ಟು ಮಾಡಲಾಗುತ್ತಿದೆ. ಸಮಯ-ಸಂದರ್ಭಗಳನ್ನು ತಿರುಚಿದ ಅರ್ಥೈಸಿಕೊಳ್ಳುವಿಕೆ ಇದು.

ಚುನಾವಣೆ ಮುಂದಿರುವಾಗ, ಈ ರೀತಿಯಲ್ಲಿ ಮೂಡಿಸಲಾಗುವ “ಅವ್ಯಕ್ತದ ಭಯ” ತಂದುಕೊಡುವಷ್ಟು ಚುನಾವಣಾ ಲಾಭವನ್ನು ಇನ್ಯಾವುದೂ ತಂದುಕೊಡುವುದಿಲ್ಲ ಎಂಬುದು ಕಳೆದೆರಡು ದಶಕಗಳಲ್ಲಿ ಹಲವು ಬಾರಿ ಸಾಬೀತಾಗಿದೆ. ಸಂವಿಧಾನದ ಆಯಕಟ್ಟಿನ ಸಂಧಿಗಳನ್ನು ಜನರ ನಡುವೆ ದ್ವೇಷ, ಅಶಾಂತಿ ಬಿತ್ತಲು ಬಳಸಿಕೊಳ್ಳುವುದು ಅವ್ಯಕ್ತದ ಭಯ ಮೂಡಿಸುವ ಹಾದಿಯಲ್ಲಿ ಸುಲಭ. ಅದು ಆಗದಿರಲಿ. ದೇಶದ ಶಾಂತಿ-ನೆಮ್ಮದಿ UCC ಹೆಸರಲ್ಲಿ ಇನ್ನಷ್ಟು ಕೆಡದಿರಲಿ ಎಂಬುದಷ್ಟೇ ಹಾರೈಕೆ.

ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರು

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಗಪುರ್ ಉದ್ಯಮಿಗಳು ಹೂಡಿಕೆಗೆ ಮುಂದೆ ಬಂದರೆ ಭೂಮಿ ಒದಗಿಸಲು ಸಿದ್ಧ: ಸಚಿವ ಎಂ ಬಿ ಪಾಟೀಲ್

‌ಸಿಂಗಾಪುರದ ಉದ್ಯಮಿಗಳು ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ಅವರಿಗೆ...

ಇಂದು ನಡೆಯಲಿದೆ ಹೈ ಪ್ರೊಫೈಲ್‌ ಕೇಸುಗಳ ವಿಚಾರಣೆ; ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ನಾಲ್ಕು ಹೈಪ್ರೊಫೈಲ್‌ ಕೇಸುಗಳ ವಿಚಾರಣೆ ಹೈಕೋರ್ಟ್‌ ಸೇರಿದಂತೆ ವಿವಿಧ ಕೋರ್ಟ್‌ಗಳಲ್ಲಿ...

ಲೈಂಗಿಕ ದೌರ್ಜನ್ಯ | ಸಿ ಪಿ ಯೋಗೇಶ್ವರ್ ಆಪ್ತ ಟಿ ಎಸ್‌ ರಾಜು ವಿರುದ್ಧ ದೂರು ದಾಖಲು, ಆರೋಪಿ ಪರಾರಿ

ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಚನ್ನಪಟ್ಟಣ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ...

ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ...