ಗೋಹತ್ಯೆ ನಿಷೇಧ ಕಾಯ್ದೆ ಎಂಬ ‘ಅನರ್ಥ’ಕಾರಿ ಪ್ರಹಸನ

Date:

ಗೋವನ್ನು ಹೈನುಗಾರಿಕೋತ್ಪನ್ನಗಳ ಮೂಲ ಧಾತು ಎಂಬುದನ್ನು ಪರಿಗಣಿಸಿ, ಹೈನುಗಾರಿಕೋತ್ಪನ್ನಗಳ ಸಾಲಿಗೆ ಗೋಮಾಂಸವನ್ನೂ ಕಡ್ಡಾಯವಾಗಿ ಸೇರ್ಪಡೆ ಮಾಡಬೇಕು. ಗೋವಧೆಗಿರುವ ಎಲ್ಲ ನಿಷೇಧಗಳನ್ನೂ ತೆರವುಗೊಳಿಸಬೇಕು.

ಉತ್ತರಪ್ರದೇಶ ಮತ್ತೊಮ್ಮೆ ಸುದ್ದಿಯಲ್ಲಿದೆ. ʼCow Beltʼ ಎಂದೇ ಕುಖ್ಯಾತವಾಗಿರುವ ಈ ರಾಜ್ಯದಲ್ಲಿ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಕಾರಣಕ್ಕೆ ಉತ್ತರ ಪ್ರದೇಶವು ಚುನಾವಣಾ ಪೂರ್ವದಲ್ಲಿ ಸುದ್ದಿಯಲ್ಲಿತ್ತು. ಇದೀಗ ಗೋಧಿಯ ಕಣಜ ಎಂದೇ ಹೇಳಲಾಗುವ ಉತ್ತರಪ್ರದೇಶದ ಪೂರ್ವಾಂಚಲ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಈ ಗೋಹತ್ಯೆ ನಿಷೇಧ ಕಾಯ್ದೆಯ ಕಾರಣಕ್ಕೇ ಬಿಜೆಪಿಗೆ ಬರೋಬ್ಬರಿ 20 ಸ್ಥಾನಗಳು ಲುಕ್ಸಾನಾಗಿರುವುದರಿಂದ ಮತ್ತೆ ಸುದ್ದಿಯಲ್ಲಿದೆ. ಆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಎಂತಹ ʼಅನರ್ಥʼಕಾರಿ ಪ್ರಹಸನ ಎಂಬುದಕ್ಕೆ ಸಾಕ್ಷಿ ಒದಗಿಸಿದೆ. ಇದರೊಂದಿಗೆ ರೈತರ ಪಾಲಿಗೆ ಇಂತಹ ಕಾನೂನುಗಳು ಹೇಗೆ ಮರಣ ಶಾಸನವಾಗಬಲ್ಲವು ಎಂಬುದಕ್ಕೂ ನಿದರ್ಶನ ರೂಪದಲ್ಲಿ ಒದಗಿ ಬಂದಿದೆ.

ಕರ್ನಾಟಕದಲ್ಲೂ ಕೂಡಾ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ʼಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ, 2020’ ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ವಯ ಎಲ್ಲ ವಯಸ್ಸಿನ ಆಕಳು, ಆಕಳ ಕರು, ಗೂಳಿ, ಎತ್ತು ಮತ್ತು 13 ವರ್ಷದೊಳಗಿನ ಎಮ್ಮೆ ಮತ್ತು ಕೋಣದ ವಧೆಯನ್ನು ನಿಷೇಧಿಸಲಾಗಿದೆ. ಅಲ್ಲದೆ, ವಧೆಗಾಗಿ ಅಂತಾರಾಜ್ಯ ಸಾಗಾಟವನ್ನೂ ನಿಷೇಧಿಸಲಾಗಿದೆ. ಇಂತಹ ಅವೈಜ್ಞಾನಿಕ ಕಾನೂನುಗಳು ರೈತಾಪಿ ವರ್ಗದ ಪಾಲಿಗೆ ಎಷ್ಟು ದುಬಾರಿಯಾಗಬಲ್ಲವು ಎಂಬುದಕ್ಕೆ ಉತ್ತರಪ್ರದೇಶವೇ ನಿದರ್ಶನ.

ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಗಿಯಾಗಿ ಜಾರಿಗೊಳಿಸಲಾಯಿತು. ಈ ಕಾಯ್ದೆಯನ್ವಯ ಯಾವುದೇ ಆಕಳು, ಎತ್ತು ಅಥವಾ ಹೋರಿಯನ್ನು ಹತ್ಯೆಗೈಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಯಿತು. ಹಾಗೇನಾದರೂ ಗೋಹತ್ಯೆಯಾಗಿರುವುದು ಕಂಡು ಬಂದರೆ, ಕಠಿಣವಾಗಿ ಶಿಕ್ಷಿಸುವ ಕಾನೂನನ್ನೂ ಜಾರಿಗೆ ತರಲಾಯಿತು. ಇದರ ನೇರ ಪರಿಣಾಮ ಉಂಟಾಗಿದ್ದು ʼಗೋಧಿಯ ಕಣಜʼ ಎಂದೇ ಹೆಸರಾಗಿರುವ ಉತ್ತರ ಪ್ರದೇಶದ ಪೂರ್ವಾಂಚಲ ಹಾಗೂ ಪಶ್ಚಿಮ ಉತ್ತರ ಪ್ರದೇಶದ ರೈತರ ಮೇಲೆ. ಗೋಹತ್ಯೆಗೆ ಅವಕಾಶವೇ ಇಲ್ಲದೆ ಹೋದುದರಿಂದ ರೈತರು ಬಂಜೆ ಹಾಗೂ ನಿಷ್ಪ್ರಯೋಜಕ ಆಕಳು, ಎತ್ತು, ಹೋರಿಗಳನ್ನು ಸಾಕಲಾಗದೆ ಬೀದಿಗೆ ಬಿಡತೊಡಗಿದರು. ಇಂತಹ ಬಿಡಾಡಿ ದನಗಳಿಗೆ ಗೋಶಾಲೆಗಳ ಸಮರ್ಪಕ ವ್ಯವಸ್ಥೆಯನ್ನು ಆಳುವ ಸರ್ಕಾರ ಏರ್ಪಡಿಸದೆ ಹೋಗಿದ್ದರಿಂದ, ಅಂತಹ ಆಕಳು, ಎತ್ತು ಮತ್ತು ಹೋರಿಗಳು ರೈತರ ಗೋಧಿಯ ಹೊಲಗಳಿಗೆ ನುಗ್ಗಿ ದಾಂಧಲೆ ಸೃಷ್ಟಿಸತೊಡಗಿದವು. ಪುಂಡಾನೆಗಳನ್ನೂ ಮೀರಿಸುವಂಥ ಇಂತಹ ದಾಂಧಲೆಯಿಂದಾಗಿ ಈ ಭಾಗದ ರೈತರು ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸಬೇಕಾಯಿತು ಹಾಗೂ ಮುಂದೆಯೂ ಅನುಭವಿಸಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹುಸಿ ಧಾರ್ಮಿಕ-ಭಾವುಕ ದೇಶ

ಭಾರತ ಒಂದು ಹುಸಿ ಧಾರ್ಮಿಕ ಮತ್ತು ಭಾವುಕ ದೇಶ. ಮನುಷ್ಯರನ್ನು ಮನುಷ್ಯರಂತೆ ನೋಡಲಾಗದ ಇಲ್ಲಿನ ಧಾರ್ಮಿಕತೆಗೆ ಇತರ ಪ್ರಾಣಿ-ಪಕ್ಷಿಗಳನ್ನು ದೈವಸ್ವರೂಪಿಯಾಗಿ ನೋಡುವ ಹುಸಿ ಭಾವುಕತೆ ಬೆಳೆದು ಬಂದಿದೆ. ಈ ಹುಸಿ ಧಾರ್ಮಿಕತೆ ಹಾಗೂ ಭಾವುಕತೆ ಇಲ್ಲಿನ ಜನ ಸಮೂಹವನ್ನೂ ಆವರಿಸಿಕೊಂಡಿದೆ. ಹೀಗಾಗಿಯೇ ಬಹುತೇಕ ಭೂಮಾಲೀಕ ರೈತಾಪಿ ವರ್ಗಗಳಿಗೆ ಗೋಹತ್ಯೆಯ ಬಗ್ಗೆ ವಿಪರೀತ ತಿರಸ್ಕಾರ ಹಾಗೂ ಆಕ್ರೋಶವಿದೆ. ಜೀವಿಗಳನ್ನು ಅವುಗಳ ಪ್ರಭೇದಗಳಿಗನುಸಾರವಾಗಿ ನೋಡಲಾಗದ, ಉಪಚರಿಸಲಾಗದ ಹುಸಿ ಭಾವುಕತೆಯ ಪರಿಣಾಮವಿದು. ಆದರೆ, ಇಂತಹ ಹುಸಿ ಭಾವುಕತೆಯೇ ರೈತರ ಆರ್ಥಿಕತೆಯನ್ನು ನಾಶಗೊಳಿಸುತ್ತಿರುವುದು.

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಮಹಾತ್ಮ ಗಾಂಧಿಯಿಂದ ಹಿಡಿದು, ಅಂಬೇಡ್ಕರ್ ವರೆಗೆ ಗೋಹತ್ಯೆಯಿಂದಾಗಿ ರೈತಾಪಿ ವರ್ಗದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಕಳವಳ ಇದ್ದದ್ದು ನಿಜ. ಹೀಗಾಗಿಯೇ, ಗೋಹತ್ಯೆ ನಿಷೇಧ ಕಾಯ್ದೆ ಸಂವಿಧಾನ ರಚನೆಯಾದಾಗಿನಿಂದಲೂ ಇದೆ. ಆದರೆ, ಇಂತಹ ಕಾನೂನುಗಳನ್ನು ರಚಿಸುವ ವಿವೇಚನಾಧಿಕಾರವನ್ನು ಆಯಾ ರಾಜ್ಯಗಳಿಗೇ ಬಿಡಲಾಗಿದೆ. ಹೀಗಾಗಿ ದೇಶಾದ್ಯಂತ ಏಕರೂಪಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿಲ್ಲ ಎಂಬುದು ಗಮನಾರ್ಹ.

ಭಾರತದ ಆಹಾರ ಸಂಸ್ಕೃತಿಯೂ ವೈವಿಧ್ಯಮಯವಾಗಿದ್ದು, ಇದು ಭಾಷೆ, ಸಮುದಾಯ ಹಾಗೂ ಪ್ರಾಂತೀಯವಾಗಿ ಭಿನ್ನವಾಗಿದೆ. ದಲಿತರು ಹಾಗೂ ಮುಸ್ಲಿಮರ ಪಾಲಿಗೆ ಗೋಮಾಂಸ ಸೇವನೆ ಸಹಜವಾಗಿದ್ದರೆ, ಈಶಾನ್ಯ ರಾಜ್ಯಗಳಲ್ಲಿ ಇದೊಂದು ಆಹಾರ ಸಂಸ್ಕೃತಿಯೇ ಆಗಿದೆ. ಹೀಗಾಗಿಯೇ ಗೋಹತ್ಯೆ ನಿಷೇಧ ಕಾಯ್ದೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಇದು ಸೂಕ್ತ ಕೂಡಾ. ಯಾವುದೇ ಬಗೆಯ ಆಹಾರ ಸಂಸ್ಕೃತಿಯನ್ನು ವೈವಿಧ್ಯಮಯ ಸಮುದಾಯ, ನಂಬಿಕೆ, ಆಚರಣೆ ಹೊಂದಿರುವ ಭಾರತದಂಥ ದೇಶದಲ್ಲಿ ಏಕರೂಪಿಯಾಗಿ ಹೇರುವುದು ಮೂಲಭೂತ ಹಕ್ಕಿಗೆ ಉಂಟು ಮಾಡುವ ಧಕ್ಕೆಯಾಗುತ್ತದೆ. ಇದನ್ನು ಮನಗಂಡೇ ಡಾ. ಬಿ.ಆರ್.ಅಂಬೇಡ್ಕರ್ ಅವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಾರ್ವತ್ರಿಕ ಕಾಯ್ದೆಯನ್ನಾಗಿ ರೂಪಿಸಲಿಲ್ಲ. ಬದಲಿಗೆ ರಾಜ್ಯಗಳ ವಿವೇಚನಾಧಿಕಾರಕ್ಕೇ ಬಿಟ್ಟುಕೊಟ್ಟರು.

ಇಷ್ಟಕ್ಕೂ, ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅವಲಂಬಿಸಿದ್ದ ಭಾರತೀಯ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಗೋವುಗಳು ಮೂಲಾಧಾರವಾಗಿದ್ದವು. ಅದರಲ್ಲೂ ಎತ್ತುಗಳು ಅತ್ಯಗತ್ಯವಾಗಿದ್ದವು. ಆದರೆ, ಸ್ವಾತಂತ್ರ್ಯ ಬಂದು 80 ವರ್ಷ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಭಾರತವು ದೊಡ್ಡ ಮಟ್ಟದಲ್ಲಿ ಆಧುನಿಕ ಕೃಷಿಗೆ ತನ್ನನ್ನು ತಾನು ಒಗ್ಗಿಕೊಂಡಿದೆ. ಹೀಗಾಗಿ ಕೃಷಿಗೆ ಗೋವುಗಳನ್ನೇ ಅವಲಂಬಿಸಬೇಕಾದ ಅಗತ್ಯತೆ ಸಾಕಷ್ಟು ಪ್ರಮಾಣದಲ್ಲಾದರೂ ಕುಸಿದಿದೆ. ಬದಲಿಗೆ ಗೋವುಗಳು ಇಂದು ರೈತರಿಗೆ ಮೂಲಾಧಾರವಾಗಿರುವುದು ಹೈನುಗಾರಿಕೆ ಉತ್ಪನ್ನಗಳ ಉತ್ಪಾದನೆಗಾಗಿ. ಹೀಗಾಗಿಯೇ ಇಂದು ದೇಶಾದ್ಯಂತ ಸ್ವದೇಶಿ ತಳಿಯ ಹಸುಗಳ ಸಾಕಾಣಿಕೆಗಿಂತ ಹಾಲನ್ನು ದುಪ್ಪಟ್ಟು ಪ್ರಮಾಣದಲ್ಲಿ ನೀಡುವ ಜೆರ್ಸಿ ಗೋವುಗಳ ಸಾಕಾಣಿಕೆಯೇ ಪ್ರಧಾನವಾಗಿ ಬೆಳೆದು ನಿಂತಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

ಒಂದು ವೇಳೆ ಇಂತಹ ಜೆರ್ಸಿ ಆಕಳುಗಳು ಗೊಡ್ಡಾದರೆ, ಅಥವಾ ಇಂತಹ ಆಕಳುಗಳಿಗೆ ಗಂಡು ಕರು ಜನಿಸಿದರೆ, ಅದು ರೈತನ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಹೀಗಾಗಿಯೇ, ಹಿಂದೆಲ್ಲ ರೈತರು ಗೋಹತ್ಯೆ ನಿಷೇಧ ಕಾಯ್ದೆಗಳು ಸಡಿಲವಾಗಿದ್ದಾಗ, ಇಂತಹ ಆಕಳು, ಎತ್ತು ಹಾಗೂ ಹೋರಿಗಳನ್ನು ಮಾರಾಟ ಮಾಡಿಬಿಡುತ್ತಿದ್ದರು. ಅವುಗಳಿಂದ ಬಂದ ದುಡ್ಡಿನಲ್ಲಿ ಹೊಸ ಆಕಳುಗಳು ಇಲ್ಲವೆ ಎತ್ತುಗಳನ್ನು ಕೊಳ್ಳುತ್ತಿದ್ದರು. ಇಂತಹ ವಿನಿಮಯ ಚಟುವಟಿಕೆಯಿಂದ ಗ್ರಾಮೀಣ ಭಾರತದ ಆರ್ಥಿಕ ಚಟುವಟಿಕೆ ಚಲನಶೀಲವಾಗಿ ಉಳಿದಿತ್ತು. ಆದರೆ, ಉತ್ತರ ಪ್ರದೇಶ ಹಾಗೂ ಕರ್ನಾಟಕದಂಥ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಟ್ಟುನಿಟ್ಟಿನ ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ರೈತರ ಆರ್ಥಿಕ ಸ್ಥಿತಿ ಏರುಪೇರಾಗಿದೆ. ಇದರೊಂದಿಗೆ ಬಿಡಾಡಿ ದನಗಳ ಕಾಟದಿಂದ ತಮ್ಮ ಬೆಳೆಗಳಿಗೆ ಹಾನಿಯಾಗುತ್ತಿರುವುದರಿಂದ ಕೃಷಿಯನ್ನೇ ನಂಬಿಕೊಂಡಿರುವ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಕಂಗಾಲಾಗಿದ್ದಾರೆ. ಇದರ ಪರಿಣಾಮವೇ Cow Belt ಎಂದೇ ಕುಖ್ಯಾತವಾಗಿದ್ದ ಉತ್ತರ ಪ್ರದೇಶದಲ್ಲಿ ಹಿಂದೂ ಧರ್ಮದ ವಾರಸುದಾರಿಕೆ ಪಕ್ಷವಾದ ಬಿಜೆಪಿಗೆ ಮರ್ಮಾಘಾತವಾಗಿರುವುದು.

ನೈಸರ್ಗಿಕ ಕ್ರಿಯೆ

ಪ್ರಕೃತಿಯ ನಿಯಮದ ಪ್ರಕಾರ, ಈ ಭೂಮಿಯಲ್ಲಿ ಜನಿಸಿದ ಪ್ರತಿ ಜೀವಿಯೂ ಒಂದನ್ನು ಕೊಂದೇ ಮತ್ತೊಂದು ಬದುಕಬೇಕು. ಅದಕ್ಕೆ ಸಸ್ಯ ಅಥವಾ ಪ್ರಾಣಿ ಎಂಬ ಭೇದವಿಲ್ಲ. ಇಂತಹ ಸ್ಥಿತಿಯನ್ನು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲೆಂದು ನಿಸರ್ಗವೇ ರೂಪಿಸಿಕೊಂಡಿದೆ. ಇಲ್ಲವಾದರೆ, ಯಾವುದೇ ಒಂದು ಜೀವಿಯ ಸಂಖ್ಯೆ ಅಂಕೆ ಮೀರಿ ಬೆಳೆದರೆ, ಮತ್ತೊಂದು ಜೀವಿಯ ಜೀವಿಸುವ ಹಕ್ಕಿಗೆ ಚ್ಯುತಿಯುಂಟಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಸಸ್ಯಾಹಾರ ಪ್ರಮಾಣವೇನಾದರೂ saturation ಹಂತಕ್ಕೆ ತಲುಪಿದರೆ, ಮನುಷ್ಯನ ಆಹಾರ ಬೇಡಿಕೆಯನ್ನು ಪೂರೈಸಲೆಂದೇ ಅಸ್ತಿತ್ವದಲ್ಲಿರುವ ಕೋಳಿ, ಕುರಿ, ಹಂದಿ, ಮೇಕೆ, ಹಸು, ಎತ್ತು, ಎಮ್ಮೆ, ಕೋಣ, ಮೊಲ ಇತ್ಯಾದಿಗಳ ಸಾಕಾಣಿಕೆ ಕೂಡಾ ತನ್ನಿಂತಾನೆ ಇಲ್ಲವಾಗುತ್ತದೆ. ಆಗ ಅವು ಆಹಾರ ರೂಪದಲ್ಲಿ ಬೇಡಿಕೆ ಕಳೆದುಕೊಳ್ಳುವುದರಿಂದ, ಅವುಗಳ ಸಾಕಾಣಿಕೆಯೇ ಇಲ್ಲವಾಗಿ, ಅವುಗಳ ವಂಶವೂ ನಿರ್ಮೂಲನಗೊಳ್ಳುತ್ತದೆ.

ಇಂತಹ ಪ್ರಾಥಮಿಕ ವೈಜ್ಞಾನಿಕತೆಯನ್ನು ಆಧರಿಸಿಯೇ ಪ್ರಕೃತಿಯಲ್ಲಿ ಒಂದನ್ನು ಕೊಂದು ಮತ್ತೊಂದು ತಿನ್ನುವ ಆಹಾರ ಸರಪಣಿ ಪ್ರಕ್ರಿಯೆ ಜಾರಿಯಲ್ಲಿರುವುದು. ಈ ಪ್ರಕ್ರಿಯೆ ಬಗ್ಗೆ ಉಳಿದ್ಯಾವ ಜೀವಿಗಳಿಗೂ ತಕರಾರಿಲ್ಲದಿದ್ದರೂ, ತನ್ನನ್ನು ತಾನು ಬುದ್ಧಿಜೀವಿ, ಧಾರ್ಮಿಕ ವ್ಯಕ್ತಿ ಹಾಗೂ ಆಧ್ಯಾತ್ಮಿಕ ವ್ಯಕ್ತಿ ಎಂದೆಲ್ಲ ಮನುಷ್ಯ ತನಗೆ ತಾನೇ ಆರೋಪಿಸಿಕೊಂಡಿರುವುದರಿಂದಲೇ ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಕೀಳರಿಮೆಯನ್ನು ವ್ಯವಸ್ಥಿತವಾಗಿ ಬಿತ್ತಲಾಗಿರುವುದು.

No cow slaughtering: ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡುವಂತಿಲ್ಲ - ರಾಜ್ಯ ಸರ್ಕಾರ  ಸೂಚನೆ-no cow slaughtering on bakrid karnataka govt ,ಕರ್ನಾಟಕ ಸುದ್ದಿ

ಭಾರತದ ಇತಿಹಾಸದ ಪ್ರಕಾರ, ಗೋಮಾಂಸ ಎಲ್ಲಿಯವರೆಗೆ ಇಲ್ಲಿ ಸ್ವೀಕಾರಾರ್ಹವಾಗಿತ್ತೊ, ಅಲ್ಲಿಯವರೆಗೂ ಈ ದೇಶದ ಮೇಲೆ ಯಾರಿಂದಲೂ ಆಕ್ರಮಣ ಮಾಡಲಾಗಿರಲಿಲ್ಲ. ಆದರೆ, ಯಾವಾಗ ಬೌದ್ಧ ಧರ್ಮ ವೈದಿಕರು ಹೋಮ, ಹವನಗಳ ಹೆಸರಲ್ಲಿ ಗೋಹತ್ಯೆಯನ್ನು ಅವ್ಯಾಹತವಾಗಿ ಮಾಡುವುದನ್ನು ವಿರೋಧಿಸಿತೊ, ಅದರಿಂದ ರೈತಾಪಿ ಕುಲ ಸಂಕಟಕ್ಕೆ ಸಿಲುಕಲಿದೆ ಎಂದು ಜನಜಾಗೃತಿ ಮೂಡಿಸಿತೊ, ಆಗ ಸಂಪೂರ್ಣ ಮಾಂಸಾಹಾರವನ್ನೇ ತ್ಯಜಿಸಿದ ವೈದಿಕರು, ನಂತರ ಮಾಂಸಾಹಾರ ಕನಿಷ್ಠ ಎಂಬ ಕೀಳರಿಮೆಯನ್ನು ಭಾರತದ ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಿದರು. ಇದಾದ ನಂತರವೇ ಮೊಘಲರಿಂದ ಹಿಡಿದು ಬ್ರಿಟಿಷರವರೆಗೆ ಭಾರತದ ಮೇಲೆ ದಂಡೆತ್ತಿ ಬಂದದ್ದು, ಈ ನೆಲವನ್ನು ಆಕ್ರಮಿಸಿಕೊಂಡಿದ್ದು.

ಈ ಎಲ್ಲ ಹಿನ್ನೆಲೆಯಲ್ಲಿ ಗೋವನ್ನು ಹೈನುಗಾರಿಕೋತ್ಪನ್ನಗಳ ಮೂಲ ಧಾತು ಎಂಬುದನ್ನು ಪರಿಗಣಿಸಿ, ಹೈನುಗಾರಿಕೋತ್ಪನ್ನಗಳ ಸಾಲಿಗೆ ಗೋಮಾಂಸವನ್ನೂ ಕಡ್ಡಾಯವಾಗಿ ಸೇರ್ಪಡೆ ಮಾಡಬೇಕು. ಗೋವಧೆಗಿರುವ ಎಲ್ಲ ನಿಷೇಧಗಳನ್ನೂ ತೆರವುಗೊಳಿಸಬೇಕು. ಇದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದಲ್ಲದೆ ಭಾರತದ ಸಾಮಾಜಿಕ ಆರೋಗ್ಯವೂ ಸ್ವಸ್ಥಗೊಳ್ಳಲಿದೆ. ದತ್ತಾಂಶಗಳ ಪ್ರಕಾರ, 2023ರ ಜಾಗತಿಕ ಆರೋಗ್ಯ ಸೂಚ್ಯಂಕದಲ್ಲಿ ಭಾರತವು ಕೇವಲ 28.7 ಅಂಕಗಳನ್ನಷ್ಟೆ ಗಳಿಸಿದೆ. ಇದೇ ವೇಳೆ, 2023ರಲ್ಲಿ ಭಾರತದ ಗೋಮಾಂಸ ರಫ್ತು ಪ್ರಮಾಣವು 1.3 ದಶಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಇದೇ ಹೊತ್ತಿನಲ್ಲಿ ಗೋಮಾಂಸದ ಸ್ವದೇಶಿ ಬಳಕೆಯ ಪ್ರಮಾಣ 3.95 ಲಕ್ಷ ಮೆಟ್ರಿಕ್ ಟನ್ ಮಾತ್ರವಿದೆ. ಅರ್ಥಾತ್ ಸ್ವದೇಶಿ ಬಳಕೆಗಿಂತ ವಿದೇಶಿ ರಫ್ತಿಗೇ ಗೋಮಾಂಸ ಹೆಚ್ಚು ಬಳಕೆಯಾಗುತ್ತಿರುವುದರಿಂದ ಭಾರತದ ಆರೋಗ್ಯ ಸೂಚ್ಯಂಕವು ಜಾಗತಿಕ ಮಟ್ಟದಲ್ಲಿ ಅತ್ಯಂತ ಕಳಪೆ ಸ್ಥಾನದಲ್ಲಿದೆ.

ಅಪೌಷ್ಟಿಕತೆಯನ್ನು ನಿವಾರಿಸಲು ಪ್ರೋಟೀನ್ ಅನ್ನು ಹೇರಳ ಪ್ರಮಾಣದಲ್ಲಿ ಹೊಂದಿರುವ ಗೋಮಾಂಸ ರಾಮಬಾಣ ಎಂಬುದು ತಜ್ಞ ವೈದ್ಯರು ಹಾಗೂ ಆಹಾರ ತಜ್ಞರ ಸ್ಪಷ್ಟ ಅಭಿಮತ. ಇದರೊಂದಿಗೆ ಗೋಮಾಂಸ ಸೇವನೆಗೆ ಯಾವುದೇ ನಿರ್ಬಂಧಗಳಿಲ್ಲದೆ ಹೋದಾಗ ರೈತರು ತಮ್ಮ ಅನುಪಯುಕ್ತ ಜಾನುವಾರುಗಳನ್ನು ಕಸಾಯಿ ಖಾನೆಗಳಿಗೆ ಮಾರುವ ಮೂಲಕ ಆರೋಗ್ಯವಂತ ರಾಸುಗಳನ್ನು ಕೊಳ್ಳಲು ಒಂದಿಷ್ಟು ಹಣ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಅವರಿಗೆ ಹೊಸ, ಆರೋಗ್ಯವಂತ ರಾಸುಗಳನ್ನು ಕೊಳ್ಳಲು ಆಗುವ ವೆಚ್ಚದಲ್ಲಿ ಒಂದಿಷ್ಟು ಉಳಿಕೆಯಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಸುಳ್ಳಾದ ಭವಿಷ್ಯ | ಇನ್ನು ಮುಂದೆ ಚುನಾವಣಾ ಸೀಟುಗಳನ್ನು ಊಹಿಸುವುದಿಲ್ಲ: ಪ್ರಶಾಂತ್ ಕಿಶೋರ್

ಒಂದು ಮೂಲದ ಪ್ರಕಾರ, ಗೊಡ್ಡು ಆಕಳು ಅಥವಾ ಜೆರ್ಸಿ ಎತ್ತುಗಳನ್ನು ಸಾಕಲು ರೈತರಿಗೆ ಪ್ರತಿದಿನ ಕನಿಷ್ಠವೆಂದರೂ ನೂರು ರೂಪಾಯಿ ವೆಚ್ಚವಾಗುತ್ತದೆ. ಪ್ರತಿ ಆಕಳು, ಎತ್ತು ಅಥವಾ ಹೋರಿಯ ಜೀವಿತಾವಧಿ ಕನಿಷ್ಠ ಪಕ್ಷ ಮೂವತ್ತು ವರ್ಷಗಳಾಗಿದೆ. ಈ ಪೈಕಿ ಆಕಳುಗಳು 13 ವರ್ಷದ ನಂತರ ಅನುಪಯುಕ್ತವಾದರೆ, ಎತ್ತುಗಳಂತೂ ಜೀವಿತಾವಧಿಯುದ್ದಕ್ಕೂ ಹೊರೆಯಾಗುತ್ತವೆ. (ಮಾರಾಟ ಮಾಡಲು ಅವಕಾಶವಿಲ್ಲದಿರುವ ಸಂದರ್ಭದಲ್ಲಿ). ಹೀಗಾಗಿ ರೈತರ ಕೃಷಿ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಕೊನೆಗಿದು ಕೃಷಿಯ ಅವಸಾನದಲ್ಲಿ ಅಂತ್ಯವಾಗುತ್ತದೆ.

ಹೀಗಾಗಿ, ಗೋವುಗಳನ್ನು ಕೇವಲ ಹೈನುಗಾರಿಕೋತ್ಪನ್ನಗಳ ಮೂಲಾಧಾರ ಎಂದು ಪರಿಗಣಿಸುವ ಮೂಲಕ ಗೋಹತ್ಯೆ ನಿಷೇಧವನ್ನು ತೆರವುಗೊಳಿಸಬೇಕಿದೆ. ಇದರಿಂದ ಗ್ರಾಮೀಣ ಭಾರತದ ಆರ್ಥಿಕತೆ ಮಾತ್ರವಲ್ಲದೆ, ದೇಶದ ಆರ್ಥಿಕತೆ ಮತ್ತು ಪೌಷ್ಟಿಕತೆಯೂ ಆರೋಗ್ಯಕರ ಪ್ರಮಾಣದಲ್ಲಿ ವೃದ್ಧಿಸಲಿದೆ. ಇಲ್ಲವಾದರೆ, Cow Belt ಎಂದೇ ಕುಖ್ಯಾತವಾಗಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಬಿಹಾರ್, ಛತ್ತೀಸ್‌ಗಢದಂಥ ರಾಜ್ಯಗಳಲ್ಲೇ ಗೋಹತ್ಯೆ ನಿಷೇಧದ ವಿರುದ್ಧ ದೊಡ್ಡ ಮಟ್ಟದ ಆಂದೋಲನ ಪ್ರಾರಂಭವಾದರೂ ಅಚ್ಚರಿಯಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ...

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ಬಾಲ್ಯವಿವಾಹ | ಕರ್ನಾಟಕಕ್ಕೆ 2ನೇ ಸ್ಥಾನ: ನಾಚಿಕೆಗೇಡಿನ ಸಂಗತಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ಅತಿ ಹೆಚ್ಚು...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...