ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು 2016ರ ಜೂನ್ 15ರಂದು ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕೈವಾಡವಿದೆ ಎಂದು ಆರೋಪಿಸಿತ್ತು. ವಿನಯ್ ಅವರನ್ನು ಬಂಧಿಸಲಾಗಿತ್ತು.
9 ತಿಂಗಳು ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆರೋಪಿ ಪ್ರಭಾವಿಯಾಗಿದ್ದರಿಂದ ಸಾಕ್ಷ್ಯ ನಾಶ ಮಾಡುವ ಮತ್ತು ಸಾಕ್ಷಿಗಳು ಹಾಗೂ ಸಂತ್ರಸ್ತರಿಗೆ ಬೆದರಿಕೆ ಹಾಕುವ ಸಾಧ್ಯತೆಗಳಿವೆ ಎಂಬ ಕಾರಣಕ್ಕಾಗಿ, ಅವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಕೋರ್ಟ್ ನಿರ್ಬಂಧ ಹೇರಿತ್ತು.
ನಿರ್ಬಂಧದ ನಡುವೆಯೂ ಧಾರವಾಡದಲ್ಲಿ ಸ್ಪರ್ಧಿಸಿದ್ದ ವಿನಯ್ ಪ್ರಚಾರಕ್ಕಾಗಿ ಕ್ಷೇತ್ರ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ವಿನಯ್ ಅವರ ಪತ್ನಿ ಮತ್ತು ಕಾಂಗ್ರೆಸ್ ಮುಖಂಡರು ಪ್ರಚಾರ ನಡೆಸಿದ್ದರು. ವಿನಯ್ ಚುನಾವಣೆಯಲ್ಲಿ ಗೆದ್ದು, ಶಾಸಕರಾಗಿದ್ದಾರೆ.
ಇದೀಗ, ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ, ಸಾಕ್ಷ್ಯಗಳ ವಿಚಾರಣೆಯನ್ನು ಶೀಘ್ರವೇ ಪೂರ್ಣಗೊಳಿಸಲು ಸಿಬಿಐಗೆ ಸೂಚನೆ ನೀಡಿದೆ.