ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ಯ ಕೇಳಿಬರುತ್ತಿರುವ ಸಚಿವ ಸಂಪುಟ ಪುನಾರಚನೆಯ ಕುರಿತಾದ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿವೆ. ಸರ್ಕಾರದೊಳಗಿನ ಆಂತರಿಕ ಕಲಹವನ್ನು ಸಾರಾಸಗಟಾಗಿ ಮೇ ತಿಂಗಳಲ್ಲಿ ಆಗುವ ಸಂಭಾವ್ಯ ಬದಲಾವಣೆಯ ಗಾಳಿ ಹೊತ್ತು ತರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುತ್ತಲೇ, ಆಡಳಿತ ಪಕ್ಷದ ಒಳಗೆ ನಾಯಕತ್ವ ಮತ್ತು ಮಂತ್ರಿಗಿರಿಗಾಗಿನ ಹಗ್ಗಜಗ್ಗಾಟ ಬೀದಿಗೆ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್‌ನಲ್ಲಿನ ಬದಲಾವಣೆ ʼತೋಳ ಬಂತು ತೋಳʼ ಕಥೆಯಂತೆಯೇ ಆಗಿತ್ತೆನ್ನುವುದು ಇಲ್ಲಿ ಉಲ್ಲೇಖನೀಯ. ಈಗ ಮೂರು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಸಚಿವ ಸಂಪುಟ ಬದಲಾವಣೆಗೆ ಕಾಂಗ್ರೆಸ್ ಶಾಸಕರಿಂದಲೇ ಒತ್ತಾಯ ಕೇಳಿ ಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರ ದೆಹಲಿ ಭೇಟಿ ಮತ್ತು ಹೈಕಮಾಂಡ್ ನಾಯಕರೊಂದಿಗಿನ ಚರ್ಚೆ, ಲಾಬಿ ಎಲ್ಲವೂ ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ, “ನಾನು ಮತ್ತು ಸಿಎಂ ಇಬ್ಬರೂ ಹೈಕಮಾಂಡ್ ಹೇಳಿದಂತೆ ಕೇಳಬೇಕು” ಎನ್ನುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀಡಿದ ಹೇಳಿಕೆ ಮಾರ್ಮಿಕವಾಗಿದೆ. ಮತ್ತೆ ಅವರು ಹೈಕಮಾಂಡ್ ಅಸ್ತ್ರವನ್ನು ಮುಂದಿಟ್ಟಿದ್ದಾರೆ. ಅಧಿಕಾರ ಹಂಚಿಕೆ ಅಥವಾ ಮುಂದಿನ ನಿರ್ಧಾರಗಳು ಸಂಪೂರ್ಣವಾಗಿ ದೆಹಲಿ ನಾಯಕರ ಕೈಯಲ್ಲಿದೆ ಎಂದು ಹೇಳುವ ಮೂಲಕ ಅವರು ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.
ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರ ‘ತ್ಯಾಗದ ಮಂತ್ರ’ವೂ ಈಗ ಕುತೂಹಲಕ್ಕೆ ಕಾರಣವಾಗಿದೆ. ಹಿರಿಯರು ಸ್ಥಾನ ಬಿಟ್ಟುಕೊಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ದಿನೇಶ್ ಗುಂಡೂರಾವ್ ಅವರ ಮಾತು, ಸಂಪುಟ ಬದಲಾವಣೆಯ ಬೇಡಿಕೆಗೆ ಮತ್ತಷ್ಟು ಬಲ ತುಂಬಿದೆ. ಇದು ಹಿರಿಯ ಸಚಿವರಲ್ಲಿ ಒಂದು ರೀತಿಯ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ.
ಇನ್ನು, “ಮೇ ತಿಂಗಳಲ್ಲಿ ಹೈಕಮಾಂಡ್‌ನಿಂದ ಒಳ್ಳೆಯ ಸುದ್ದಿ ಬರಲಿದೆ” ಎಂದು ಹೇಳುವ ಮೂಲಕ ಶಾಸಕ ಅಶೋಕ್ ಪಟ್ಟಣ ಅವರು ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ಇದು ಹೊಸಬರಿಗೆ ಮಂತ್ರಿ ಸ್ಥಾನ ಸಿಗುವ ಆಶಯವೋ ಅಥವಾ ನಾಯಕತ್ವದ ಬದಲಾವಣೆಯ ಸೂಚನೆಯೋ ಎಂಬ ಕುತೂಹಲ ಕೆರಳಿಸಿದೆ.
ಇನ್ನು, ಕಾಂಗ್ರೆಸ್ ಪಕ್ಷದೊಳಗಿನ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಪ್ರಮುಖ ಆಯಾಮಗಳು ಗೋಚರಿಸುತ್ತಿವೆ. ಮೊದಲನೆಯದ್ದು, ಅತೃಪ್ತ ಶಾಸಕರ ಒತ್ತಡ. ಅಧಿಕಾರಕ್ಕೆ ಶ್ರಮಿಸಿದ ಅನೇಕ ಶಾಸಕರು ಈಗ ಮಂತ್ರಿ ಸ್ಥಾನಕ್ಕಾಗಿ ಹಠ ಹಿಡಿದಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಬದಲಾವಣೆ ಖಚಿತ ಎಂಬ ಅವರ ನಂಬಿಕೆ ಫಲಿಸಲಿಲ್ಲ. ಹೈಕಮಾಂಡ್ ಒಂದಲ್ಲಾ ಒಂದು ನೆಪ ಹೇಳಿ ಮುಂದೂಡುತ್ತಲೇ ಬಂದಿದ್ದು, ಭ್ರಮನಿರಸನಕ್ಕೆ ಕಾರಣವಾಗಿದೆ. ಸರ್ಕಾರದ ಅಧಿಕಾರವಧಿ ಇನ್ನು ಎರಡು ವರ್ಷಗಳು ಮಾತ್ರ ಬಾಕಿ ಇವೆ. ಈ ಸಂದರ್ಭವೇ ಬದಲಾವಣೆಗೆ ಸೂಕ್ತ ಎಂದು ಪಟ್ಟು ಹಿಡಿದಿದ್ದಾರೆ.
ಎರಡನೆಯದ್ದು ಅಧಿಕಾರ ಹಂಚಿಕೆಯ ಸೂತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ತೆರೆಯ ಮರೆಯಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಮೇ ತಿಂಗಳ ‘ಒಳ್ಳೆಯ ಸುದ್ದಿ’ ಇದರ ಭಾಗವೇ ಎಂಬ ಸಂಶಯ ದಟ್ಟವಾಗಿದೆ.
ಇದನ್ನೂ ಓದಿ : ಅಹಿಂದ ನಾಯಕತ್ವ: ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗಬಲ್ಲರೇ?
ಮೂರನೆಯದ್ದು ಹೈಕಮಾಂಡ್ ಮೌನಕ್ಕೆ ಅಂತಿಮ ಚುಕ್ಕಿ. ಸದ್ಯದ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮೌನ ತಳೆದರೆ ಅದು ಸಮ್ಮತಿಯೋ ಅಥವಾ ಅಸಹಾಯಕತೆಯೋ ಎಂಬ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ, ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಹೈಕಮಾಂಡ್ ಮೌನವನ್ನು ಹೇಗಾದರೂ ಮಾಡಿ ಮುರಿಯಲೇ ಬೇಕು ಎಂಬಂತೆ ನಾಯಕರು ಮತ್ತೆ ಬೇಡಿಕೆ ಮುಂದಿಡುತ್ತಿದ್ದಾರೆ ಎಂಬಂತೆ ಕಾಣಿಸುತ್ತಿದೆ.
ಸದ್ಯ, ಕಾಂಗ್ರೆಸ್ ಹೈಕಮಾಂಡ್ ಪಂಚರಾಜ್ಯ ಚುನಾವಣಾ ಫಲಿತಾಂಶದ ಮೇಲೆ ಕಣ್ಣಿಟ್ಟಿದೆ. ಇನ್ನುಳಿದ ಎರಡು ವರ್ಷಗಳ ಆಡಳಿತವಾಧಿಯಲ್ಲಿ ಯಶಸ್ವಿಯಾಗಿ ಆಡಳಿತ ಯಂತ್ರವನ್ನು ಮುಂದೆ ಸಾಗಿಸುವುದರ ಜೊತೆಗೆ 2028ರ ವಿಧಾನಸಭಾ ಚುನಾವಣೆಗೆ ಪೂರಕವಾಗುವ ಎಲ್ಲಾ ತಯಾರಿಯನ್ನು ಈ ʼಬದಲಾವಣೆʼಯ ಮೂಲಕ ಮಾಡಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಹೈಕಮಾಂಡ್ ಗೆ ಇದೆ.
ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಹೈಕಮಾಂಡ್ ಮುಂದಿರುವ ದೊಡ್ಡ ಸವಾಲು.
ಸದ್ಯಕ್ಕೆ ಮೇ ತಿಂಗಳ ‘ಸಿಹಿ ಸುದ್ದಿ’ ಯಾರಿಗೆ ಸಿಹಿಯಾಗಲಿದೆ ಮತ್ತು ಯಾರಿಗೆ ಕಹಿಯಾಗಲಿದೆ ಎನ್ನುವುದೇ ಕುತೂಹಲವಾಗಿದೆ.




