ಆಂಧ್ರಪ್ರದೇಶದಲ್ಲಿ ಜಾತಿ ತಾರತಮ್ಯಕ್ಕೆ ದಲಿತ ಸರ್ಕಾರಿ ವೈದ್ಯರ ಬಲಿ

Date:

ಆಂಧ್ರಪ್ರದೇಶದ ದಲಿತ ಸರ್ಕಾರಿ ವೈದ್ಯರು ಕಾರ್ಯಪರಿಸರದಲ್ಲಿ ಜಾತಿವಾದದ ಜೊತೆಗೆ ಮೇಲಧಿಕಾರಿಗಳ ಸ್ವಜನಪಕ್ಷಪಾತಕ್ಕೆ ಬಲಿಯಾಗುತ್ತಿದ್ದಾರೆ. ಒಬ್ಬ ವೈದ್ಯ ಕೊಲೆಯಾಗಿದ್ದು, ಮತ್ತೊಬ್ಬ ವೈದ್ಯರ ವೃತ್ತಿ ಜೀವನವೇ ಇದರಿಂದ ನಾಶವಾಗಿರುವುದು ಬೆಳಕಿಗೆ ಬಂದಿದೆ

ಕಳೆದ ವರ್ಷ ಆಂಧ್ರಪ್ರದೇಶದ ಪಶುಸಂಗೋಪನಾ ಇಲಾಖೆಯ ವೈದ್ಯ ಡಾ ಅಚ್ಚಣ್ಣ ತಮ್ಮ ಕಾರ್ಯಪರಿಸರದಲ್ಲಿ ಆಗುತ್ತಿರುವ ಜಾತಿ ತಾರತಮ್ಯ ಮತ್ತು ದುರಾಡಳಿತದ ಬಗ್ಗೆ ಅನೇಕ ಪ್ರಾಧಿಕಾರಗಳಿಗೆ ದೂರು ನೀಡಿದ್ದರು. ಆದರೆ, ಸಂಬಂಧಪಟ್ಟವರು ಅವರ ಸಹೋದ್ಯೋಗಿಗಳ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ, ಅವರಲ್ಲೇ ಒಬ್ಬರಿಂದ ಕೊಲೆಯಾಗಿದ್ದಾರೆ.

ದಲಿತ ಸಮುದಾಯದ ಡಾ ಅಚ್ಚಣ್ಣ ಆಂಧ್ರಪ್ರದೇಶ ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದ ಪಶುವೈದ್ಯರು. ಅವರು ನಿಯಮಗಳಿಗೆ ಬದ್ಧರಾಗಿರದೇ ಇದ್ದಲ್ಲಿ ಇಂದು ಜೀವಂತವಾಗಿರುತ್ತಿದ್ದರು. ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರೂ ಆಗಿದ್ದ ಮಾಲಾ ಪರಿಶಿಷ್ಟ ಜಾತಿಯ 58 ವರ್ಷದ ವೈದ್ಯರು ಮಾರ್ಚ್ 12ರಂದು ಕ್ರೂರವಾಗಿ ಕೊಲೆಯಾಗಿದ್ದಾರೆ. ಡಾ ಅಚ್ಚಣ್ಣ ನಿವೃತ್ತಿಯಾಗಲು ನಾಲ್ಕು ವರ್ಷಗಳಷ್ಟೇ ಬಾಕಿ ಇದ್ದವು.

ಪಶುಸಂಗೋಪನಾ ಇಲಾಖೆಯ ಬಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ ತಂಡದವರು ಅಚ್ಚಣ್ಣ ಅವರನ್ನು ಅಪಹರಿಸಿ ಒತ್ತಡಪೂರ್ವಕ ಮದ್ಯಪಾನ ಮಾಡಿಸಿ ಗುಡ್ಡದಿಂದ ಕೆಳಕ್ಕೆ ನೂಕಿರುವ ಆರೋಪವಿದೆ. ಅಚ್ಚಣ್ಣ ಕಣ್ಮರೆಯಾಗಿರುವ ಬಗ್ಗೆ ವರದಿಯಾದ ಎರಡು ವಾರಗಳ ನಂತರ ಕಡಪ ಪೊಲೀಸರು ಆರೋಪಿ ಬೋಸ್‌ನನ್ನು ಬಂಧಿಸಿದ್ದಾರೆ. ಅಚ್ಚಣ್ಣನವರು ಬೋಸ್ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಿದ್ದೇ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.

ಆದರೆ ಅಚ್ಚಣನವರ ಸಹೋದ್ಯೋಗಿಗಳು, ಕುಟುಂಬದವರು ಹಾಗೂ ಜಾತಿವಿರೋಧಿ ಕಾರ್ಯಕರ್ತರ ಪ್ರಕಾರ ಬೋಸ್‌ ಜೊತೆಗಿನ ವಿವಾದ ಕೊಲೆಗೆ ಒಂದು ಕಾರಣವಷ್ಟೇ, ಸಂಸ್ಥೆಯಲ್ಲಿ ದಲಿತ ಸರ್ಕಾರಿ ಉದ್ಯೋಗಿಯಾಗಿ ವೈದ್ಯರು ದೊಡ್ಡ ಪ್ರಮಾಣದ ಜಾತಿವಾದಕ್ಕೆ ಎರವಾಗಿದ್ದಾರೆ.

ಅಚ್ಚಣ್ಣ ಕೊಲೆಗೆ ಮೊದಲು ಯುಟ್ಯೂಬ್ ವಾಹಿನಿಯೊಂದಕ್ಕೆ ಫೆಬ್ರವರಿಯಲ್ಲಿ ನೀಡಿದ ಸಂದರ್ಶನದಲ್ಲಿ, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ಆಂಧ್ರಪ್ರದೇಶದಲ್ಲಿ ಸರಿಯಾಗಿ ಅಳವಡಿಸಲಾಗಿಲ್ಲ. ಮುಖ್ಯವಾಗಿ ಕಡಪದಲ್ಲಿ ಪೊಲೀಸರು ಮತ್ತು ಕಾನೂನು ವ್ಯವಸ್ಥೆ ಸಮರ್ಪಕವಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಮೇಲ್ಜಾತಿಯ ಉದ್ಯೋಗಿಗಳನ್ನು ಭಿನ್ನವಾಗಿ ಕಾಣಲಾಗುತ್ತದೆ. ಅಧಿಕಾರಿಗಳು ಅಂಬೇಡ್ಕರ್ ಮತ್ತು ಫುಲೆ ಅವರ ಸಿದ್ಧಾಂತಗಳನ್ನು ಎತ್ತಿಹಿಡಿಯಬೇಕು ಮತ್ತು ದಲಿತರು ಮತ್ತು ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕು” ಎಂದು ಹೇಳಿದ್ದಾರೆ.

ತಮ್ಮ ಸಹೋದ್ಯೋಗಿಗಳಿಂದ ಜಾತಿ ತಾರತಮ್ಯ ಎದುರಿಸಿದ್ದಾಗಿಯೂ ಮತ್ತು ಇಲಾಖೆಯ ಮೇಲಧಿಕಾರಿಗಳಿಗೆ ಪದೆ ಪದೇ ದೂರು ನೀಡಿದರೂ ಪರಿಗಣಿಸಿಲ್ಲ ಎಂದು ಅವರು ಹೇಳಿದ್ದರು. ತಮ್ಮ ಸಂದರ್ಶನದಲ್ಲಿ, “ಪೊಲೀಸರು ಮತ್ತು ಜಿಲ್ಲಾ ಪರಿಶಿಷ್ಟ ಜಾತಿ ಆಯೋಗ, ಹಾಗೂ ಲೋಕಾಯಕ್ತದಲ್ಲಿ ದೂರು ಆಲಿಸದೆ ಇದ್ದರೂ, ಕಡಪದ ಉದ್ಯೋಗ ತೊರೆಯಲು ನನಗೆ ಒತ್ತಡವಿದೆ” ಎಂದು ಹೇಳಿದ್ದರು.

 “ಮೇಲಧಿಕಾರಿಗಳು ಅಚ್ಚಣ್ಣರ ದೂರನ್ನು ಆಲಿಸಿದ್ದರೆ, ಅವರು ಕೊಲೆಯಾಗುತ್ತಿರಲಿಲ್ಲ” ಎಂದು ಅವರ ಮಗ ಕ್ಲಿಂಟನ್ ಮಾಧ್ಯಮಗಳ ಮುಂದೆ ಬೇಸರಿಸಿದ್ದಾರೆ. ಅಚ್ಚಣ್ಣ ಕಣ್ಮರೆಯಾದ ಬಗ್ಗೆ ಆಂಧ್ರ ಹೈಕೋರ್ಟ್‌ನಲ್ಲಿ ಅವರ ಪತ್ನಿ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ, “ಪತಿ ಕಣ್ಮರೆಯಾದ ಮೂರು ದಿನಗಳ ನಂತರ ಪಶು ಸಂಗೋಪನಾ ಇಲಾಖೆಯಿಂದ ಅವರ ಅಮಾನತಿನ ಆದೇಶ ಮನೆಗೆ ತಲುಪಿದೆ” ಎಂಬ ವಿವರವಿದೆ.

ಅಚ್ಚಣ್ಣ ಕೊಲೆಯ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಆಂಧ್ರಪ್ರದೇಶ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಎಂ ವಿಕ್ಟರ್ ಪ್ರಸಾದ್, ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಂತಹ ಪ್ರಕರಣ ನಡೆದಿಲ್ಲ ಎಂದು ಹೇಳಿದ್ದಾರೆ. “ಜಿಲ್ಲಾ ಮಟ್ಟದ ಸರ್ಕಾರಿ ಉದ್ಯೋಗಿ ಹೀಗೆ ಕೊಲೆಯಾಗಿದ್ದು ಹಿಂದೆಂದೂ ನಡೆದಿಲ್ಲ. ಡಾ ಅಚ್ಚಣ್ಣ ಪೊಲೀಸರಿಗೆ ಮತ್ತು ತಮ್ಮ ಇಲಾಖೆಗೆ ಬೆದರಿಕೆ ಇರುವ ಬಗ್ಗೆ ದೂರು ನೀಡಿದ್ದರು. ನಮಗೂ ಅರ್ಜಿ ಬಂದಿತ್ತು. ಆದರೆ ಅವರ ದೂರನ್ನು ಅಲಕ್ಷಿಸಲಾಗಿದೆ” ಎಂದಿದ್ದಾರೆ. ಅಚ್ಚಣ್ಣರ ದೂರುಗಳನ್ನೇ ಸಾಕ್ಷ್ಯವನ್ನಾಗಿಸಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಅಂಬೇಡ್ಕರ್‌ವಾದಿಯಾಗಿದ್ದ ಅಚ್ಚಣ್ಣನವರು ಸಹೋದ್ಯೋಗಿಗಳ “ಭ್ರಷ್ಟಾಚಾರದ ಬಗ್ಗೆ ಕುರುಡಾಗಿರಿ” ಎನ್ನುವ ಸಲಹೆಯನ್ನು ಸ್ವೀಕರಿಸಿರಲಿಲ್ಲ ಎಂದು ಪಶುಸಂಗೋಪನಾ ಇಲಾಖೆ ಸಿಬ್ಬಂದಿ ಒಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ. ಅವರು ತಮ್ಮ 33 ವರ್ಷಗಳ ಸೇವೆಯಲ್ಲಿ ಕೊನೆಯ ಉಸಿರಿರುವವರೆಗೂ ಕಾನೂನು ಪ್ರಕ್ರಿಯೆಯ ಮೂಲಕ ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದರು.

ತಮ್ಮ ಸಂದರ್ಶನವೊಂದರಲ್ಲಿ, ಅಚ್ಚಣ್ಣನವರು ತಮ್ಮ ಕ್ಲಿನಿಕ್‌ನ ಸಹೋದ್ಯೋಗಿಗಳಿಂದ ಜಾತಿ ತಾರತಮ್ಯ ಎದುರಿಸುತ್ತಿರುವ ಬಗ್ಗೆ ಮಾತನಾಡಿದ್ದರು. “ದಲಿತ ಉದ್ಯೋಗಿಯಾಗಿ ನನ್ನ ದೂರುಗಳನ್ನು ಹಿಡಿದು ಒಂದು ವರ್ಷದಿಂದ ತಿರುಗಾಡುತ್ತಿದ್ದೇನೆ. ಆದರೆ ಕಡಪ ಜಿಲ್ಲಾ ಪಶು ಸಂಗೋಪನಾ ಅಧಿಕಾರಿ (ಶಾರದಮ್ಮ), ರಾಜ್ಯ ಇಲಾಖೆ ನಿರ್ದೇಶಕರು (ಅಮರೇಂದ್ರ ಕುಮಾರ್‌) ಪ್ರತಿಕ್ರಿಯಿಸಿಲ್ಲ. ಇಲಾಖೆಯಲ್ಲಿ ಸ್ವಜನಪಕ್ಷಪಾತ ಮತ್ತು ಜಾತಿ ತಾರತಮ್ಯವಿದೆ. ನಾನು ದಲಿತ ಎನ್ನುವ ಕಾರಣದಿಂದ ಇದನ್ನು ಮಾಡುತ್ತಿದ್ದಾರೆ. ರಾಜ್ಯ ಪಶುಸಂಗೋಪನಾ ಇಲಾಖೆ ನಿರ್ದೇಶಕರಾದ ಅಮರೇಂದ್ರ ಕುಮಾರ್ ಒಂದು ಜನಪ್ರಿಯ ಸಮುದಾಯವನ್ನು ಮಾತ್ರವೇ ಪ್ರೋತ್ಸಾಹಿಸುತ್ತಾರೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರನ್ನು ಪರಿಗಣಿಸುವುದಿಲ್ಲ” ಎಂದು ಹೇಳಿದ್ದರು.

ಅಮರೇಂದ್ರ ಕುಮಾರ್ ಕಾಪು ಸಮುದಾಯಕ್ಕೆ ಸೇರಿದವರು. ಅಚ್ಚಣ್ಣರವರ ಕೊಲೆ ಆರೋಪಿ ಬೋಸ್ ಕೂಡ ಅದೇ ಕಾಪು ಸಮುದಾಯದವರು. ಮಾರ್ಚ್ 12ರಂದು ಬೋಸ್‌ ನೇಮಕಾತಿಯ ಬಗ್ಗೆ ಸ್ವಜನಪಕ್ಷಪಾತವಾಗಿದೆ ಎಂದು ಅರ್ಹತೆಗಳನ್ನು ಪ್ರಶ್ನಿಸಿ ದೂರು ಸಲ್ಲಿಸಿದ ನಂತರ ಅಚ್ಚಣ್ಣ ಕಣ್ಮರೆಯಾಗಿದ್ದರು. ಮಾರ್ಚ್ 14ರಂದು ಅಚ್ಚಣ್ಣ ಅವರ ಕುಟುಂಬದವರು ಬೋಸ್ ಸೇರಿದಂತೆ ಐವರ ಮೇಲೆ ದೂರು ಸಲ್ಲಿಸಿದ್ದರು. ಮಾರ್ಚ್ 24ರಂದು ಅಚ್ಚಣ್ಣ ಅವರ ಮೃತದೇಹ ಪತ್ತೆಯಾದ ನಂತರ ಬೋಸ್‌ ಅವರನ್ನು ಬಂಧಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಅಚ್ಚಣ್ಣನವರ ಕುಟುಂಬ ನ್ಯಾಯಾಲಯ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿದೆ. ಜಾತಿವಿರೋಧಿ ಸಂಘಟನೆಗಳೂ ಜೊತೆಗೂಡಿ ನ್ಯಾಯಕ್ಕಾಗಿ ಹೋರಾಡುತ್ತಿವೆ. ಇತ್ತೀಚೆಗೆ ಏಪ್ರಿಲ್ 22ರಂದು ಅನೇಕರು ವಿಜಯವಾಡದಲ್ಲಿ ಜೊತೆಗೂಡಿ ‘ಡಾ ಅಚ್ಚಣ್ಣ ನ್ಯಾಯ ಪೋರಾಟ ಸಮಿತಿ’ ರಚಿಸಿ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಸಮಿತಿ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಅಚ್ಚಣ್ಣನವರಂತೆ ಮತ್ತೊಬ್ಬ ದಲಿತ ಸಮುದಾಯದ ಸರ್ಕಾರಿ ವೈದ್ಯ ಡಾ ಸುಧಾಕರ್  ಏಪ್ರಿಲ್‌ನಲ್ಲಿ ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ರಕ್ಷಣಾ ಪರಿಕರಗಳ ಕೊರತೆಯನ್ನು ವಿವರಿಸಿದ ವಿಡಿಯೋ ವೈರಲ್ ಆಗಿತ್ತು. ಅದಾದ ಮೇಲೆ ಡಾ ಸುಧಾಕರ್‌ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ತಿಂಗಳ ನಂತರ ವೈದ್ಯರು ರಸ್ತೆಯಲ್ಲಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೂಗಾಡುತ್ತಾ ಗಲಭೆ ಎಬ್ಬಿಸುತ್ತಿದ್ದಾಗ ವಿಶಾಖಪಟ್ಟಣ ಪೊಲೀಸರು ಎಳೆದಾಡುತ್ತಾ, ಅವಹೇಳನಕಾರಿ ರೀತಿಯಲ್ಲಿ ಬಂಧಿಸಿದ್ದರು. ನಂತರ ಅವರನ್ನು ಮಾನಸಿಕ ರೋಗಿ ಎಂದು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೈಕೋರ್ಟ್ ಆಸ್ಪತ್ರೆಯಿಂದ ಅವರ ಬಿಡುಗಡೆಗೆ ಆದೇಶಿಸಿ, ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಶತಮಾನಗಳಷ್ಟು ಹಿಂದಕ್ಕೆ ಭಾರತವನ್ನು ದೂಡುತಿದ್ದಾರೆ. ಆದರೂ ಅವಿವೇಕಿಗಳು ಇದನ್ನೇ ಮುನ್ನಡೆ ಎನ್ನುತಿದ್ದಾರೆ. ಇದು ವಿಪರ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಆತ ನನ್ನ ಮಗನೇ ಇರಬಹುದು, ಆತನನ್ನು ಗಲ್ಲಿಗೇರಿಸಿ’: ಅತ್ಯಾಚಾರ ಆರೋಪಿಯ ತಂದೆ

ಆತ ನನ್ನ ಮಗನಾಗಿರಬಹುದು. ಆದರೆ, ಆತ ಅಪರಾಧಿ. ಆತನನ್ನು ಗಲ್ಲಿಗೇರಿಸಿ ಎಂದು...

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...

‘ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ’ ಇದು ರಾಜ್ಯ ಸರ್ಕಾರದ ಪರಿಸ್ಥಿತಿ: ಈಶ್ವರಪ್ಪ ಲೇವಡಿ

ಡಿಕೆ ಶಿವಕುಮಾರ್‌ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ ನೀರು ಬಿಡುವುದಕ್ಕಿಂತ ಮೊದಲೇ...

ವಿಶೇಷಚೇತನ ಯೋಧರ ಹೊಸ ಪಿಂಚಣಿ ಯೋಜನೆ; ಮೋದಿ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತೊಮ್ಮೆ ಬಯಲು: ಖರ್ಗೆ

ಸಶಸ್ತ್ರ ಪಡೆ ಸಿಬ್ಬಂದಿಗೆ ಹೊಸ ವಿಶೇಷಚೇತನ ಪಿಂಚಣಿ ನಿಯಮಗಳ ಕುರಿತು ಶನಿವಾರ...